

ವಿಜಯವಾಣಿ ಸುದ್ದಿಜಾಲ ಆನೇಕಲ್
ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ಕಂಡಿದ್ದು, ವಿವಿಧ ಕೈಗಾರಿಕೆಗಳಲ್ಲಿ ನವೀನ ಮತ್ತು ಸೃಜನಶೀಲ ಕೌಶಲ ಅನ್ವಯಿಸುವ ಮೂಲಕ ಆರ್ಥಿಕತೆಗೆ ಕೊಡುಗೆ ನೀಡಲಾಗುತ್ತಿದೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಸಚಿವ ಟಿ.ಎನ್.ಶ್ರೀನಿವಾಸ್ ಹೇಳಿದರು.
ಪಟ್ಟಣ ಸಮೀಪದ ಸಾಯಿರಾಮ್ ಕಾಲೇಜ್ ಆ್ ಇಂಜಿನಿಯರಿಂಗ್‌ನಲ್ಲಿ ಹಮ್ಮಿಕೊಂಡಿದ್ದ 23ನೇ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ವಿಶ್ವವಿದ್ಯಾಲಯದಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಅದರ ಫಲವಾಗಿ ಪರೀಕ್ಷೆ ಪೂರ್ಣಗೊಂಡ 10 ದಿನಗಳಲ್ಲಿ ಎಲ್ಲ ಸೆಮಿಸ್ಟರ್‌ಗಳ ಫಲಿತಾಂಶ ಪ್ರಕಟಿಸಲಾಗುತ್ತಿದೆ ಎಂದರು.
ಟಯೋಟ ಇಂಡಸ್ಟ್ರೀಸ್ ಮಾನವ ಸಂಪನ್ಮೂಲ ಅಧಿಕಾರಿ ಬ್ರಿಜೇಂದ್ರ ಷಾ ಮಾತನಾಡಿ, ಕಾರ್ಪೋರೇಟ್ ಸಂಸ್ಥೆಗಳು ವಿಶ್ವವಿದ್ಯಾಲಯಗಳ ಪದವಿ ಜತೆಗೆ ವಿದ್ಯಾರ್ಥಿಗಳಲ್ಲಿ ಕೌಶಲ ನಿರೀಕ್ಷಿಸುತ್ತವೆ. ವೃತ್ತಿ ಜೀವನದಲ್ಲಿ ಉನ್ನತಮಟ್ಟ ತಲುಪಬೇಕಾದರೆ ಪದವೀಧರರು ಕೌಶಲ ಅಳವಡಿಸಿಕೊಳ್ಳಬೇಕು. ನಿರಂತರವಾಗಿ ಅಧ್ಯಯನ ಮಾಡಬೇಕು. ಹೊಸ ಆಲೋಚನೆಗಳಿಗೆ ತಕ್ಕಂತೆ ಸ್ಪಂದಿಸುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದರು.