

ಎನ್.ಆರ್.ಪುರ: ತಾಲೂಕಿನಾದ್ಯಂತ ಹನ್ನೆರಡು ದಿನ ಭಾರಿ ಗಾಳಿ, ಮಳೆ ಅಬ್ಬರಕ್ಕೆ ಎಲ್ಲೆಡೆ ಮರಗಳು ಬಿದ್ದಿದ್ದು, 237 ವಿದ್ಯುತ್ ಕಂಬಗಳು, 5 ಟಿಸಿಗಳು ನೆಲ ಕಚ್ಚಿವೆ. ಹಲವು ಗ್ರಾಮಗಳಲ್ಲಿ ವಿದ್ಯುತ್ ಇಲ್ಲದೆ ಜನ ಪರದಾಡುತ್ತಿದ್ದಾರೆ. ಪಟ್ಟಣದಲ್ಲಿ ಬೆಳಗ್ಗೆಯಿಂದ ರಾತ್ರಿವರೆಗೂ ಆಗಾಗ ವಿದ್ಯುತ್ ಕಡಿತಗೊಳ್ಳುತ್ತಲೇ ಇರುತ್ತದೆ. ಇದರಿಂದ ಅನೇಕ ಮೋಟರ್‌ಗಳು, ವಿದ್ಯುತ್ ಪರಿಕರಗಳು ಹಾನಿಯಾಗುತ್ತಿವೆ.
ಪಟ್ಟಣದಲ್ಲಿ ಸಮರ್ಪಕವಾಗಿ ಒಂದು ಗಂಟೆಯೂ ವಿದ್ಯುತ್ ಇಲ್ಲದೆ ಸರ್ಕಾರಿ ಕಚೇರಿಗಳಲ್ಲಿ, ಮನೆಗಳಲ್ಲಿನ ಇನ್‌ವೋಲ್ಟರ್, ಸೋಲಾರ್ ಇದ್ದರೂ ಅವುಗಳು ಸರಿಯಾಗಿ ಚಾರ್ಜ್ ಆಗದೆ ಮಧ್ಯಾಹ್ನದ ವೇಳೆಗೆ ಸ್ಥಗಿತಗೊಳ್ಳುತ್ತಿದೆ. ಇದರಿಂದ ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ನಾಗರಮಕ್ಕಿ, ಸಿದ್ಧನಕುಡಿಗೆ, ಕಳ್ಳಿಕೊಪ್ಪ, ಮಾಳೂರುದಿಣ್ಣೆ, ಜೈಲ್ ಬಿಲ್ಡಿಂಗ್ ಗ್ರಾಮಗಳಲ್ಲಿ ಟಿಸಿಗಳಿಗೆ ಹಾನಿಯಾಗಿದೆ. ಕಡಹಿನಬೈಲು ಗ್ರಾಪಂ ಶೆಟ್ಟಿಕೊಪ್ಪ ಮುಖ್ಯ ರಸ್ತೆಯಿಂದ ದಾಸನಗದ್ದೆ ಹೋಗುವ ಹಿರೇಬಿಸು ರಸ್ತೆಯಲ್ಲಿ ಗಾಳಿ, ಮಳೆಗೆ ಸೋಮವಾರ ಮರ ಬಿದ್ದು ನಾಲ್ಕು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಮರ ತೆರವುಗೊಳಿಸಿದರು. ಆಡುವಳ್ಳಿ ಗ್ರಾಪಂ ಗಡಿಗೇಶ್ವರ ಸರ್ಕಾರಿ ಶಾಲೆ ಅಡುಗೆ ಕೋಣೆ ಮೇಲೆ ಮರ ಬಿದ್ದು ಹಾನಿಯಾಗಿದೆ. ಮುತ್ತಿನಕೊಪ್ಪ ಗ್ರಾಮದ ರಷಿದಾ ಬೇಗಂ ಎಂಬುವವರ ಮನೆ ಗೋಡೆ ಕುಸಿದಿದೆ.
ಗಾಳಿ, ಮಳೆಯಿಂದಾಗಿ ಹಲವಾರು ಗ್ರಾಮಗಳಲ್ಲಿ ವಿದ್ಯುತ್ ಇಲ್ಲದೆ ಗ್ರಾಹಕರು ಪರದಾಡಿದರು. ವಿದ್ಯುತ್ ಸಮಸ್ಯೆಯಿಂದಾಗಿ ಕುಡಿಯುವ ನೀರಿನ ಸಮಸ್ಯೆಯೂ ಎದುರಾಗಿತ್ತು. ಪ್ರತಿ ದಿನ 1-2 ಗಂಟೆಯಷ್ಟೇ ವಿದ್ಯುತ್ ಇರುತ್ತದೆ. ವಿದ್ಯುತ್ ಬಂದ ತಕ್ಷಣ ಪಂಪ್‌ಸೆಟ್ ಆನ್ ಮಾಡಿ ನೀರು ತುಂಬಿಸಿಕೊಳ್ಳುತ್ತಿದ್ದಾರೆ. ಅನೇಕರು ಮನೆಗಳಿಗೆ ಸೋಲಾರ್, ಇನ್‌ವೋಲ್ಟರ್ ಅಳವಡಿಸಿಕೊಂಡಿದ್ದರೂ ಬಿಸಿಲು ಇಲ್ಲದೆ, ವಿದ್ಯುತ್ ಇಲ್ಲದೆ ಸೋಲಾರ್‌ಗಳು ಹಾಗೂ ಇನ್‌ವೋಲ್ಟರ್ ಕೆಲಸ ಮಾಡುತ್ತಿಲ್ಲ. ಮೊಬೈಲ್ ಚಾರ್ಜ್ ಮಾಡಲೂ ವಿದ್ಯುತ್ ಇಲ್ಲವಾಗಿದೆ. ಮೆಸ್ಕಾಂ ಸಿಬ್ಬಂದಿ ಒಂದೊಂದೇ ಗ್ರಾಪಂ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬ, ತಂತಿ ಸರಿಪಡಿಸಿ ವಿದ್ಯುತ್ ನೀಡುತ್ತಿದ್ದಾರೆ. ಆದರೆ ಗಾಳಿ, ಮಳೆಗೆ ಮತ್ತೆ ಮತ್ತೆ ಮರದ ಕೊಂಬೆಗಳು ಬಿದ್ದು ವಿದ್ಯುತ್ ತಂತಿಗಳು ತುಂಡಾಗುತ್ತಿರುವುದರಿಂದ ಅವರ ಶ್ರಮ ವ್ಯರ್ಥವಾಗುತ್ತಿದೆ.
ಮೆಸ್ಕಾಂಗೆ 30 ಲೈನ್‌ಮ್ಯಾನ್ ಹುದ್ದೆ ಮಂಜೂರಾತಿ ಇದ್ದು, ಇದರಲ್ಲಿ ಕೇವಲ 7 ಲೈನ್‌ಮ್ಯಾನ್‌ಗಳು ಇದ್ದಾರೆ. ಇದರಿಂದ ವಿದ್ಯುತ್ ಸಮಸ್ಯೆ ಬಗೆಹರಿಸಲು ಲೈನ್‌ಮ್ಯಾನ್‌ಗಳು ಹರಸಾಹಸ ಪಡುವಂತಾಗಿದೆ. ಎನ್.ಆರ್.ಪುರ ಮೆಸ್ಕಾಂನಲ್ಲಿ ಸಿಬ್ಬಂದಿ ಕೊರತೆಯಿಂದ ತ್ವರಿತವಾಗಿ ಗ್ರಾಹಕರಿಗೆ ವಿದ್ಯುತ್ ನೀಡಲು ತೊಂದರೆಯಾಗುತ್ತಿದೆ. ಮುತ್ತಿನಕೊಪ್ಪ, ಎನ್.ಆರ್.ಪುರ, ಅಳೇಹಳ್ಳಿವರೆಗೆ 30 ಕಿ.ಮೀ. ವ್ಯಾಪ್ತಿಯಲ್ಲಿ 7 ಲೈನ್‌ಮ್ಯಾನ್‌ಗಳು ಕರ್ತವ್ಯ ನಿರ್ವಹಿಸಬೇಕಾಗಿದೆ. ಕೆಲವು ವರ್ಷಗಳ ಹಿಂದೆ ಮಳೆಗಾಲದಲ್ಲಿ ವಿದ್ಯುತ್ ನಿರ್ವಹಣೆಗಾಗಿ ವಿಶೇಷ ಪಡೆ ಇರುತ್ತಿತ್ತು. ಈಗ ಅದನ್ನು ತೆಗೆದು ಹಾಕಲಾಗಿದೆ. ಮಳೆಗಾಲದಲ್ಲಿ ಸಾಲುಗಟ್ಟಿ ವಿದ್ಯುತ್ ಕಂಬಗಳು ಉರುಳಿದಾಗ ನಿರ್ವಹಣೆಗಾಗಿ ವಿದ್ಯುತ್ ಗುತ್ತಿಗೆದಾರರಿಗೆ ಗುತ್ತಿಗೆ ನೀಡಲಾಗುತ್ತಿತ್ತು. ಆದರೆ ಈಗ ಗುತ್ತಿಗೆದಾರರು ಸಾಕೇಂತಿಕವಾಗಿ ಪ್ರತಿಭಟನೆ ಹಮ್ಮಿಕೊಂಡಿರುವುದರಿಂದ ಯಾರೂ ಗುತ್ತಿಗೆ ಹಿಡಿಯುತ್ತಿಲ್ಲ. ಇದರಿಂದ ಲೈನ್‌ಮ್ಯಾನ್‌ಗಳೇ ಹೊಸ ಕಂಬ ಹಾಕಬೇಕಾಗಿದೆ. ಸರ್ಕಾರ ಈ ಹಿಂದೆ ಇದ್ದ ರೀತಿಯಲ್ಲೇ ಮಳೆಗಾಲದಲ್ಲಿ ವಿದ್ಯುತ್ ನಿರ್ವಹಣೆ ಮಾಡಲು ವಿಶೇಷ ತಂಡ ನೀಡಿದರೆ ಬಾಳೆಹೊನ್ನೂರು, ಎನ್.ಆರ್.ಪುರ, ಮುತ್ತಿನಕೊಪ್ಪ ಮೆಸ್ಕಾಂ ಕಚೇರಿಗಳ ವ್ಯಾಪ್ತಿಯಲ್ಲಿ ತ್ವರಿತಗತಿಯಲ್ಲಿ ಗ್ರಾಹಕರಿಗೆ ವಿದ್ಯುತ್ ನೀಡಬಹುದಾಗಿದೆ ಎನ್ನುತ್ತಾರೆ ಮೆಸ್ಕಾಂ ಅಧಿಕಾರಿಗಳು.