ಬಹುರೂಪಗಳಲ್ಲಿ ಅರಳಿದ ವಿಘ್ನ ನಿವಾರಕ

Ganapa
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.5777778, 0.27746442);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 46;
Published on

ಚಿತ್ರದುರ್ಗ: ಸ್ವರ್ಣಗೌರಿ ಹಾಗೂ ವರಸಿದ್ಧಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು, ಜಿಲ್ಲೆಯ ಎಲ್ಲೆಡೆ ಸಾರ್ವಜನಿಕವಾಗಿ ಪ್ರತಿಷ್ಠಾಪಿಸಲು ಪೆಂಡಾಲ್ ನಿರ್ಮಾಣ ಕಾರ್ಯ ಸೇರಿ ಭರ್ಜರಿಯಾಗಿ ಸಿದ್ಧತೆ ನಡೆಯುತ್ತಿವೆ. ಅಲ್ಲದೆ, ಆಕರ್ಷಕ ಗಣೇಶ ಮೂರ್ತಿಗಳು ತಯಾರಕರ ಕೈಚಳಕದಲ್ಲಿ ಬಹುರೂಪಗಳಲ್ಲಿ ಅರಳಿ ಗಮನ ಸೆಳೆಯುತ್ತಿವೆ.

ನಿಷೇಧದ ನಡುವೆಯೂ ನಗರ ಸೇರಿ ಜಿಲ್ಲೆಯ ಮಾರುಕಟ್ಟೆಗಳಿಗೆ ಹೊರ ರಾಜ್ಯದಿಂದ ಪಿಒಪಿ ಗಣೇಶ ಮೂರ್ತಿಗಳು ಲಗ್ಗೆ ಇಡುವುದು ಪ್ರತಿ ವರ್ಷ ಸಾಮಾನ್ಯವಾಗಿದೆ. ಈ ಸಂಬಂಧ ಅಧಿಕಾರಿಗಳು ಪರಿಶೀಲಿಸಿ, ಕ್ರಮಕ್ಕೆ ಮುಂದಾದರೂ ಕಡಿವಾಣ ಬೀಳುತ್ತಿಲ್ಲ. ಇದರಿಂದ ಪರಿಸರದ ಮೇಲೂ ದುಷ್ಪರಿಣಾಮ ಉಂಟಾಗುತ್ತಿದೆ.

ಗಣೇಶೋತ್ಸವಕ್ಕೂ 2 ತಿಂಗಳು ಮುಂಚಿತವಾಗಿ ಮೂರ್ತಿ ತಯಾರಿಕೆಯಲ್ಲಿ ಕೆಲ ಕುಟುಂಬಗಳು ತೊಡಗಿದ್ದು, ಒಂದಡಿಯಿಂದ 8 ಅಡಿಯವರೆಗೂ ಸಮಿತಿಯವರ ಬೇಡಿಕೆ ಅನುಸಾರ ನಿರ್ಮಿಸಿದ್ದಾರೆ. ಅಂತಿಮ ಸ್ಪರ್ಶ ನೀಡುತ್ತಿದ್ದಾರೆ.

ಜಲಮೂಲಗಳ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡುತ್ತಿದ್ದು, ಈ ಬಾರಿ ಪರಿಸರ ಸ್ನೇಹಿ ಗಣಪನಿಗೂ ಹಿಂದಿಗಿಂತಲೂ ಬೇಡಿಕೆ ಹೆಚ್ಚಿದೆ.

ಶಿವ, ವಿಷ್ಣು, ಕೃಷ್ಣ ಅವತಾರವೂ ಸೇರಿ ನಾನಾ ರೂಪದಲ್ಲಿ ಗಣಪನ ಮೂರ್ತಿಗಳು ತಯಾರಾಗಿವೆ. ನಂದಿ, ಸಿಂಹ, ಆನೆ ವಾಹನ ಒಳಗೊಂಡು ವಿಶಿಷ್ಟ ರೀತಿಯಲ್ಲಿ ಕಂಗೊಳಿಸುತ್ತಿವೆ. ಪೇಟಾ ಸುತ್ತಿರುವ ಗಣಪನ ಟ್ರೆಂಡ್ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.

ಗಣೇಶೋತ್ಸವ ವೇಳೆ ಸತತ 35 ವರ್ಷಗಳಿಂದಲೂ ಕೋಟೆನಗರಿಯಲ್ಲಿ ಮೂರ್ತಿ ತಯಾರಿಸುತ್ತಿರುವ ಎಚ್.ಡಿ.ಪುರದ ನಾಗರಾಜಪ್ಪ ‘ವಿಜಯವಾಣಿ’ಯೊಂದಿಗೆ ಅನಿಸಿಕೆ ಹಂಚಿಕೊಂಡಿದ್ದಾರೆ.

250 ಗಣೇಶ ಮೂರ್ತಿಗಳನ್ನು ಈ ಬಾರಿ ತಯಾರಿಸಿದ್ದೇವೆ. 50 ಗೌರಮ್ಮ, 60 ವರ್ಣರಹಿತ ಸಣ್ಣ ಗಣೇಶಗಳು ಲಭ್ಯವಿವೆ. ಅದರಲ್ಲಿ ಬಹುತೇಕ ಮುಂಗಡ ಕಾಯ್ದಿರಿಸಿದ್ದಾರೆ. 500 ರೂ.ನಿಂದ ಆರಂಭವಾಗಿ 30 ಸಾವಿರ ರೂ.ವರೆಗೂ 1 ಅಡಿಯಿಂದ 7 ಅಡಿವರೆಗಿನ ಮೂರ್ತಿಗಳು ನಮ್ಮ ಬಳಿ ಇವೆ ಎನ್ನುತ್ತಾರೆ ಅವರು.

ಸಮಿತಿಯವರು ಫೋಟೋ ತೋರಿಸಿ, ಅದೇ ಮಾದರಿಯಲ್ಲೇ ತಯಾರಿಸಿಕೊಡುವಂತೆ ಬೇಡಿಕೆ ಇಡುತ್ತಾರೆ. ಆ ರೀತಿ ಶೇ 75ರಷ್ಟು ಗಣಪತಿಗಳಿವೆ. ಎಚ್.ಡಿ.ಪುರದಿಂದ ಜೇಡಿಮಣ್ಣನ್ನು ತಂದು ಹದಗೊಳಿಸಿದ ನಂತರ ಮೂರ್ತಿ ತಯಾರಿಸುತ್ತೇವೆ. ನಮ್ಮ ಬಳಿ ಯಾವುದೇ ಪಿಒಪಿ ಮೂರ್ತಿಗಳಿಲ್ಲ ಎಂದು ತಿಳಿಸಿದ್ದಾರೆ.

ಪತ್ನಿ ಗಿರಿಜಮ್ಮ, ಪುತ್ರರಾದ ಗುರುಮೂರ್ತಿ, ಈರಣ್ಣ, ಸೊಸೆ ಇಂದ್ರಮ್ಮ, ಮೊಮ್ಮಗ ಕಾರ್ತಿಕ್ ಸೇರಿ ಇಡೀ ಕುಟುಂಬ ಮೂರ್ತಿ ತಯಾರಿಸುವಲ್ಲಿ ತೊಡಗಿಕೊಂಡಿದ್ದಾರೆ. ಈ ಬಾರಿಯೂ ಅತ್ಯಾಕರ್ಷಕವಾದ ಗಣಪನನ್ನು ತಯಾರಿಸಿದ್ದಾರೆ. ಕೆಲ ಕುಟುಂಬಗಳಿಗೆ ಇದು ಕುಲಕಸುಬು ಹೌದು. ಪಿಒಪಿ ಹಾವಳಿ ನಡುವೆಯೂ ಮಣ್ಣಿನ ಮೂರ್ತಿಗಳಿಗೆ ಬೇಡಿಕೆ ಇರುವುದಕ್ಕೆ ಪ್ರತಿ ವರ್ಷ ತಯಾರಿಕೆಯಲ್ಲಿ ತೊಡಗುವ ಕುಟುಂಬಗಳೇ ಉತ್ತಮ ನಿದರ್ಶನ.

ಪಿಒಪಿ ಗಣೇಶ ನಿಷೇಧ: ಭಾರಲೋಹ ಮಿಶ್ರಿತ, ರಾಸಾಯನಿಕಯುಕ್ತ ಬಣ್ಣ ಲೇಪಿತ, ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ (ಪಿಒಪಿ) ತಯಾರಿಸಿದ ವಿಗ್ರಹಗಳ ಮಾರಾಟ ಹಾಗೂ ಜಲಮೂಲಗಳಲ್ಲಿ ವಿಸರ್ಜಿಸುವುದನ್ನು ಸಂರ್ಪೂಣವಾಗಿ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ. ಈ ಆದೇಶ ಉಲ್ಲಂಘಿಸಿದ್ದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದ್ದಾರೆ.

ನಿಷೇಧಿತ ಪ್ಲಾಸ್ಟಿಕ್ ಬಳಸುವಂತಿಲ್ಲ: ಸಾರ್ವಜನಿಕ ಗಣೇಶೋತ್ಸವದಲ್ಲಿ ಚಪ್ಪರಕ್ಕೂ ಪರಿಸರ ಸ್ನೇಹಿ ವಸ್ತುಗಳನ್ನೇ ಬಳಸಬೇಕು. ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಬಳಕೆ ಮಾಡಬಾರದು ಎಂಬುದಾಗಿ ಜಿಲ್ಲಾಡಳಿತದ ಸೂಚನೆ ಇದೆ.

ರಾತ್ರಿ 10ರಿಂದ 6ರವರೆಗೂ ನಿಷೇಧ: ಶಬ್ದ ಮಾಲಿನ್ಯ (ನಿರ್ಬಂಧ ಮತ್ತು ನಿಯಂತ್ರಣ) ನಿಯಮಾನುಸಾರ ಪ್ರಾಧಿಕಾರದಿಂದ ಲಿಖಿತ ಅನುಮತಿ ಪಡೆಯದ ಹೊರತು ಪೆಂಡಾಲ್‌ಗಳಲ್ಲಿ ಧ್ವನಿವರ್ಧಕ, ವಿದ್ಯುನ್ಮಾನ ಮತ್ತು ಶಬ್ದ ಉಂಟು ಮಾಡುವ ಉಪಕರಣಗಳನ್ನು ಬಳಸಬಾರದು. ಧ್ವನಿವರ್ಧಕಗಳ ಬಳಕೆಯನ್ನು ರಾತ್ರಿ 10ರಿಂದ ಬೆಳಗ್ಗೆ 6ರ ವರೆಗೆ ಸಂರ್ಪೂಣವಾಗಿ ನಿಷೇಧಿಸಲಾಗಿದೆ. ನಿಯಮ ಉಲ್ಲಂಘನೆಯಾದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಡಿಸಿ ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net