

ಮಂಡ್ಯ: ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದಲ್ಲಿ ಲ್ಯಾಪರೊಸ್ಕೋಪಿ ಚಿಕಿತ್ಸೆ ಯಶಸ್ವಿಯಾಗಿ ನಡೆಯುತ್ತಿದೆ. ಈಗಾಗಲೇ 233 ಪ್ರಕರಣದಲ್ಲಿ ಚಿಕಿತ್ಸೆ ನೀಡಲಾಗಿದ್ದು, ಮಹಿಳೆಯರಿಗೆ ದೊಡ್ಡಮಟ್ಟದ ವರದಾನದಂತಾಗಿದೆ. ಮಹಿಳೆಯರಿಗೆ ಗರ್ಭಕೋಶ ಹಾಗೂ ಅಂಡಾಶಯದಲ್ಲಿನ ಸಮಸ್ಯೆಗೆ ಲ್ಯಾಪರೊಸ್ಕೋಪಿ ಮೂಲಕ ಶಸ್ತ್ರಚಿಕಿತ್ಸೆ ನೀಡಲಾಗುತ್ತಿದೆ. 2024 ಜೂ.1ರಿಂದ 2025 ಜು.31ರವರೆಗೆ 233 ಮಹಿಳೆಯರು, ಬಾಲಕಿಯರು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈ ಎಲ್ಲ ಪ್ರಕರಣ ಯಶಸ್ವಿಯಾಗಿರುವುದು ಗಮನಾರ್ಹ. ಬಹುಮುಖ್ಯವಾಗಿ ಈ ಶಸ್ತ್ರಚಿಕಿತ್ಸೆಯಲ್ಲಿ ರೋಗಿ ಬೇಗ ಗುಣಮುಖವಾಗುವುದರ ಜತೆಗೆ ಖಾಸಗಿ ಆಸ್ಪತ್ರೆಗೆ ಲಕ್ಷಾಂತರ ರೂ ಪಾವತಿಸಬೇಕಾದ ಅನಿವಾರ್ಯತೆ ದೂರಾಗಿದೆ. ಹಿಂದೆಲ್ಲ ಗರ್ಭಕೋಶ ಹಾಗೂ ಅಂಡಾಶಯದಲ್ಲಿನ ಸಮಸ್ಯೆಗೆ ಶಸ್ತ್ರಚಿಕಿತ್ಸೆ ಸರ್ಕಾರಿ ಆಸ್ಪತ್ರೆಯಲ್ಲಿ ಲಭ್ಯವಿರಲಿಲ್ಲ. ಕಾರಣ ಇದಕ್ಕೆ ಅನುಸರಿಸಬೇಕಾದ ಪ್ರಕ್ರಿಯೆ ಹೆಚ್ಚು. ಜತೆಗೆ ಸೌಲಭ್ಯದ ಸಮಸ್ಯೆಯೂ ಇರಬಹುದಿತ್ತು. ಪರಿಣಾಮ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದವರು ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗೆ ಹೋಗಬೇಕಿತ್ತು. ಮಾತ್ರವಲ್ಲದೆ ಚಿಕಿತ್ಸೆಗೆಂದು 20 ಸಾವಿರ ರೂನಿಂದ ಲಕ್ಷಾಂತರ ರೂ ಪಾವತಿಸಬೇಕಿತ್ತು. ಆದರೆ ಈಗ ಮಿಮ್ಸ್‌ನಲ್ಲಿಯೇ ಶಸ್ತ್ರಚಿಕಿತ್ಸೆ ಲಭ್ಯವಿರುವುದರಿಂದ ಬಾದಿತರಿಗೆ ಅನುಕೂಲವಾಗುತ್ತಿದೆ. ಏನಿದು ಲ್ಯಾಪರೊಸ್ಕೋಪಿ?: ಮಹಿಳೆಯರಿಗೆ ಗರ್ಭಕೋಶ, ಅಂಡಾಶಯದ ಮೇಲಿನ ನೀರು ಗಂಟು, ಗರ್ಭದಲ್ಲಿ ಬೆಳೆದ ಗಡ್ಡೆಗಳು, ರಕ್ತಸ್ರಾವ, ನಂಜು ಸೇರಿದಂತೆ ಕೆಲ ಸಮಸ್ಯೆ ಎದುರಾಗುತ್ತದೆ. ಸಾಮಾನ್ಯವಾಗಿ 40 ವರ್ಷ ಮೇಲ್ಪಟ್ಟವರಿಗೆ ಇಂತಹ ತೊಂದರೆ ಕಾಣಿಸುತ್ತದೆ. ಇದಕ್ಕೆ ಹೊಟ್ಟೆ ಛೇದನ ಮಾಡಿಯೇ ವೈದ್ಯರು ಶಸ್ತ್ರಚಿಕಿತ್ಸೆಗೆ ನಡೆಸಬೇಕಿತ್ತು. ಮಾತ್ರವಲ್ಲದೆ ಸರ್ಜರಿ ಮಾಡಿಸಿಕೊಂಡವರು ವಾರಗಟ್ಟಲೇ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯಬೇಕಿತ್ತು. ಆದರೀಗ ತಂತ್ರಜ್ಞಾನ ಬದಲಾಗಿದೆ. ಲ್ಯಾಪರೊಸ್ಕೋಪಿ ಮೂಲಕ ನಡೆಸುವ ಶಸ್ತ್ರಚಿಕಿತ್ಸೆ ಯಶಸ್ವಿಯಾಗುತ್ತಿದೆ. ಲ್ಯಾಪರೋಸ್ಕೋಪ್ ಒಂದು ತೆಳುವಾದ ಮತ್ತು ತೆಳ್ಳಗಿನ ಸಾಧನ. ಅದರ ತುದಿಯಲ್ಲಿ ಸಣ್ಣ ಕ್ಯಾಮೆರಾ ಮತ್ತು ಬೆಳಕನ್ನು ಹೊಂದಿರುತ್ತದೆ. ಕೀ-ಹೋಲ್ ಶಸ್ತ್ರಚಿಕಿತ್ಸೆ ಸುರಕ್ಷಿತ ಮತ್ತು ಹೊಸ ವಿಧಾನ. ಶಸ್ತ್ರಚಿಕಿತ್ಸಕ ರೋಗಿಯ ದೇಹದ ಮೇಲೆ ಕೆಲವೇ ಮಿಲಿ ಮೀಟರ್ ಉದ್ದದ ಸಣ್ಣ ಹೋಲ್ ಮಾಡಿ ಶಸ್ತ್ರಚಿಕಿತ್ಸೆ ಆರಂಭಿಸುತ್ತಾರೆ. ಸಣ್ಣ ಹೋಲ್‌ಗಳ ಮೂಲಕ ಸಾಧನ ಮತ್ತು ಇತರೆ ಶಸ್ತ್ರಚಿಕಿತ್ಸೆ ಉಪಕರಣ ಸೇರಿಸುತ್ತದೆ. ಶಸ್ತ್ರಚಿಕಿತ್ಸೆ ಮಾಡುವವರಿಗೆ ದೇಹದ ಒಳಗಿನ ವೀಡಿಯೋವನ್ನು ಹೊರಗಿನ ವೀಡಿಯೋ ಪರದೆಯಲ್ಲಿ ನೋಡಲು ಕ್ಯಾಮೆರಾ ಸಹಾಯ ಮಾಡುತ್ತದೆ. ಇದರ ಮೂಲಕ ಸುಲಭವಾಗಿ ಶಸ್ತ್ರಚಿಕಿತ್ಸೆಯನ್ನು ನಿರ್ವಹಿಸಬಹುದು. ಇದಲ್ಲದೆ ಈ ವಿಧಾನದ ಶಸ್ತ್ರಚಿಕಿತ್ಸೆಯಿಂದ ರೋಗಿಯ ದೇಹದ ರಕ್ತಸ್ರಾವ ಕನಿಷ್ಟವಾಗಿರುತ್ತದೆ. ತೆರೆದ ಶಸ್ತ್ರಚಿಕಿತ್ಸೆಗಳಲ್ಲಿ ಮಾಡಿದ ದೇಹದ ಛೇದನಕ್ಕೆ ಹೋಲಿಸಿದರೆ ತುಂಬಾ ಚಿಕ್ಕದಾಗಿದೆ. ಮುಖ್ಯವಾಗಿ ರಕ್ತದ ನಷ್ಟವನ್ನು ಕಡಿಮೆ ಮಾಡುವುದಕ್ಕೆ ಅನುಕೂಲ. ಶಸ್ತ್ರಚಿಕಿತ್ಸೆ ಬಳಿಕ ನೋವು ಮತ್ತು ರಕ್ತಸ್ರಾವದ ಅಪಾಯವೂ ಕಡಿಮೆ. ಸರ್ಜರಿಗೊಳಪಟ್ಟ ರೋಗಿಯನ್ನು ಅವರ ಆರೋಗ್ಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕೆಲವೇ ಗಂಟೆಯೊಳಗೆ ಮನೆಗೆ ಕಳುಹಿಸಬಹುದು. ಜತೆಗೆ ಚಿಕಿತ್ಸೆಗೊಳಪಟ್ಟವರು ಸಾಮಾನ್ಯ ಚಟುವಟಿಕೆಗಳಿಗೆ ಮರಳಬಹುದು. ಗಾಯದ ಗುರುತು ಕೂಡ ಚಿಕ್ಕದಾಗಿರುತ್ತದೆ. ಅಂಗಾಂಶಕ್ಕೆ ಸೋಂಕು ತಗುಲುವ ಸಾಧ್ಯತೆಯೂ ಕಡಿಮೆ. 40 ವರ್ಷ ಮೇಲ್ಪಟ್ಟವರಿಗೆ ಸಮಸ್ಯೆ ಎದುರಾದರೆ ಮೊದಲ ಹಂತದಲ್ಲಿ ಮಾತ್ರೆ, ಚುಚ್ಚುಮದ್ದು ನೀಡುವ ಮೂಲಕ ಪರಿಹರಿಸುವ ಪ್ರಯತ್ನ ನಡೆಯಲಿದೆ. ಆದರೂ ಬಗೆಹರಿಯದಿದ್ದರೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಅಂತೆಯೇ 40 ವರ್ಷ ಒಳಗಿನವರಿಗೆ ಸಮಸ್ಯೆ ಎದುರಾದರೆ ಹಾಗೂ ಅನಿವಾರ್ಯವಾಗಿದ್ದರೆ ನಿಖರವಾದ ದಾಖಲೆ ಒದಗಿಸಿ ಅನುಮತಿ ಪಡೆದು ಈ ಸರ್ಜರಿ ಮಾಡಬೇಕು. ಇದು ಸುಪ್ರೀಂ ಕೋರ್ಟ್‌ನ ಆದೇಶವಾಗಿದೆ. ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಲ್ಯಾಪರೊಸ್ಕೋಪಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಯುತ್ತಿದೆ. ಒಟ್ಟಾರೆ ಗರ್ಭಕೋಶ ಹಾಗೂ ಅಂಡಾಶಯ ಆರೋಗ್ಯದ ಸಮಸ್ಯೆ ಎದುರಿಸುತ್ತಿರುವ ಆರ್ಥಿಕವಾಗಿ ಹಿಂದುಳಿದವರಿಗೆ ಮಿಮ್ಸ್‌ನ ಚಿಕಿತ್ಸೆ ನೆರವಾಗಲಿದೆ.
ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು ಉತ್ತಮವಾಗಿ ಲ್ಯಾಪರೋಸ್ಕೋಪಿ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದಾರೆ. ಈ ವರ್ಷದ ಜು.31ರವರೆಗೆ 233 ಶಸಚಿಕಿತ್ಸೆ ಮಾಡಲಾಗಿದೆ. ಇದೇ ಚಿಕಿತ್ಸೆ ಪಡೆಯಲು ಖಾಸಗಿ ಸಂಸ್ಥೆಯಲ್ಲಿ ಸಾವಿರಾರೂ ರೂ ಕೊಡಬೇಕಿದೆ. ಗರ್ಭಕೋಶ ಮತ್ತು ಅಂಡಾಶಯದಲ್ಲಿನ ಸಮಸ್ಯೆಗೆ ಈ ಸರ್ಜರಿ ಮಾಡಲಾಗುತ್ತದೆ. ಇದರಿಂದ ರೋಗಿಗಳಿಗೆ ತ್ವರಿತವಾಗಿ ಗುಣಮುಖವಾಗುತ್ತಾರೆ. ಡಾ.ನರಸಿಂಹಮೂರ್ತಿ ಮಿಮ್ಸ್ ನಿರ್ದೇಶಕ ಲ್ಯಾಪರೊಸ್ಕೋಪಿ ಮೂಲಕ ಶಸ್ತ್ರಚಿಕಿತ್ಸೆಗಳು ಯಶಸ್ವಿಯಾಗಿ ನಡೆಯುತ್ತಿವೆ. ಹಲವು ಗಂಭೀರ ಪ್ರಕರಣವನ್ನು ಚಿಕಿತ್ಸೆ ಮೂಲಕ ಬಗೆಹರಿಸಿಕೊಡಲಾಗಿದೆ. ಆರು ಜನ ತಜ್ಞ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಡಾ.ಆರ್.ಮನೋಹರ್ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ವೈದ್ಯ, ಮಿಮ್ಸ್