

ಬೇಲೂರು: ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಸೋಮವಾರ ನಡೆದ ವಿಧಾನ ಪರಿಷತ್ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಶಾಂತಿಯುತವಾಗಿ ನಡೆದು, ಶೇ.89ರಷ್ಟು ಮತದಾನವಾಯಿತು.
ತಾಲೂಕಿನ 257 ಮತದಾರರಿದ್ದರು. ಸೋಮವಾರ ತಹಸೀಲ್ದಾರ್ ಕಚೇರಿ ಆವರಣದಲ್ಲಿ ತೆರಯಲಾಗಿದ್ದ ಮತಗಟ್ಟೆಯಲ್ಲಿ 147 ಪುರುಷರು ಮತ್ತು 84 ಮಹಿಳಾ ಶಿಕ್ಷಕರು ಸೇರಿದಂತೆ 231 ಮತದಾರರು ಹಕ್ಕು ಚಲಾಯಿಸಿದರು. ಚುನಾವಣೆ ಹಿನ್ನೆಲೆ ತಹಸೀಲ್ದಾರ್ ಕಚೇರಿ ಆವರಣದ 100 ಮೀ. ಸುತ್ತಲೂ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಅಹಿತಕರ ಘಟನೆಗಳಿಗೂ ನಡೆಯದಂತೆ ಪೊಲೀಸರು ಬಂದೋಬಸ್ತ್ ಮಾಡಿದ್ದರು.
ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡರ ಪರವಾಗಿ ಮಾಜಿ ಸಚಿವ ಬಿ.ಶಿವರಾಂ ಮತ್ತು ತಂಡ ಒಂದೆಡೆ ಇದ್ದರೆ, ಮತ್ತೊಂದೆಡೆ ಎನ್‌ಡಿಎ ಅಭ್ಯರ್ಥಿ ವಿವೇಕಾನಂದರ ಪರವಾಗಿ ಜೆಡಿಎಸ್ ತಾಲೂಕು ಅಧ್ಯಕ್ಷ ತೋ.ಚ.ಅನಂತಸುಬ್ಬರಾಯ ಮತ್ತು ಬಿಜೆಪಿ ತಾಲೂಕು ಅಧ್ಯಕ್ಷ ಅಡಗೂರು ಆನಂದ್ ನೇತೃತ್ವದಲ್ಲಿ ಪ್ರತ್ಯೇಕವಾಗಿ ಶಾಮಿಯಾನ ಹಾಕಿಕೊಂಡು ಕೊನೇ ಹಂತದಲ್ಲೂ ಮತದಾರರನ್ನು ಓಲೈಸಲು ಕಸರತ್ತು ನಡೆಯುತ್ತಿದ್ದುದು ಸಾಮಾನ್ಯವಾಗಿತ್ತು.
ಬಿಜೆಪಿ ಮುಖಂಡರಾದ ರೇಣುಕುಮಾರ್, ಎಚ್.ಎಂ.ದಯಾನಂದ್, ಕಾಂಗ್ರೆಸ್ ಮುಖಂಡರಾದ ಎಂ.ಆರ್.ವೆಂಕಟೇಶ್, ತೌಫಿಕ್, ಸಂತೋಷ್, ಅಶೋಕ್, ಜೆಡಿಎಸ್ ಮುಖಂಡರಾದ ಮಲ್ಲೇಗೌಡ, ಲೋಕೇಗೌಡ, ಮಹೇಶ್, ನಾಗೇಶ್ ಇತರರಿದ್ದರು.