

ಚನ್ನರಾಯಪಟ್ಟಣ: ಸಾಹಿತಿ ಎಸ್.ಎಲ್.ಭೈರಪ್ಪ ಅವರ ಹುಟ್ಟೂರು ಸಂತೆಶಿವರ ಗ್ರಾಮದಲ್ಲಿ ಫೆ.23ಕ್ಕೆ ನಾಗರಿಕ ಸನ್ಮಾನ ಏರ್ಪಡಿಸಲಾಗಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.
ಪಟ್ಟಣದ ಪತ್ರಕರ್ತರ ಭವನದಲ್ಲಿ ಭಾನುವಾರ ‘ಭಗೀರಥ ಸ್ವರೂಪಿ ನಮ್ಮ ಭೈರಪ್ಪ, ನಮ್ಮ ಹೆಮ್ಮೆ’ ಲಾಂಛನ ಬಿಡುಗಡೆಯಲ್ಲಿ ಅವರು ಮಾತನಾಡಿದರು.
ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅವರು ತಮ್ಮ ಹುಟ್ಟೂರಿನ ಕೆರೆ ತುಂಬಿಸಲು 4 ವರ್ಷದ ಹಿಂದೆ ಮೈಸೂರಿನಲ್ಲಿ ದಸರಾ ಸಂದರ್ಭ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು. ಯೋಜನೆಗೆ ಮಂಜೂರಾತಿ ದೊರಕಿತು. ಸರ್ಕಾರದಿಂದ ಹೊಸ ಯೋಜನೆ ರೂಪಿಸಿ ಸಂತೆಶಿವರ, ಅಗ್ರಹಾರ, ಬೆಳಗುಲಿ ಸೇರಿದಂತೆ ಮೂರು ಕೆರೆಗಳಿಗೆ ನೀರು ಹರಿಸುವುದರಿಂದ ಸುತ್ತಲಿನ 20ಕ್ಕೂ ಹಳ್ಳಿಗಳಿಗೆ ಅನುಕೂಲವಾಗುತ್ತದೆ. ಹುಟ್ಟೂರಿನ ಕೆರೆ ತುಂಬಿಸಲು ಶ್ರಮಿಸಿದ ಎಸ್. ಎಲ್.ಭೈರಪ್ಪ ಅವರಿಗೆ ತವರಿನ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದವರಲ್ಲಿ ಎಸ್.ಎಲ್.ಭೈರಪ್ಪ ಅವರು ಅಗ್ರಗಣ್ಯರಾಗಿದ್ದು, ಸ್ವಗ್ರಾಮದಲ್ಲಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮದ ಮೂಲಕ ನಾಡಿಗೊಂದು ಸಂದೇಶ ನೀಡಬೇಕಿದೆ. ದ್ಯಾವಲಾಪುರ-ರಾಂಪುರದ ಗೇಟ್ ಬಳಿಯಿಂದ ಮೆರವಣಿಗೆ ಮೂಲಕ ಗ್ರಾಮಕ್ಕೆ ಕರೆತರಲಾಗುವುದು. ಕೇಂದ್ರ ಸಚಿವ ಕುಮಾರಸ್ವಾಮಿ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಾ. ಸಿ.ಎನ್.ಮಂಜುನಾಥ್, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ, ನೀರಾವರಿ ಯೋಜನೆ ಅನುಷ್ಠಾನಗೊಳಿಸುವಲ್ಲಿ ನೆರವಾದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಹ್ವಾನಿಸಲು ತೀರ್ಮಾನಿಸಲಾಗಿದೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಎ. ರಂಗಸ್ವಾಮಿ ಮಾತನಾಡಿ, ಸಾಹಿತಿ ಭೈರಪ್ಪ ಅವರಿಗೆ ನಮ್ಮ ಅಭಿಮಾನ ವ್ಯಕ್ತಪಡಿಸಲು ಇದೊಂದು ಸದಾವಕಾಶವಾಗಿದ್ದು, ಎಲ್ಲರೂ ಇದರ ಸದ್ಬಳಕೆ ಮಾಡಿಕೊಳ್ಳಬೇಕು. ಎಲ್ಲ ಸಾಹಿತ್ಯಾಭಿಮಾನಿಗಳೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದರು.
ಭೈರಪ್ಪ ಅವರ ಅಭಿಮಾನಿ ಬೆಂಗಳೂರಿನಿಂದ ಆಗಮಿಸಿದ್ದ ರಶ್ಮಿ ಗೋಖಲೆ ಮಾತನಾಡಿ. ಭೈರಪ್ಪ ಅವರು ಸಾಹಿತ್ಯ ಕ್ಷೇತ್ರದಲ್ಲಿ ವಿಶ್ವ ಸಾಹಿತಿ ಆಗಿದ್ದಾರೆ. ಅವರ ಕೃತಿಗಳು 12 ರಾಷ್ಟ್ರೀಯ ಭಾಷೆಗಳು ಹಾಗೂ 2 ಅಂತಾರಾಷ್ಟ್ರೀಯ ಭಾಷೆಗೆ ಅನುವಾದಗೊಂಡಿದ್ದು, ತಮ್ಮ ಕೃತಿಗಳ ಮೂಲಕ ಗ್ರಾಮೀಣ ಜನಜೀವನವನ್ನು ತೆರೆದಿಟ್ಟಿದ್ದಾರೆ. ಸಾಹಿತ್ಯ ಕೃಷಿಯ ಜತೆಗೆ ಸಾಮಾಜಿಕ ಕಳಕಳಿಯನ್ನೂ ಹೊಂದಿದ್ದು, ಇದೊಂದು ರಾಷ್ಟ್ರಮಟ್ಟದ ಕಾರ್ಯಕ್ರಮವಾಗಬೇಕು ಎಂದು ಹೇಳಿದರು.
ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಗಂಗೇಗೌಡ, ಮುಖಂಡರಾದ ಎಸ್.ಎಲ್. ಕೃಷ್ಣಪ್ರಸಾದ್, ಅನಂತರಾಮು, ರಾಜಣ್ಣ, ಚಿರಂಜೀವಿ ಭಾಗವಹಿಸಿದ್ದರು.