23 ಗ್ರಾಪಂನಲ್ಲಿ ಜೆಡಿಎಸ್ ಬೆಂಬಲಿತರ ಮೇಲುಗೈ

12-pnp 2a
Published on

ಪಾಂಡವಪುರ: ಅಧಿಕಾರಾವಧಿ ಮುಕ್ತಾಯಗೊಳ್ಳದ ತಾಲೂಕಿನ ಮೇಲುಕೋಟೆ ಗ್ರಾಮ ಪಂಚಾಯಿತಿ ಹೊರತುಪಡಿಸಿ ಉಳಿದ 23 ಗ್ರಾಮ ಪಂಚಾಯಿತಿಗಳಿಗೆ ಎರಡನೇ ಅವಧಿಗೆ ನಡೆದ ಚುನಾವಣೆಯಲ್ಲಿ (ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ) ಜೆಡಿಎಸ್ ಬೆಂಬಲಿತ ಸದಸ್ಯರು ಮೇಲುಗೈ ಸಾಧಿಸಿದ್ದಾರೆ.


ಚುನಾವಣೆ ನಡೆದ 23 ಪಂಚಾಯಿತಿಗಳ ಪೈಕಿ ಜೆಡಿಎಸ್ ಬೆಂಬಲಿತರು 12 ಹಾಗೂ ರೈತ ಸಂಘ-ಕಾಂಗ್ರೆಸ್ ಮೈತ್ರಿಕೂಟ ಬೆಂಬಲಿತರು 9 ಪಂಚಾಯಿತಿಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಯಶಸ್ವಿಯಾಗಿದ್ದಾರೆ. ತಾಲೂಕಿನ ಹಿರೇಮರಳಿ ಗ್ರಾಪಂ ಸದಸ್ಯರು ಪಕ್ಷಾತೀತವಾಗಿ ಅಧ್ಯಕ್ಷರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕೆನ್ನಾಳು ಗ್ರಾಪಂನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜೆಡಿಎಸ್ ಸದಸ್ಯರ ಬೆಂಬಲದೊಂದಿಗೆ ಅಧ್ಯಕ್ಷ ಸ್ಥಾನ ಪಡೆದುಕೊಂಡಿರುವುದು ವಿಶೇಷ.


ತಾಲೂಕಿನ ಚಿನಕುರಳಿ, ಹರವು, ಅರಳಕುಪ್ಪೆ, ಹೊನಗಾನಹಳ್ಳಿ, ನಾರಾಯಣಪುರ, ಬನ್ನಂಗಾಡಿ, ಟಿ.ಎಸ್.ಛತ್ರ, ಚಿಕ್ಕಾಡೆ, ಹಳೇಬೀಡು, ಗುಮ್ಮನಹಳ್ಳಿ, ದೊಡ್ಡಬ್ಯಾಡರಹಳ್ಳಿ ಮತ್ತು ಮಾಣಿಕ್ಯನಹಳ್ಳಿ ಪಂಚಾಯಿತಿಗಳು ಜೆಡಿಎಸ್ ಬೆಂಬಲಿತರ ಪಾಲಾಗಿವೆ. ಡಿಂಕಾ, ಕೆ.ಬೆಟ್ಟಹಳ್ಳಿ, ಕ್ಯಾತನಹಳ್ಳಿ, ಸುಂಕಾತೊಣ್ಣೂರು, ಲಕ್ಷ್ಮೀಸಾಗರ, ಜಕ್ಕನಹಳ್ಳಿ, ಬಳಘಟ್ಟ ಹಾಗೂ ಕನಗನಮರಡಿ ಗ್ರಾಪಂಗಳು ರೈತ ಸಂಘ-ಕಾಂಗ್ರೆಸ್ ಮೈತ್ರಿಕೂಟ ಬೆಂಬಲಿತರ ವಶಕ್ಕೆ ು ಅಧಿಕಾರದ ಗದ್ದುಗೆ ಹಿಡಿದಿದ್ದಾರೆ.

ಗ್ರಾಮ ಪಂಚಾಯಿತಿಗಳ ಅಧ್ಯಕ್ಷ, ಉಪಾಧ್ಯಕ್ಷರ ಮೊದಲನೇ ಅವಧಿ ಚುನಾವಣಾ ಸಂದರ್ಭದಲ್ಲಿ ಶಾಸಕರಾಗಿದ್ದ ಸಿ.ಎಸ್.ಪುಟ್ಟರಾಜು ಅವರು 24 ಪಂಚಾಯಿತಿಗಳ ಪೈಕಿ 17 ಪಂಚಾಯಿತಿಗಳನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಯಶಸ್ವಿಯಾಗಿದ್ದರು. ಆದರೆ ಎರಡನೇ ಅವಧಿ ಚುನಾವಣೆಯಲ್ಲಿ ಜೆಡಿಎಸ್ ಬೆಂಲಿತರ ವಶದಲ್ಲಿದ್ದ ಸುಂಕಾತೊಣ್ಣೂರು, ಬಳಘಟ್ಟ, ಜಕ್ಕನಹಳ್ಳಿ ಹಾಗೂ ಕಟ್ಟೇರಿ ಗ್ರಾಮ ಪಂಚಾಯಿತಿಗಳನ್ನು ರೈತ ಸಂಘ-ಕಾಂಗ್ರೆಸ್ ಮೈತ್ರಿಕೂಟ ವಶಕ್ಕೆ ಪಡೆದುಕೊಂಡಿವೆ.

ಬದಲಾದ ರಾಜಕೀಯ ಸನ್ನಿವೇಶದಲ್ಲಿ ರೈತ ಸಂಘದ ದರ್ಶನ್ ಪುಟ್ಟಣ್ಣಯ್ಯ ಶಾಸಕರಾಗಿ ಆಯ್ಕೆಯಾಗಿದ್ದು, ಹಿಂದಿನ ಅವಧಿಗಿಂತ ಈ ಅವಧಿಯಲ್ಲಿ ಇನ್ನೂ ಹೆಚ್ಚಿನ ಗ್ರಾಪಂಗಳಲ್ಲಿ ಮೈತ್ರಿಕೂಟ ಬೆಂಬಲಿತರು ಅಧಿಕಾರಕ್ಕೆ ಬರಬೇಕಿತ್ತು. ಆದರೆ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಚುನಾವಣಾ ವೇಳೆಯಲ್ಲಿ ವಿದೇಶಕ್ಕೆ ತೆರಳಿದ್ದು, ಕೆಲ ಗ್ರಾಪಂಗಳಲ್ಲಿ ಅಧಿಕಾರ ಹಿಡಿಯಲು ತೊಡಕಾಯಿತು ಎಂದು ರೈತ ಸಂಘ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಹೇಳುತ್ತಾರೆ. ಆದರೆ, ಕೆಪಿಸಿಸಿ ಸದಸ್ಯ ಎಚ್.ತ್ಯಾಗರಾಜು, ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಮತ್ತು ಉದ್ಯಮಿ ಪರಮೇಶ್‌ಗೌಡ ಅವರ ಹೋರಾಟದ ಫಲವಾಗಿ ಸಮಾಧಾನ ಎನ್ನುವಷ್ಟರ ಮಟ್ಟಿಗೆ ಈ ಚುನಾವಣೆಯಲ್ಲಿ ಮೈತ್ರಿಕೂಟ ಬೆಂಬಲಿತರು ಯಶ ಸಾಧಿಸಿದ್ದಾರೆ ಎಂಬುದು ಎರಡು ಪಕ್ಷದ ಕಾರ್ಯಕರ್ತರ ಇಂಗಿತ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net