

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಸೀಮೆ ಹಸು ಕಳವು ಪ್ರಕರಣದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಹೊರಬಂದು ತಲೆ ಮರೆಸಿಕೊಂಡಿದ್ದ ಆರೋಪಿ 23 ವರ್ಷದ ಬಳಿಕ ಗ್ರಾಮಾಂತರ ಠಾಣೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಸಾಸಲು ಹೋಬಳಿ ಆರೂಢಿ ಗ್ರಾಮದ ನಿವಾಸಿ ನರಸಿಂಹರಾಜು (44) ಬಂಧಿತ. 23 ವರ್ಷದ ಹಿಂದೆ ಸುಮಾರು 15 ಸಾವಿರ ರೂ. ಬೆಲೆ ಬಾಳುವ ಸೀಮೆ ಹಸು ಕದ್ದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 2002ರಲ್ಲಿ ಬೆಂಗಳೂರಿನಲ್ಲಿ ಬಂಧನವಾಗಿದ್ದ. ಪ್ರಕರಣ ದೊಡ್ಡಬಳ್ಳಾಪುರ ನ್ಯಾಯಾಲಯಕ್ಕೆ ವರ್ಗಾವಣೆಯಾಗಿತ್ತು. ನಂತರ ಆರೋಪಿ ನ್ಯಾಯಾಲಯಕ್ಕೂ ಹಾಜರಾಗದೆ ತಲೆ ಮರೆಸಿಕೊಂಡಿದ್ದ. ಆರೋಪಿ ನರಸಿಂಹರಾಜು ತಾಲೂಕಿನ ಎಳ್ಳುಪುರ ಗ್ರಾಮದಲ್ಲಿ ವಾಸವಾಗಿದ್ದು, ಖಾಸಗಿ ಕಾರ್ಖಾನೆಯಲ್ಲಿ ಸೆಕ್ಯೂರಿಟಿ ಕೆಲಸ ಮಾಡಿಕೊಂಡಿದ್ದ. ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನಂತರ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಬಿಡಲಾಗಿದೆ.
ಐಡಿ ಕಾರ್ಡ್‌ನಿಂದ ಪತ್ತೆ:
ಭದ್ರತಾ ಸಿಬ್ಬಂದಿಯಾಗಿ ಕರ್ತವ್ಯದಲ್ಲಿದ್ದ ಆರೋಪಿ ಕಂಪನಿಗೆ ವೋಟರ್ ಐಡಿ ಕಾರ್ಡ್ ನೀಡಿದ್ದ. ಅದೇ ಐಡಿ ನ್ಯಾಯಾಲಯಕ್ಕೂ ಸಲ್ಲಿಸಲಾಗಿತ್ತು. ಭದ್ರತಾ ಸಿಬ್ಬಂದಿ ಪೂರ್ವಾಪರ ತನಿಖೆ ವೇಳೆ ಈತನ ವರ್ತನೆ ಮೇಲೆ ಅನುಮಾನ ಮೂಡಿತ್ತು. ಹೆಚ್ಚಿನ ವಿಚಾರಣೆ ವೇಳೆ 23 ವರ್ಷದ ಹಿಂದೆ ಕಳವು ಪ್ರಕರಣ ಹೊರಬಿದ್ದಿದೆ ಎಂದು ಪೊಲಿಸರು ತಿಳಿಸಿದ್ದಾರೆ.
ಕಂಪನಿ ವಿರುದ್ಧ ಕೇಸ್:
ಪ್ರತಿಷ್ಟಿತ ಕಂಪನಿಗೆ ಭದ್ರತಾ ಸಿಬ್ಬಂದಿ ನೇಮಕ ಮಾಡಿಕೊಳ್ಳುವಾಗ ಆ ವ್ಯಕ್ತಿಯ ಪೂರ್ವಾಪರ ತಿಳಿದಿರಬೇಕು, ಆತನ ವಿರುದ್ಧ ಯಾವುದಾದರೂ ಕ್ರಿಮಿನಲ್ ಪ್ರಕರಣಗಳಿವೆಯೇ ಎಂಬುದನ್ನು ಪರಿಶೀಲಿಸಬೇಕು ಇದಕ್ಕೆ ಕೆಲವೊಂದು ನಿಯಮ ಪಾಲಿಸಬೇಕು. ಆದರೆ ಈ ಪ್ರಕರಣದಲ್ಲಿ ಯಾವುದನ್ನೂ ವಿಚಾರಿಸದರೆ ಕೆಲಸಕ್ಕೆ ನೇಮಿಸಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಕಂಪನಿ ವಿರುದ್ಧ ದೂರು ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಸಾಮಾನ್ಯವಾಗಿ ಹಸು ಕಳವು ಕುರಿ ಕಳವು ಪ್ರಕರಣಗಳು ದಾಖಲಾಗುತ್ತಿರುತ್ತವೆ, ಇಂಥ ಪ್ರಕರಣಗಳನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ. ರೈತಾಪಿ ಜನರ ಜೀವನಾಧಾರವಾಗಿರುವ ರಾಸುಗಳ ಕಳವು ಪ್ರಕರಣ ಬೇಧಿಸಲು ಹೆಚ್ಚಿನ ಒತ್ತು ನೀಡುತ್ತೇವೆ. ಈ ಮೂಲಕ ಕಳ್ಳರಿಗೆ ಎಚ್ಚರಿಕೆ ರವಾನಿಸಲಾಗಿದೆ. ಭದ್ರತಾ ಸಿಬ್ಬಂದಿ ನೇಮಕ ಮಾಡಿಕೊಳ್ಳುವ ಕಂಪನಿಗಳಿಗೂ ಇದು ಎಚ್ಚರಿಕೆ ಘಂಟೆಯಾಗಬೇಕು.
ಸಾದಿಕ್‌ಪಾಷಾ, ಇನ್‌ಸ್ೆಕ್ಟರ್ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ