

ಹೊನ್ನಾವರ: ಯುವ ಸಮೂಹ ಸಾಹಿತ್ಯ ಕ್ಷೇತ್ರಕ್ಕೆ ಹೆಚ್ಚು ಹೆಚ್ಚು ಬರಬೇಕು; ಆ ಮೂಲಕ ನಾಡು-ನುಡಿಯನ್ನು ಕಟ್ಟಬೇಕು. ನಮಗೆಲ್ಲರಿಗೂ ಬದುಕು ಕೊಟ್ಟ ನಾಡು, ನುಡಿಯನ್ನು ಉಳಿಸಲು, ಬೆಳೆಸಲು ನಾವೆಲ್ಲ ಶ್ರಮಿಸೋಣ ಎಂದು ಹಿರಿಯ ಸಾಹಿತಿ ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ ಹೇಳಿದರು.
ಪಟ್ಟಣದ ಶ್ರೀ ಮೂಡಗಣಪತಿ ಸಭಾಭವನದ ಚಿಟ್ಟಾಣಿ ರಾಮಚಂದ್ರ ಹೆಗಡೆ ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಬುಧವಾರ ಆಯೋಜಿಸಿದ 23ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದ ಉತ್ತರ ಕನ್ನಡದ ಸಮ್ಮೆಳನ ವಿಶೇಷತೆಯನ್ನು ಒಳಗೊಂಡಿದೆ. ಇಲ್ಲಿನ ಜನತೆ ಕಲೆ, ಸಾಹಿತ್ಯ, ಸಂಸ್ಕೃತಿಗೆ ತನ್ನದೆ ಆದ ಕೊಡುಗೆ ನೀಡಿದ್ದಾರೆ. ಎಲ್ಲರೂ ಕನ್ನಡದಲ್ಲಿ ಮಾತನಾಡೋಣ, ಸಹಿ ಮಾಡೋಣ, ನಾಡು-ನುಡಿ ಒಂದೇ ಆಗಿರುವ ನಾವೆಲ್ಲ ಒಂದೇ ಕುಟುಂಬದವರು, ಒಡನಾಡಿಗಳು ಎನ್ನುವಂತೆ ಜೀವಿಸೋಣ. ಸಾಹಿತ್ಯ ಸಮ್ಮೇಳನವು ಎಲ್ಲರ ಹಬ್ಬವಾಗಿದೆ. ವಿವಿಧ ದಿನಾಚರಣೆಗಳು, ಹಬ್ಬಗಳು ಸೇರಿದಂತೆ ಬೇರೆಲ್ಲಾ ಕಾರ್ಯಕ್ರಮಗಳು ನಿರ್ದಿಷ್ಟ ಕಾಲದಲ್ಲಿ ನಡೆಯುತ್ತದೆ. ಕನ್ನಡ ಸಾಹಿತ್ಯ ಸಮ್ಮೇಳನವೂ ಕೂಡ ನಿರ್ದಿಷ್ಟ ತಿಂಗಳಿನಲ್ಲಿ ನಡೆಯುವಂತಾಗಬೇಕು ಎಂದರು.
ಶಾಸಕ ದಿನಕರ ಶೆಟ್ಟಿ ದ್ವಾರಗಳನ್ನು ಉದ್ಘಾಟಿಸಿ ಮಾತನಾಡಿ ಸಾಹಿತಿಗಳೆಂದರೆ ಬುದ್ದಿವಂತರು, ಸಹನೆಯುಳ್ಳವರು, ವಿಷಯ ಜ್ಞಾನವಿರುವವರು. ರಾಜಕಾರಣಿಗಳಿಗಿಂತ ವಿಭಿನ್ನವಾಗಿ ಚಿಂತನೆ ಮಾಡುತ್ತಾರೆ. ದೇಶದಲ್ಲಿರುವ ಎಲ್ಲ ಭಾಷಿಕರು ಕನ್ನಡ ನಾಡಿನಲ್ಲಿದ್ದಾರೆ. ಕನ್ನಡ ಉಳಿಸುವ ಕೆಲಸಗಳು ಆಗಬೇಕು ಎಂದರು.
ಶಾಸಕ ಸತೀಶ ಸೈಲ್ ಪುಸ್ತಕ ಮಳಿಗೆ ಉದ್ಘಾಟಿಸಿ ಮಾತನಾಡಿ ನಮ್ಮ ಜಿಲ್ಲೆಯ ರಾಜಕಾರಣಿಗಳು ಅಭಿವೃದ್ಧಿ ವಿಷಯದಲ್ಲಿ ಒಂದಾಗಬೇಕು. ಜಿಲ್ಲೆಯಲ್ಲಿ ಬಂದಂತಹ ಸಿಬರ್ಡ್, ಕೈಗಾ, ಕೊಂಕಣ ರೈಲ್ವೆ ತಂತಹ ಯೋಜನೆಗಾಗಿ ಜಿಲ್ಲೆಯ ಜನರು ತ್ಯಾಗ ಮಾಡಿದ್ದಾರೆ. ಅವರಿಗೆ ಸರಿಯಾದ ಪಡರಿಹಾರ ಇದುವರೆಗೂ ದೊರತಿಲ್ಲ. ಮಲ್ಟಿಸ್ಷೆಷಾಲಿಟಿ ಆಸ್ಪತ್ರೆ ಕಾರವಾರದಲ್ಲಿ ಆಗಬೇಕೆಂಬ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿದ್ದೆ. ಆದರೆ ಜಿಲ್ಲೆಯ ವಿವಿಧ ಕ್ಷೇತ್ರದ ಶಾಸಕರು ತಮ್ಮ ಕ್ಷೇತ್ರದಲ್ಲಿ ಆಗಬೇಕೆಂಬ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಸರಿಯಾದ ಮಾರ್ಗದರ್ಶನ ನೀಡುವವರ ಅವಶ್ಯಕತೆ ಇದೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ಆಶಯ ಮಾತನಾಡಿ, ಹೊನ್ನಾವರದಲ್ಲಿ ಸ್ಥಳಿಯರ ಸಹಕಾರದಿಂದ ಯಶಸ್ವಿಯಾಗಿ ಸಮ್ಮೇಳನ ಸಂಘಟನೆಗೊAಡಿದೆ. ತನ್ನ ಅವಧಿಯಲ್ಲಿ ಜಿಲ್ಲೆಯಲ್ಲಿ ಇರುವ ಸಾಹಿತಿಗಳನ್ನೇ ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಲಾಗುವುದು. ತಾಲೂಕು ಸಮ್ಮೇಳನಗಳಲ್ಲಿ ತಾಲೂಕಿನಲ್ಲಿಯೇ ಇರುವ ಸಾಹಿತಿಗಳನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಿ. ಹೊರಗಿನವರನ್ನು ಉದ್ಘಾಟಕರನ್ನಾಗಿ ಕರೆಯಲಾಗುವುದು. ಎಂದರು.
ಸಾಹಿತಿ ನಿಜಲಿಂಗಪ್ಪ ಮಟ್ಟಿಹಾಳ ಪುಸ್ತಕ ಬಿಡುಗಡೆ ಮಾಡಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಶಾಂತಾರಾಮ ನಾಯಕ ಹಿಚ್ಕಡ ಧ್ಜಜ ಹಸ್ತಾಂತರಿಸಿದರು. ಮಾಜಿ ಕಸಾಪ ಜಿಲ್ಲಾಧ್ಯಕ್ಷ ರೋಹಿದಾಸ ನಾಯ್ಕ, ಉಡುಪಿ ಕಸಾಪ ಜಿಲ್ಲಾಧ್ಯಕ್ಷ ಸುರೇಂದ್ರ ಅಡಿಗ, ಹಿರಿಯ ಸಾಹಿತಿ ಡಾ. ಎನ್.ಆರ್.ನಾಯಕ, ಡಾ. ಸಯ್ಯದ ಝಮೀರುಲ್ಲಾ ಷರೀಪ್ ಮಾತನಾಡಿದರು.
ವೇದಿಕೆಯಲ್ಲಿ ಪ.ಪಂ. ಸದಸ್ಯರಾದ ಶಿವರಾಜ ಮೇಸ್ತ, ಮೇಧಾ ನಾಯ್ಕ, ಶಿಕ್ಷಕರ ಸಂಘದ ಆನಂದ ಗಾಂವಕರ, ಕಸಾಪದ ಜಾರ್ಜ ಫರ್ನಾಂಡೀಸ್, ಮುರ್ತುಜಾ ಹುಸೇನ್ ಮತ್ತು ವಿವಿಧ ತಾಲೂಕುಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಪಿ.ಅರ್.ನಾಯ್ಕ ಸ್ವಾಗತಿಸಿದರು. ಎಸ್.ಎಚ್.ಗೌಡ ಧನ್ಯವಾದ ಸಮರ್ಪಿಸಿದರು. ಸುಧೀಶ ನಾಯ್ಕ ಮತ್ತು ಪ್ರಕಾಶ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಭವ್ಯ ಮೆರವಣಿಗೆಯೊಂದಿಗೆ ಸಮ್ಮೇಳನಾಧ್ಯಕ್ಷರನ್ನು ಸಮ್ಮೇಳನ ಸಭೆಗೆ ಬರಮಾಡಿಕೊಳ್ಳಲಾಯಿತು.
ಸಮ್ಮೇಳನಾಧ್ಯಕ್ಷರ ಮಾತು:
ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದ ಸಾಹಿತಿ ಡಾ. ಶ್ರೀಪಾದ ಶೆಟ್ಟಿ ಮಾತನಾಡಿ, ಸಾಹಿತ್ಯವು ನಿರ್ಮಲವಾದ ಅಂತಃಕರಣ, ಆತ್ಮವಿಶ್ವಾಸ, ಪ್ರಾಮಾಣಿಕತೆ, ಸತ್ಯನಿಷ್ಠೆ, ಪರೋಪಕಾರ ಗುಣಗಳಿಂದ ಮೂಡಿಬರಬೇಕು. ಕನ್ನಡ ಭಾಷೆಯಲ್ಲಿ ಸೃಜನಶೀಲ-ಸೃಜನೇತರ ಸಾಹಿತ್ಯ ಸೃಷ್ಠಿ, ಸಮಾಜ, ವಿಜ್ಞಾನ, ಮನೋವಿಜ್ಞಾನ, ಆರೋಗ್ಯ, ಇಂಜನಿಯರಿAಗ್, ವೈದ್ಯಕೀಯ, ಕೃಷಿ, ತೋಗಾರಿಕೆ, ಕೈಗಾರಿಕೆ, ಇತ್ಯಾದಿಗಳ ಕುರಿತು ಹೆಚ್ಚು ಕೃತಿಗಳು ಬರಬೇಕಿದೆ. ಸಾಹಿತ್ಯದ ವಿಮರ್ಶೆ ಪ್ರಾಮಾಣಿಕವಾಗಿರಬೇಕು. ಯಾವುದೇಕೃತಿ ಒಂದು ಗುಂಪಿನ ಮುಖವಾಣಿಯಾಗಿ ಇನ್ನೊಂದು ಗುಂಪು ಅಥವ ಪಂಗಡಕ್ಕೆ ಪಂಥಾಹ್ವಾನ ಒಡ್ಡುವ ಆಶಯದೊಂದಿಗೆ ಪ್ರಕಟಣೆಗೊಳ್ಳುವುದು ಸರಿಯಲ್ಲ. ಕನ್ನಡವನ್ನು ಎಲ್ಲರೆದುರು ಸಂಕೋಚವಿಲ್ಲದೇ ಮಾತನಾಡುವ ರೂಢಿಯನ್ನು ಎಲ್ಲ ಕನ್ನಡಿಗರೂ ಬೆಳೆಸಿಕೊಳ್ಳಬೇಕು. ಪ್ರವಾಸ, ಸಂವಹನ, ಕೈಗಾರಿಕೆ, ತಂತ್ರಜ್ಞಾನ, ಕೃಷಿ ವಿಜ್ಞಾನಗಳಲ್ಲಿ ಕನ್ನಡಪರ ಚಿಂತನೆಯನ್ನು ಬೆಳೆಸಬೇಕಿದೆ. ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ಪಡೆಯುವಂತಾಗಬೇಕು ಎಂದರು.
`ಉತ್ತರ ಕನ್ನಡ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ, ಅಂಕೋಲಾ-ಹುಬ್ಬಳ್ಳಿ, ತಾಳಗುಪ್ಪ-ಹೊನ್ನಾವರ ರೇಲ್ವೆ ಯೋಜನೆಗಳು, ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ತುರ್ತಾಗಿ ಆಗಬೇಕು. ಜಿಲ್ಲೆಯಲ್ಲಿ ಬುಡಕಟ್ಟು ವಿಶ್ವವಿದ್ಯಾಲಯ, ಬಂದರುಗಳ ಅಭಿವೃದ್ದಿ, ಅಂಕೋಲಾದಲ್ಲಿ ದಿನಕರ ದೇಸಾಯಿ ಥೀಮ್‌ಪಾರ್ಕ್, ಆರು ತಿಂಗಳು ಯಕ್ಷಗಾನ ನಡೆಯುವ ಹೊನ್ನಾವರ ತಾಲೂಕಿನ ಗುಂಡಬಾಳದಲ್ಲಿ ಯಕ್ಷಗಾನ ತರಬೇತಿ ಕೇಂದ್ರ ಆಗಬೇಕಿದೆ ಎಂದರು.
ಇದನ್ನೂ ಓದಿ: ಸಿಲಿಂಡರ್ ಇ-ಕೆವೈಸಿ ಕುರಿತು ಮಹತ್ವದ ಮಾಹಿತಿ ಇಲ್ಲಿದೆ.