23 ನೇ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷ ಶ್ರೀಪಾದ ಶೆಟ್ಟಿ ಅವರಿಗೆ ಸನ್ಮಾನ

23-uttara-kannada-district-sahitya-sammelana
Published on

ಹೊನ್ನಾವರ: ಪಟ್ಟಣದಲ್ಲಿ ಡಿ. 27 ಮತ್ತು 28 ರಂದು ಆಯೋಜಿಸಿರುವ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿ ಆಯ್ಕೆಗೊಂಡಿರುವ ಸಾಹಿತಿ ಡಾ. ಶ್ರೀಪಾದ ಶೆಟ್ಟಿ ಅವರಿಗೆ ಪರಿಷತ್ತಿನಿಂದ ಅಧಿಕೃತ ಪತ್ರ ನೀಡಿ ಸನ್ಮಾನಿಸಲಾಯಿತು.
ನಂತರ ಮಾತನಾಡಿದ ಡಾ. ಶ್ರೀಪಾದ ಶೆಟ್ಟಿ ಅವರು, ಅಕ್ಷರ ಬಿತ್ತುವ, ಬೆಳೆಯುವ ಕಾರ್ಯ ದೊಡ್ಡದು. ಆ ಕಾರ್ಯದಲ್ಲಿ ತೊಡಗಿಸಿಕೊಂಡ ನನ್ನನ್ನು ಗುರುತಿಸಿ, ನನ್ನೂರಿನ ಸಮ್ಮೇಳನದಲ್ಲಿ ಸವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಸಾಹಿತ್ಯ ಪರಿಷತ್ತನ್ನು ಅಭಿನಂದಿಸುತ್ತೇನೆ. ಸಮ್ಮೇಳನವನ್ನು ಎಲ್ಲರೂ ಸೇರಿ ಯಶಸ್ವಿಯಾಗಿ ನಡೆಸೋಣ ಎಂದರು.
ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಪಿ.ಆರ್.ನಾಯ್ಕ ಮಾತನಾಡಿ, ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಮ್ಮೇಳನಕ್ಕೆ ಆಹ್ವಾನಿಸುವ ಅಧಿಕೃತ ಪತ್ರ ನೀಡಿ ಮಾತನಾಡಿ, ಡಾ. ಶ್ರೀಪಾದ ಶೆಟ್ಟಿ ಅವರು ಅಪಾರವಾದ ಜ್ಞಾನ ಸಂಪತ್ತಿನ ಮೂಲಕ ಕನ್ನಡ ಕಟ್ಟುವ ಮತ್ತು ಕನ್ನಡದ ಮನಸ್ಸನ್ನು ಒಂದು ಗೂಡಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನಾಡು ಹೆಮ್ಮೆಪಡುವ ಕನ್ನಡದ ಕಟ್ಟಾಳನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಸಾಹಿತ್ಯ ಪರಿಷತ್ತಿಗೆ ಹೆಮ್ಮೆ ತಂದಿದೆ ಎಂದರು.
ಜಾನಪದ ವಿದ್ವಾಂಸ ಡಾ. ಎನ್.ಆರ್.ನಾಯಕ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್.ನಾಯ್ಕ, ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಎಂ.ಹೆಗಡೆ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ಟಿ.ನಾಯ್ಕ, ಶಿಕ್ಷಕ ಸಂಘದ ಅಧ್ಯಕ್ಷ ಎಂ.ಜಿ.ನಾಯ್ಕ, ಮುಖ್ಯಾಧ್ಯಾಪಕರ ಸಂಘದ ಅಧ್ಯಕ್ಷ ಎಲ್.ಎಂ.ಹೆಗಡೆ, ಸಾಹಿತಿಗಳಾದ ಎಂ.ಎಸ್.ಹೆಗಡೆ, ಎಸ್.ಎಚ್.ಗುನಗ, ಗಜಾನನ ನಾಯ್ಕ, ಎಚ್.ಎಂ.ಮಾರುತಿ, ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಪ್ರಕಾಶ ನಾಯ್ಕ, ಸಾಧನಾ ಬರ್ಗಿ, ಲಕ್ಷ್ಮಿ ಎಚ್., ಷಣ್ಮುಖ ಭಟ್ ಹಾಗೂ ಪರಿಷತ್ತಿನ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಸಾಪ ತಾಲೂಕು ಘಟಕದ ಅಧ್ಯಕ್ಷ ಎಸ್.ಎಚ್.ಗೌಡ ಸ್ವಾಗತಿಸಿದರು. ಸುದೀಶ ನಾಯ್ಕ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net