

ನಾಗಮಂಗಲ: ಪಟ್ಟಣದ ಕನ್ನಡ ಸಂಘದ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ‘ಐವತ್ತು ವರ್ಷಗಳ ಸಾರ್ವಜನಿಕ ಸಾಂಸ್ಕೃತಿಕ ಬದುಕು’ ಎಂಬ ಘೋಷವಾಕ್ಯದೊಂದಿಗೆ 14ನೇ ವರ್ಷದ ನಾಗರಂಗ ನಾಟಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಸಮಾರಂಭ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ನ.22ರಿಂದ 28ರವರೆಗೆ ನಡೆಯಲಿದೆ.
ನಗರ ಪ್ರದೇಶಗಳಲ್ಲಿ ಘಟಿಸುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮ, ಸಾಹಿತ್ಯ ಚಟುವಟಿಕೆಗಳು ಗ್ರಾಮೀಣ ಜನರಿಗೆ ಸಿಗುತ್ತಿಲ್ಲವೆಂಬ ಕೊರಗನ್ನು ನೀಗಿಸುವ ಸಲುವಾಗಿಯೇ 50 ವರ್ಷಗಳ ಹಿಂದೆಯೇ ಹುಟ್ಟಿಕೊಂಡ ನಾಗಮಂಗಲ ಕನ್ನಡ ಸಂಘವು, ಜನಶಿಕ್ಷಣ, ಹೊಸ ಸಂವೇದನೆಯ ಅರಿವು ಸೇರಿದಂತೆ ಸಾಂಸ್ಕೃತಿಕ ಜೀವಂತಿಕೆಯನ್ನು ಕಾಪಾಡಿಕೊಂಡು ಬಂದಿದೆ.
ತಾಲೂಕಿನವರೇ ಆದ ನಾಡೋಜ ಡಾ.ಎಚ್.ಎಲ್.ನಾಗೇಗೌಡ, ಜಿ.ಶಂ.ಪರಮಶಿವಯ್ಯ, ಕ.ರಾ.ಕೃಷ್ಣಸ್ವಾಮಿ, ಹ.ಕ.ರಾಜೇಗೌಡ ಮೊದಲಾದವರು ಈ ನೆಲದ ಜನಪದ ಸಾಹಿತ್ಯವನ್ನು ಜಗತ್ತಿಗೆ ಪರಿಚಯಿಸಿದವರು. ನಾಗಮಂಗಲದ ಹವ್ಯಾಸಿ ರಂಗತಂಡವಾದ ಕನ್ನಡ ಸಂಘ ಸಾಮಾಜಿಕ ಸೇವಾ ಆಂದೋಲನ ಹಾಗೂ ಕ್ರಿಯಾಶೀಲ ಚಟುವಟಿಕೆಗಳನ್ನು ನಿರಂತರಾಗಿ ಹಮ್ಮಿಕೊಂಡು ಬರುತ್ತಿದೆ.
50 ವರ್ಷಗಳಿಂದ ವಿವಿಧ ಅಭಿರುಚಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಸೊಬಗನ್ನು ಸಾರ್ವಜನಿಕರಿಗೆ ಉಣಬಡಿಸುತ್ತಿದೆ.
ಪುನೀತ್ ವೇದಿಕೆಯಲ್ಲಿ ರಂಗಸಪ್ತಾಹ: ನ.22ರಿಂದ 28ರವರೆಗೆ ಪ್ರತಿದಿನ ಸಂಜೆ 7.30ಕ್ಕೆ ನಡೆಯುವ ನಾಗರಂಗ ನಾಟಕೋತ್ಸವದ ವೇದಿಕೆಗೆ ಕರ್ನಾಟಕರತ್ನ ಪುನೀತ್ ರಾಜ್‌ಕುಮಾರ್ ಅವರ ಹೆಸರಿಡಲಾಗಿದೆ. ಏಳು ದಿನಗಳವರೆಗೆ ನಡೆಯುವ ಈ ರಂಗಸಪ್ತಾಹದಲ್ಲಿ ರಾಜ್ಯದ ವಿವಿಧೆಡೆಯಿಂದ ಆಗಮಿಸುವ ಏಳು ತಂಡಗಳು ನಾಟಕ ಪ್ರದರ್ಶಿಸಲಿದ್ದು, ಪ್ರತಿ ಪ್ರದರ್ಶನವನ್ನು ಕನಿಷ್ಠ 1000ಕ್ಕೂ ಹೆಚ್ಚು ಪ್ರೇಕ್ಷಕರು ವೀಕ್ಷಿಸುವ ಅವಕಾಶ ಕಲ್ಪಿಸಲಾಗಿದೆ.
ನ.22ರ ಸಂಜೆ 6ಕ್ಕೆ ಕನ್ನಡ ಸಂಘದ 50ನೇ ಸುವರ್ಣ ಮಹೋತ್ಸವ ಸಂಭ್ರಮ ಹಾಗೂ ಕನ್ನಡ ರಾಜ್ಯೋತ್ಸವದೊಂದಿಗೆ ನಾಗರಂಗ ನಾಟಕೋತ್ಸವಕ್ಕೆ ಚಾಲನೆ ಸಿಗಲಿದೆ. ಶ್ರೀರಂಗಪಟ್ಟಣದ ಗಮ್ಯ ತಂಡದಿಂದ ಎನ್.ಆದಿತ್ಯ ಭಾರದ್ವಾಜ್ ನಿರ್ದೇಶಿಸಿರುವ ಪರಮಪದ ಸೋಪಾನಪಟ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ.
ಪ್ರದರ್ಶನಗೊಳ್ಳಲಿರುವ ನಾಟಕಗಳು: ನ.23ರ ಸಂಜೆ 7ಕ್ಕೆ ಹಾವೇರಿಯ ಶೇಷಗಿರಿ ಕಲಾತಂಡದಿಂದ ಗಣೇಶ ಎಂ.ಉಡುಪಿ ನಿರ್ದೇಶನದ ವಾಲಿವಧೆ, .24ರಂದು ಧಾರವಾಡದ ಸಮುದಾಯ ತಂಡದಿಂದ ಮಹದೇವ ಹಡಪದ ನಿರ್ದೇಶನದ ತಲೆದಂಡ, 25ರಂದು ಬೆಂಗಳೂರಿನ ಪ್ರದರ್ಶನ ಕಲಾ ಸಂಸ್ಥೆ (ಪ್ರಕಸಂ) ತಂಡದಿಂದ ರಾಜೇಂದ್ರ ಕಾರಂತ ನಿರ್ದೇಶನದ ಮಹಾಪೀಡೆ ಮಹಾಬ್ಲು, 26ರಂದು ಮೈಸೂರಿನ ಕದಂಬ ರಂಗವೇದಿಕೆ ತಂಡದಿಂದ ಯತೀಶ್ ಕೊಳ್ಳೇಗಾಲ ನಿರ್ದೇಶನದ ಆಟದೊಳಗಾಟ, 27ರಂದು ಮೈಸೂರಿನ ನವೋದಯ ತಂಡದಿಂದ ಪ್ರಸನ್ನ ಹೆಗ್ಗೋಡು ನಿರ್ದೇಶಿಸಿರುವ ಆಯೋಧ್ಯಾ ಕಾಂಡ ಹಾಗೂ 28ರ ಸಂಜೆ 7ಕ್ಕೆ ಬೈಂದೂರಿನ ರಂಗ ಸುರಭಿ ತಂಡದಿಂದ ಗಣೇಶ ಎಂ.ಉಡುಪಿ ನಿರ್ದೇಶಿಸಿರುವ ಚೋಮನ ದುಡಿ ಎಂಬ ನಾಟಕಗಳು ಪ್ರದರ್ಶನಗೊಳ್ಳಲಿದೆ.
ಸಮಾರೋಪ: ನ.28ರ ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಮೈಸೂರಿನ ಖ್ಯಾತರಂಗಕರ್ಮಿ ಎಚ್.ಕೆ.ದ್ವಾರಕಾನಾಥ್ ಹಾಗೂ ಖ್ಯಾತ ರಂಗ ವಸ್ತ್ರ ವಿನ್ಯಾಸಕ ಪ್ರಮೋದ್ ಶಿಗ್ಗಾಂವ್ ಅವರಿಗೆ ರಂಗ ಗೌರವ ಸಲ್ಲಿಸಲಾಗುವುದು. ಸಂಘದ ಅಧ್ಯಕ್ಷ ನಾ.ಸು.ನಾಗೇಶ ಅಧ್ಯಕ್ಷತೆ ವಹಿಸುವರು.
ರಂಗ ಸಪ್ತಾಹದಲ್ಲಿ ಪುಸ್ತಕ ಮಳಿಗೆ, ಉತ್ತರ ಕರ್ನಾಟಕ ಶೈಲಿಯ ತಿಂಡಿ ತಿನಿಸುಗಳು, ಅಪ್ಪಟ ಖಾದಿಯ ಸಿದ್ಧ ಉಡುಪುಗಳು ಸೇರಿದಂತೆ ಹಲವು ಬಗೆಯ ಗೃಹೋಪಯೋಗಿ ಹಾಗೂ ಕರಕುಶಲ ಪದಾರ್ಥಗಳ ಮಳಿಗೆಗಳು ತೆರೆಯಲಿವೆ.
.