

ಬಾಳೆಹೊನ್ನೂರು: ಪಟ್ಟಣದ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿಯಿಂದ ಮಾರ್ಕಾಂಡೇಶ್ವರ ದೇಗುಲದ ಆವರಣದ ದುರ್ಗಾಮಂಟಪದಲ್ಲಿ 16ನೇ ನವರಾತ್ರಿ ಮಹೋತ್ಸವವನ್ನು ಸೆ.22ರಿಂದ ಅ.2ರವರೆಗೆ ಆಯೋಜಿಸಲಾಗಿದೆ ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ಆರ್.ಡಿ.ಮಹೇಂದ್ರ ತಿಳಿಸಿದರು.
ಜೇಸಿ ವೃತ್ತದ ಗಣಪತಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಆಹ್ವಾನ ಪತ್ರಿಕೆ, ಕರಪತ್ರಗಳನ್ನು ಬಿಡುಗಡೆಗೊಳಿಸಿ ಮಾಹಿತಿ ನೀಡಿದ ನೀಡಿದ ಅವರು, ಹನ್ನೊಂದು ದಿನಗಳ ಪರ್ಯಂತ ಲೋಕಕಲ್ಯಾಣಾರ್ಥ ಶ್ರೀದೇವಿಗೆ ತ್ರಿಕಾಲ ಪೂಜೆ, ಸಪ್ತಶತೀ ಪಾರಾಯಣ ನೆರವೇರಿಸಲಾಗುವುದು. ಪ್ರತಿನಿತ್ಯ ರಾತ್ರಿ ಮೃತ್ಯಂಬಿಕಾ ಅಮ್ಮನವರ ವೇದಿಕೆಯಲ್ಲಿ ಧರ್ಮಾವಲಂಬಿತ ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ಪ್ರತಿನಿತ್ಯ ಮಧ್ಯಾಹ್ನ ಎರಡು ಸಾವಿರಕ್ಕೂ ಅಧಿಕ ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಗುವುದು. ವಿಜಯದಶಮಿ ದಿನ ಹದಿನೈದು ಸಾವಿರ ಭಕ್ತರಿಗೆ ಅನ್ನ ಸಂತರ್ಪಣೆ ನಡೆಸಲು ಸಮಿತಿ ಸಿದ್ಧತೆ ಮಾಡಿಕೊಂಡಿದೆ. 22ರಂದು ಬೆಳಗ್ಗೆ ದುರ್ಗಾದೇವಿ ವಿಗ್ರಹವನ್ನು ಪ್ರತಿಷ್ಠಾಪಿಸಲಿದ್ದು, ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಟ್ರಸ್ಟಿ ಗಿರಿಜಾಶಂಕರ ಜೋಷಿ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ ಎಂದರು.
ಅ.1ರಂದು ಜನಜಾಗೃತಿ ಧರ್ಮಸಭೆ ನಡೆಯಲಿದ್ದು, ಕಾಸರಗೋಡು ಎಡನೀರು ಮಠದ ಪೀಠಾಧಿಪತಿ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ. ನಿಟ್ಟೆ ಉಪನ್ಯಾಸಕ ಡಾ. ಸುಧೀರ್ ರಾಜ್ ಅವರು ಧರ್ಮ ಸಂರಕ್ಷಣೆ ಕುರಿತು ಮಾತನಾಡಲಿದ್ದಾರೆ. 2ರಂದು ಬೆಳಗ್ಗೆ ದುರ್ಗಾಹೋಮ, ಮಧ್ಯಾಹ್ನ ದುರ್ಗಾದೇವಿ ಶೋಭಾಯಾತ್ರೆ ವಿವಿಧ ಕಲಾತಂಡಗಳೊಂದಿಗೆ ನಡೆದು ಭದ್ರಾ ನದಿಯಲ್ಲಿ ಭದ್ರಾರತಿಯ ಧಾರ್ಮಿಕ ಕಾರ್ಯ ನಡೆದು ದುರ್ಗಾ ವಿಗ್ರಹ ಜಲಸ್ತಂಭನಗೊಳಿಸಲಾಗುವುದು ಎಂದು ತಿಳಿಸಿದರು.
ಸಮಿತಿ ಕೋಶಾಧಿಕಾರಿ ಭಾಸ್ಕರ್ ವೆನಿಲ್ಲಾ ಮಾತನಾಡಿ, ಧರ್ಮ, ಸಂಸ್ಕೃತಿ, ಸಂಸ್ಕಾರ ಉಳಿಸುವ ಉದ್ದೇಶದಿಂದ ನವರಾತ್ರಿ ಮಹೋತ್ಸವವನ್ನು ವಿಶಿಷ್ಟವಾಗಿ ಆಚರಿಸುತ್ತಿದ್ದು, ಮಹೋತ್ಸವದಲ್ಲಿ ಚಂಡಿಕಾ ಹೋಮ, ದುರ್ಗಾಹೋಮ, ಹೂವಿನ ಪೂಜೆ, ಪಾರಾಯಣ, ಅಷ್ಟೋತ್ತರ, ಅಕ್ಷರಾಭ್ಯಾಸ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿವೆ ಎಂದರು.
ನಿತ್ಯ ರಾತ್ರಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವಿಶೇಷ ನಾಮಕರಣ ಮಾಡಿ ಕಲೆಯನ್ನು ಹೆಚ್ಚು ಬಿಂಬಿಸುವ ಪ್ರಯತ್ನ ಮಾಡಲಾಗಿದೆ. ಶೋಭಾಯಾತ್ರೆಯಲ್ಲಿ ರಾಜ್ಯ, ಹೊರ ರಾಜ್ಯದ ವಿವಿಧೆಡೆಯ ಕಲೆ, ಸಂಸ್ಕೃತಿ ಬಿಂಬಿಸುವ 20ಕ್ಕೂ ಅಧಿಕ ಕಲಾತಂಡಗಳು ಭಾಗವಹಿಸಲಿವೆ ಎಂದು ತಿಳಿಸಿದರು.
ಸಮಿತಿ ಕಾರ್ಯಾಧ್ಯಕ್ಷ ಬಿ.ಚನ್ನಕೇಶವ ಬರಗಲ್, ಪದಾಧಿಕಾರಿಗಳಾದ ಚೈತನ್ಯ ವೆಂಕಿ, ಕೆ.ಟಿ.ವೆಂಕಟೇಶ್, ಶಿವರಾಮ ಶೆಟ್ಟಿ, ರೆನ್ನಿ ದೇವಯ್ಯ, ಕೆ.ಪ್ರಶಾಂತ್‌ಕುಮಾರ್, ನಟರಾಜ್ ಶೆಟ್ಟಿ, ಈಶ್ವರ್ ಇಟ್ಟಿಗೆ, ಬಿ.ಜಗದೀಶ್ಚಂದ್ರ, ಗೋಪಾಲ, ಕೆ.ಎಚ್.ನಾಗೇಶ್, ಮಹೇಶ್ಚಂದ್ರ ಇತರರಿದ್ದರು.