220 ಮಕ್ಕಳಿರುವ ಶಾಲೆಗೆ ಒಂದೇ ಶೌಚಾಲಯ!

A school with 220 children has only one toilet!
ವಿಜಯಪುರ ನಗರದ ಹೃದಯ ಭಾಗವಾದ ಮಹಾತ್ಮಾ ಗಾಂಧಿ ವೃತ್ತದ ಎದುರಿಗೆ ಇರುವ ಸರ್ಕಾರಿ ಕನ್ನಡ ಹೆಣ್ಣುಮಕ್ಕಳ ಮಾದರಿ ಪ್ರಾಥಮಿಕ ಶಾಲೆ-1 ರ ಶೌಚಾಲಯದ ಎದುರು ಮಕ್ಕಳು ಸಾಲು ನಿಂತಿರುವುದು.
Published on

ವಿಜಯಪುರ: ಶೌಚಕ್ಕಾಗಿ ಒಬ್ಬರ ಹಿಂದೆ ಒಬ್ಬರು ಹಚ್ಚಬೇಕು ಕ್ಯೂ..! ಶಾಲಾ ಮಕ್ಕಳಿಗಿಲ್ಲ ಸರಿಯಾದ ಶೌಚಾಲಯ, ಮೂತ್ರಾಲಯ..! ಇಲ್ಲಿನ ಮಕ್ಕಳ ಸ್ಥಿತಿ ನಿತ್ಯ ನರಕಯಾತನೆ..!

ಇದು ಶತಮಾನ ಕಂಡ ಶಾಲೆ ಎಂಬ ಖ್ಯಾತಿಯ ವಿಜಯಪುರ ನಗರದ ಹೃದಯ ಭಾಗವಾದ ಮಹಾತ್ಮಾ ಗಾಂಧಿ ವೃತ್ತದ ಎದುರಿಗೆ ಇರುವ ಸರ್ಕಾರಿ ಕನ್ನಡ ಹೆಣ್ಣುಮಕ್ಕಳ ಮಾದರಿ ಪ್ರಾಥಮಿಕ ಶಾಲೆ-1 ರ ದುಸ್ಥಿತಿ.

ವಿಜಯಪುರಕ್ಕೇ ಮೊದಲ ಶಾಲೆಯಾಗಿರುವ ಈ ಶಾಲೆಯಲ್ಲಿ ಪ್ರಸ್ತುತ 220ಕ್ಕೂ ಅಧಿಕ ಮಕ್ಕಳು ಓದುತ್ತಿದ್ದಾರೆ. ಆದರೆ ಇವರಿಗೆ ಇರೋದು ಒಂದೇ ಒಂದು ಶೌಚಾಲಯ ಹಾಗೂ ಒಂದೇ ಒಂದು ಮೂತ್ರಾಲಯ. ಈ ಒಂದು ಬಾತ್ ರೂಂನಲ್ಲಿ ಇಷ್ಟೊಂದು ವಿದ್ಯಾರ್ಥಿಗಳು ಯಾವಾಗ ಹೋಗೋದು ಎಂಬುದೇ ಶೋಚನೀಯ ಸಂಗತಿ.

1 ರಿಂದ 7ನೇ ತರಗತಿಯ ವರೆಗೆ ಕನ್ನಡ ಮಾಧ್ಯಮ ಹಾಗೂ 1 ರಿಂದ 5ನೇ ತರಗತಿಯ ವರೆಗೆ ಆಂಗ್ಲ ಮಾಧ್ಯಮ ಜೊತೆಗೆ ಎಲ್ ಕೆ ಜಿ, ಯುಕೆಜಿ ಕೂಡ ಇಲ್ಲಿಯೇ ನಡೆಯುತ್ತಿದೆ. ಮೊದಲಿನಿಂದಲೂ ಇದು ಹೆಣ್ಣು ಮಕ್ಕಳ ಶಾಲೆಯಾಗಿದ್ದು, ಕಳೆದ ನಾಲ್ಕು ವರ್ಷದಿಂದ ಇದೇ ಶಾಲೆಗೆ ಗಂಡು ಮಕ್ಕಳನ್ನು ಸೇರಿಸಲಾಗಿದೆ. ಹೀಗಾಗಿ ಒಟ್ಟು 220 ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಲ್ಲಿ 120ಕ್ಕೂ ಅಧಿಕ ಹೆಣ್ಣುಮಕ್ಕಳೇ ಇದ್ದಾರೆ. ಜೊತೆಗೆ 10 ಜನ ಶಿಕ್ಷಕ ಹಾಗೂ ಶಿಕ್ಷಕಿಯರಿದ್ದು, ಇವರೆಲ್ಲರಿಗೂ ಇದೊಂದೇ ಶೌಚಾಲಯ ಗತಿ ಎಂಬಂತಾಗಿದೆ.

ಶೌಚಕ್ಕೆ ಒಬ್ಬರು ಹೋದರೆ ಅವರ ಹಿಂದೆ ಸಾಕಷ್ಟು ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ನಿಲ್ಲಬೇಕಾಗುತ್ತದೆ. ಹೀಗಾಗಿ ಶೌಚಾಲಯದ ಸಮಸ್ಯೆಯಿಂದ ನಮ್ಮ ಹೆಣ್ಣು ಮಕ್ಕಳು ವಾರಕ್ಕೆ ಮೂರು ದಿನ ಶಾಲೆಗೆ ಹೋಗೋದನ್ನೇ ಬಿಟ್ಟಿದ್ದಾರೆ. ಇನ್ನು ಕೆಲವರು ನಿಸರ್ಗ ಕರೆ ಉಂಟಾದಾಗ ಮಧ್ಯಾಹ್ನವೇ ಶಾಲೆ ಬಿಟ್ಟು ಮನೆಗೆ ಬರ್ತಿದ್ದಾರೆ ಎಂದು ಪಾಲಕರು ಅಳಲು ತೋಡಿಕೊಂಡಿದ್ದಾರೆ.

ಈ ಹಿಂದೆ ಶಾಲೆಯಲ್ಲಿ ಸಾಕಷ್ಟು ಶೌಚಾಲಯಗಳಿದ್ದು, ರಸ್ತೆ ಅಗಲೀಕರಣ ಸಂದರ್ಭದಲ್ಲಿ ಅವು ನೆಲಸಮ ಆಗಿವೆ. ಹೀಗಾಗಿ ಇರೋ ಒಂದೇ ಶೌಚಾಲಯದಲ್ಲಿ ಒಮ್ಮೆ ಗಂಡು ಮಕ್ಕಳಿಗೆ, ಮತ್ತೊಮ್ಮೆ ಹೆಣ್ಣು ಮಕ್ಕಳಿಗೆ ಶೌಚಕ್ಕೆ ಕಳುಹಿಸುವ ಮೂಲಕ ಅನುಕೂಲ ಕಲ್ಪಿಸಲಾಗುತ್ತಿದೆ.

ಇನ್ನು ಇಲ್ಲಿರುವ 13 ಕೊಠಡಿಗಳಲ್ಲಿ 3 ಕೊಠಡಿಗಳು ಈಗಾಗಲೇ ಶಿಥಿಲಾವಸ್ಥೆ ತಲುಪಿದ್ದು, ಮಳೆ ಬಂದರೆ ಸೋರುತ್ತಿದ್ದು, ಇವುಗಳ ದುರಸ್ತಿ ಕಾರ್ಯ ಕೂಡ ಆಗಬೇಕಿದೆ. ಒಟ್ಟಿನಲ್ಲಿ ಶತಮಾನ ಕಂಡ ಶಾಲೆಯಲ್ಲಿ ಸಾಲು ಸಾಲು ಸಮಸ್ಯೆಗಳಿದ್ದು ಅದ್ಯಾವಾಗ ಬಗೆಹರಿಯುತ್ತವೋ ಎಂಬಂತಾಗಿದೆ.

ಸರ್ಕಾರ ಶೈಕ್ಷಣಿಕ ಅಭಿವೃದ್ಧಿಗೆ ಸಾಕಷ್ಟು ಹಣವನ್ನು ಖರ್ಚು ಮಾಡಿದರೂ ಮಕ್ಕಳಿಗೆ ಮೂಲ ಸೌಕರ್ಯಗಳನ್ನು ಒದಗಿಸದಿದ್ದರೆ ಹೇಗೆ. ನಿತ್ಯ ಮಕ್ಕಳು ನೈಸರ್ಗಿಕ ಕರೆಗೆ ಹೇಗೆ ಹೋಗಬೇಕು? ಮಕ್ಕಳು ಶೌಚ ಬಂದಾಗ ವಿಸರ್ಜಿಸದಿದ್ದರೆ, ಅದು ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಈ ಬಗ್ಗೆ ಸಂಬಂಧಿತ ಇಲಾಖೆ ಮುತುವರ್ಜಿ ವಹಿಸಿ ವಿದ್ಯಾರ್ಥಿಗಳ ಕಾಳಜಿಗೆ ಮುಂದಾಗಬೇಕು.
ಮಾಲಾ ಮಾದರ, ಪಾಲಕರು
ಶಾಲೆಯಲ್ಲಿ ಶೌಚಾಲಯ ಕಟ್ಟಡ ಒಂದೇ ಇರುವುದರಿಂದ ಈ ಸಮಸ್ಯೆ ಉದ್ಬವಿಸಿದೆ. ನಾವು ಈ ಬಗ್ಗೆ ಮೇಲಾಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಮತ್ತೊಮ್ಮೆ ಈ ಬಗ್ಗೆ ಗಮನಸೆಳೆದು ಆದಷ್ಟು ಶೀಘ್ರವಾಗಿ ಹೆಚ್ಚುವರಿ ಶೌಚಾಲಯ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು.
ಬಸವರಾಜ ತೇರದಾಳ, ಮುಖ್ಯ ಗುರುಗಳು, ಸರಕಾರಿ ಕನ್ನಡ ಹೆಣ್ಣುಮಕ್ಕಳ ಮಾದರಿ ಪ್ರಾಥಮಿಕ ಶಾಲೆ 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net