ಸಂಪೂರ್ಣ ಸವಲತ್ತುಗಳ ಜಾಗೃತಿ ಶಿಬಿರದಲ್ಲಿ 22 ಸೇವೆಗಳು ಲಭ್ಯ

19 yelandur 01
ಯಳಂದೂರು ತಾಲೂಕಿನ ಅಗರ ಗ್ರಾಮದ ವಾಲ್ಮೀಕಿ ಸಮುದಾಯ ಭವನದಲ್ಲಿ ಗುರುವಾರ ಧರ್ತಿ ಆಬಾ ಜನಭಾಗಿಧಾರಿ ಅಭಿಯಾನದ ಸಂಪೂರ್ಣ ಸವಲತ್ತುಗಳ ಜಾಗೃತಿ ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿವಿಧ ಇಲಾಖೆ ಅಧಿಕಾರಿಗಳಿಂದ ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು.
Published on

ಯಳಂದೂರು: ತಾಲೂಕಿನ ಅಗರ ಗ್ರಾಮದ ವಾಲ್ಮೀಕಿ ಸಮುದಾಯ ಭವನದಲ್ಲಿ ಗುರುವಾರ ಜಿಲ್ಲಾ ಬುಡಕಟ್ಟು ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪರಿಶಿಷ್ಟ ಪಂಗಡದ ಸಮುದಾಯದವರಿಗೆ ಧರ್ತಿ ಆಬಾ ಜನಭಾಗಿಧಾರಿ ಅಭಿಯಾನದ ಸಂಪೂರ್ಣ ಸವಲತ್ತುಗಳ ಜಾಗೃತಿ ಶಿಬಿರ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕೇಶವಮೂರ್ತಿ ಮಾತನಾಡಿ, ತಾಲೂಕಿನಲ್ಲಿ ಬಿಳಿಗಿರಿರಂಗನಬೆಟ್ಟ, ಅಗರ ಹಾಗೂ ಕಂದಹಳ್ಳಿ ಗ್ರಾಮಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಪರಿಶಿಷ್ಟ ಪಂಗಡ ಅಥವಾ ಬುಡಕಟ್ಟು ಜನಾಂಗದವರು ಶೇ.50 ಕ್ಕಿಂತಲೂ ಹೆಚ್ಚು ಜನರು ವಾಸಿಸುವ ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಗ್ರಾಮೀಣ ಭಾಗದಲ್ಲಿ ಆದಾಯ, ಜಾತಿ, ವೃದ್ಧಾಪ್ಯ ವೇತನ, ರೇಷನ್ ಕಾರ್ಡ್, ಆಧಾರ್ ಕಾರ್ಡ್, ಅಂಗವಿಕಲರಿಗೆ ನೀಡುವ ಸೌಲಭ್ಯಗಳು ಸೇರಿದಂತೆ ಒಟ್ಟು 22 ಸೇವೆಗಳನ್ನು ಒಂದೇ ಸೂರಿನಡಿ ಸುಲಭವಾಗಿ ದೊರೆಯುವ ಕಾರ್ಯಕ್ರಮವಾಗಿದೆ. ಅಗರ ಗ್ರಾಮದಲ್ಲಿ 2 ದಿನಗಳ ಕಾಲ ಈ ಅಭಿಯಾನ ನಡೆಯಲಿದೆ. ನಂತರ ಕಂದಹಳ್ಳಿ ಹಾಗೂ ಬಿಳಿಗಿರಿರಂಗನಬೆಟ್ಟದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ಮಾಹಿತಿ ನೀಡಿದರು.

ಆರೋಗ್ಯ ಇಲಾಖೆಯಿಂದ ಆರೋಗ್ಯ ಉಚಿತ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಗ್ರಾಪಂ ಅಧ್ಯಕ್ಷ ವೆಂಕಟಾಚಲ, ಬುಡಕಟ್ಟು ಇಲಾಖೆ ಅಧಿಕಾರಿ ರಾಜೇಶ್, ಕೃಷಿ ಅಧಿಕಾರಿ ವೆಂಕಟರಂಗಶೆಟ್ಟಿ, ಆಹಾರ ನಿರೀಕ್ಷಕ ಬಿಸಲಯ್ಯ, ವೈದ್ಯ ಡಾ. ಅರುಣ್‌ಕುಮಾರ್, ಪಿಡಿಒ ಮಂಜುನಾಥ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net