

ಕೊಡೇಕಲ್: ಮಹಾರಾಷ್ಟ್ರದಲ್ಲಿ ಹೆಚ್ಚಿನ ಮಳೆ ಆಗುತ್ತಿದ್ದರಿಂದ ಕೊಯ್ನಾ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ಕೃಷ್ಣಾ ನದಿಗೆ ನೀರು ಹರಿಸಲಾಗುತ್ತಿದೆ. ಹೀಗಾಗಿ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ.
ಜಲಾಶಯದ 22 ಕ್ರಸ್ಟ್ ಗೇಟ್ಗಳಿಂದ ಭಾನುವಾರ 2.37 ಲಕ್ಷ ಕ್ಯೂಸೆಕ್ ನೀರು ನದಿಗೆ ಹರಿಸಲಾಗಿದೆ. ಒಳಹರಿವಿನಲ್ಲಿ ಏರಿಳಿತ ಆಗುತ್ತಿದ್ದು, ಕಳೆದೆರಡು ದಿನಗಳಿಂದ ಹಂತಹಂತವಾಗಿ ಜಲಾಶಯದಿಂದ ನದಿಗೆ ನೀರು ಹರಿಸಲಾಗುತ್ತಿದೆ. ವಾರದಿಂದ ಅಪಾರ ಪ್ರಮಾಣದ ನೀರನ್ನು ನದಿಗೆ ಹರಿಸುತ್ತಿದ್ದರಿಂದ ಪ್ರವಾಹದಲ್ಲೂ ಏರಿಳಿತ ಕಾಣಲಾಗುತ್ತಿದೆ. ಆದರೆ ಭಾನುವಾರ ಮತ್ತೆ ಜಲಾಶಯದಿಂದ 2,37,220 ಲಕ್ಷ ಕ್ಯೂಸೆಕ್ ನೀರು ಹರಿಸಲು ಆರಂಭಿಸಿರುವ ಕಾರಣ ಮತ್ತೆ ಕೃಷ್ಣಾ ನದಿ ಪ್ರವಾಹದಲ್ಲಿ ಏರಿಕೆಯಾಗಿದ್ದು, ತೀರದ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ.
ನದಿ ತೀರದ ಗ್ರಾಮಗಳಾದ ದೇವರಗಡ್ಡಿ, ಮೇಲಿನಗಡ್ಡಿ, ನಾರಾಯಣಪುರ, ಅಮ್ಮಾಪುರ ಎಸ್.ಕೆ., ರಾಯನಗೋಳ, ಗೆದ್ದಲಮರಿ, ತಿಂಥಣಿ, ಶೆಳ್ಳಗಿ ಮೊದಲಾದ ಹಳ್ಳಿಗಳಲ್ಲಿ ಪ್ರವಾಹ ಬಗ್ಗೆ ಗ್ರಾಮ ಪಂಚಾಯಿತಿಯವರು ಡಂಗೂರ ಸಾರಿದ್ದು, ಜನರು ನದಿ ತೀರಕ್ಕೆ ಹೋಗದಂತೆ ಎಚ್ಚರಿಕೆ ನೀಡಿದ್ದಾರೆ. ಕಂದಾಯ ಅಧಿಕಾರಿಗಳು ಮತ್ತು ಸಿಬ್ಬಂದಿ ಕೂಡ ಮುನ್ನಚ್ಚರಿಕೆ ವಹಿಸಿದ್ದಾರೆ.