

ಚಿತ್ರದುರ್ಗ: ಪ್ರಸಕ್ತ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಮಾ.21ರಿಂದ ಏಪ್ರಿಲ್ 4 ರವರೆಗೆ ನಡೆಯಲಿದೆ. ಇದಕ್ಕಾಗಿ ಜಿಲ್ಲೆಯಲ್ಲಿ 82 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. 24,416 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆ ಕೊಠಡಿ ಸಹಿತ ಅಗತ್ಯ ಸಿದ್ಧತೆಗಳು ಗುರುವಾರ ಪೂರ್ಣಗೊಂಡಿವೆ. ಅಧಿಕಾರಿಗಳು ವೆಬ್‌ಕಾಸ್ಟಿಂಗ್ ಟ್ರಯಲ್ ಇತ್ಯಾದಿ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ.
ಜಿಪಂ ಕಚೇರಿಯಲ್ಲಿ ಕೇಂದ್ರೀಕೃತ ವೀಕ್ಷಣಾ ಘಟಕ ಸ್ಥಾಪಿಸಲಾಗಿದೆ. 82 ಪರೀಕ್ಷಾ ಕೇಂದ್ರಗಳ 1135 ಕೊಠಡಿಗಳಿಗೆ ವೆಬ್‌ಕಾಸ್ಟಿಂಗ್ ಗಾಗಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ಮುಂಜಾಗ್ರತೆಯಾಗಿ ಆರೋಗ್ಯ ಇಲಾಖೆ ಸಿಬ್ಬಂದಿ, ತಜ್ಞರನ್ನು ಪ್ರಥಮ ಚಿಕಿತ್ಸಾ ವ್ಯವಸ್ಥೆಗೆ ಕ್ರಮ ವಹಿಸಲಾಗಿದೆ. ಎಲ್ಲ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀ.ವ್ಯಾಪ್ತಿಯಲ್ಲಿ ಪರೀಕ್ಷಾ ಅವಧಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ವೇಳಾಪಟ್ಟಿ: ಮಾ.21ರಂದು ಪ್ರಥಮ ಭಾಷೆ. 24ರಂದು ಗಣಿತ, 26ರಂದು ಇಂಗ್ಲಿಷ್, 29 ರಂದು ಸಮಾಜ ವಿಜ್ಞಾನ, ಏಪ್ರಿಲ್ 2ರಂದು ವಿಜ್ಞಾನ, 4ರಂದು ಹಿಂದಿ + ಎನ್‌ಎಸ್‌ಕ್ಯೂಎಫ್ ವಿಷಯಗಳಿಗೆ ಪರೀಕ್ಷೆ ನಡೆಯಲಿದೆ. ಪರೀಕ್ಷೆ ಬೆಳಗ್ಗೆ 10 ರಿಂದ ಪ್ರಾರಂಭವಾಗಲಿದೆ.
ಚಳ್ಳಕೆರೆ ತಾಲೂಕಿನಲ್ಲಿ 20 ಪರೀಕ್ಷಾ ಕೇಂದ್ರಗಳಿದ್ದು, 5472 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಇದೇ ಮಾದರಿಯಲ್ಲಿ ಚಿತ್ರದುರ್ಗ-22-6,635, ಹಿರಿಯೂರು-13-3,677, ಹೊಳಲ್ಕೆರೆ -8- 2,854, ಹೊಸದುರ್ಗ-11-3,195 ಹಾಗೂ ಮೊಳಕಾಲ್ಮೂರು ತಾಲೂಕಿನಲ್ಲಿ 8 ಪರೀಕ್ಷಾ ಕೇಂದ್ರಗಳಲ್ಲಿ 2,583 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಕೋಟ್
ಪರೀಕ್ಷೆಗೆ ಸಿದ್ಧತೆಗಳನ್ನು ಅಂತಿಮಗೊಳಿಸಲಾಗಿದೆ. ಹಾಜರಾತಿ ಕೊರತೆ ಕಾರಣಕ್ಕೆ ಹಾಲ್‌ಟಿಕೆಟ್ ಸಿಕ್ಕಿಲ್ಲವೆಂಬ ದೂರು ತಮಗೆ ಬಂದಿಲ್ಲ.ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬೆಳಗ್ಗೆ 9.30 ರೊಳಗೆ ಹಾಜರಾಗಬೇಕು. 10 ಗಂಟೆಗೆ ಪರೀಕ್ಷೆ ಆರಂಭವಾಗಲಿದೆ.
ಎಂ.ಆರ್. ಮಂಜುನಾಥ್, ಡಿಡಿಪಿಐ, ಚಿತ್ರದುರ್ಗ
----