

ಮೈಸೂರು: ಕ್ರೆಡಾಯ್ ಮತ್ತು ಬಿಲ್ಡರ್ಸ್ ಅಸೋಸಿಯೇಷನ್ ಸಹಯೋಗದಲ್ಲಿ ರೇರಾ (ರಿಯಲ್ ಎಸ್ಟೇಟ್ ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ ಕುರಿತು ಅ. 21ರಂದು ಬೆಳಗ್ಗೆ 10ಕ್ಕೆ ಜೆ.ಪಿ.ನಗರದ ಸ್ಟಲಿರ್ಂಗ್ ಚಿತ್ರಮಂದಿರ ರಸ್ತೆಯ ಎಂಬಿಸಿಟಿ ಸಭಾಂಗಣದಲ್ಲಿ ಕಾರ್ಯಾಗಾರ ಆಯೋಜಿಸಲಾಗಿದೆ.
ರಾಜ್ಯ ರೇರಾ ಸಂಸ್ಥೆ ಅಧ್ಯಕ್ಷ ಎಚ್.ಎಸ್.ಕಿಶೋರ್‌ಚಂದ್ರ, ಕಾರ್ಯದರ್ಶಿ ಇಬ್ರಾಹಿಂ ಮೈಗೂರ್, ಮುಡಾ ಆಯುಕ್ತ ಜಿ.ಟಿ.ದಿನೇಶ್‌ಕುಮಾರ್, ಪಾಲಿಕೆ ಆಯುಕ್ತ ಜಿ.ಲಕ್ಷ್ಮೀಕಾಂತ ರೆಡ್ಡಿ ಇತರರು ಪಾಲ್ಗೊಳ್ಳಲಿದ್ದಾರೆ. ಆಯೋಜಕರಾದ ಕ್ರೆಡಾಯ್ ಅಧ್ಯಕ್ಷ ಎನ್.ಎಸ್.ಮುರುಳೀಧರ್, ಕಾರ್ಯದರ್ಶಿ ಎಂ.ಎಸ್.ಹರೀಶ್ ಶೆಣೈ, ಕಾರ್ಯದರ್ಶಿ ವಿ.ಶ್ರೀನಾಥ್ ಭಾಗಿಯಾಗಲಿದ್ದಾರೆ ಎಂದು ಕ್ರೆಡಾಯ್ ಉಪಾಧ್ಯಕ್ಷ ಶ್ರೀಹರಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಯಕ್ರಮ ಸಂಯೋಜಕ ಶ್ರೀರಾಮ್ ಮಾತನಾಡಿ, ರೇರಾ ಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯಸ್ಥರು, ಮೈಸೂರಿನ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಮುಖ್ಯಸ್ಥರು, ಮೈಸೂರು, ಚಾಮರಾಜನಗರ, ಹಾಸನ, ಮಡಿಕೇರಿ ಮತ್ತು ಮಂಡ್ಯದ ಖಾಸಗಿ ವಸತಿ ಬಡಾವಣೆ ಅಭಿವೃದ್ಧಿದಾರರು, ಅಪಾರ್ಟ್‌ಮೆಂಟ್ ನಿರ್ಮಾತೃಗಳು ಭಾಗವಹಿಸಲಿದ್ದು, ಈ ಕಾಯ್ದೆ ಮತ್ತು ಯೋಜನೆಗಳ ಅನುಮೋದನೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದುಕೊಳ್ಳಬಹುದು. ನೇರವಾಗಿ ಅಧಿಕಾರಿಗಳೊಂದಿಗೆ ವಿಚಾರ ವಿನಿಮಯ ಮಾಡಬಹುದು ಎಂದು ಮಾಹಿತಿ ನೀಡಿದರು.
ಭಾಗವಹಿಸಲು ಗೂಗಲ್ ಫಾರ್ಮ್ ಆಧಾರಿತ ನೋಂದಣಿ ಕಡ್ಡಾಯವಾಗಿದ್ದು, ವಿವಿಧ ಪ್ರಶ್ನೆಗಳನ್ನು ನೋಂದಣಿ ಸಂದರ್ಭದಲ್ಲಿ ಸಲ್ಲಿಸಬೇಕು. ಮಾಹಿತಿಗಾಗಿ ಮೊ.ಸಂ. 7019305529, 6366351290 ಸಂಪರ್ಕಿಸಬೇಕು ಎಂದು ತಿಳಿಸಿದರು.
ಬಿಲ್ಡರ್ಸ್ ಅಸೋಸಿಯೇಷನ್ ರಘುನಾಥ್, ಖಜಾಂಚಿ ಅರುಣ್ ಪಂಡಿತ್ ಇತರರಿದ್ದರು.