21ರಂದು ನರಗುಂದದಲ್ಲಿ ರೈತ ಸಮಾವೇಶ

17Manju2-Web
ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಹದಾಯಿ ಹೋರಾಟಗಾರ ಶಂಕರ ಅಂಬಲಿ ಮಾತನಾಡಿದರು. ಶಂಕರಗೌಡ ಪಾಟೀಲ, ರಾಘವೇಂದ್ರ ನಾಯಕ, ರಮೇಶ ವಾಲಿ ಇತರರು ಇದ್ದರು.
Published on

ಬೆಳಗಾವಿ: ರೈತ ಬಂಡಾಯದ 41ನೇ ಹುತಾತ್ಮ ದಿನದ ಅಂಗವಾಗಿ ಜು. 21ರಂದು ಗದಗ ಜಿಲ್ಲೆಯ ನರಗುಂದದಲ್ಲಿ ಬೃಹತ್ ರೈತ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರೈತ ಸೇನೆ ಅಧ್ಯಕ್ಷ ಹಾಗೂ ಮಹದಾಯಿ ಹೋರಾಟಗಾರ ಶಂಕರ ಅಂಬಲಿ ತಿಳಿಸಿದ್ದಾರೆ.

ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 11 ಗಂಟೆಗೆ ರೈತ ನಾಯಕ ದಿ. ಬಾಬಾಗೌಡ ಪಾಟೀಲ ವೇದಿಕೆಯಲ್ಲಿ ರೈತ ಸಮಾವೇಶ ಆಯೋಜಿಸಲಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ರೈತ ಸಂಘಟನೆಗಳ ಕಾರ್ಯಕರ್ತರು, ರೈತರು ಸೇರಿದಂತೆ 1 ಲಕ್ಷಕ್ಕೂ ಅಧಿಕ ಜನರು ಪಾಲ್ಗೊಳ್ಳಲಿದ್ದಾರೆ ಎಂದರು. ಮಹದಾಯಿ, ಕಳಸಾ-ಬಂಡೂರಿ ಯೋಜನೆ ಅನುಷ್ಠಾನ, ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಈಗಾಗಲೇ ಎಲ್ಲ ರೈತ ಸಂಘಟನೆಗಳು ಹಳ್ಳಿ-ಹಳ್ಳಿಗೆ ತೆರಳಿ ರೈತರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಹಾಗಾಗಿ ರೈತರೆಲ್ಲರೂ ಸ್ವಯಂ ಪ್ರೇರಣೆಯಿಂದ ಈ ಸಮಾವೇಶಕ್ಕೆ ಆಗಮಿಸಲಿದ್ದಾರೆ ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರ ಹೊಸ ಕೃಷಿ ಕಾಯ್ದೆ ಜಾರಿಗೊಳಿಸುವ ಮೂಲಕ ರೈತ ಸಮುದಾಯವನ್ನು ಬೀದಿಪಾಲು ಮಾಡುವ ಹುನ್ನಾರ ನಡೆಸಿದೆ. ಅಲ್ಲದೆ, ರಾಜಕೀಯ ಲಾಭಕ್ಕಾಗಿ ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕೆ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ರೈತರು ಅನುಭವಿಸುತ್ತಿರುವ ಅನೇಕ ಬಗೆಯ ಸಮಸ್ಯೆ ನಿವಾರಿಸಲು ಮುಂದಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ನರಗುಂದದ ರೈತ ಸಮಾವೇಶದ ಮೂಲಕ ಸರ್ಕಾರಗಳಿಗೆ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ತಿಳಿಸಿದರು.

ಶಂಕರಗೌಡ ಪಾಟೀಲ, ರಾಘವೇಂದ್ರ ನಾಯಕ, ರಮೇಶ ವಾಲಿ, ಸಿದ್ಧರಾಯ ಅಂಗಡಿ, ಗಣೇಶ ಪೂಜೇರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net