21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ

CTD YOGA-PRAMANA PATRA----
Published on

ಚಿತ್ರದುರ್ಗ: ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಜೂ.21ರಂದು 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನಡೆಯುವ ಸಾ ಮೂಹಿಕ ಯೋಗ ಅಭ್ಯಾಸದಲ್ಲಿ ಸಾರ್ವಜನಿಕರು, ಎಲ್ಲ ಇಲಾಖೆಗಳ ಅಧಿಕಾರಿ, ನೌಕರರು ತಪ್ಪದೇ ಪಾಲ್ಗೊಳ್ಳಬೇಕು ಎಂದು ಜಿಪಂ ಉಪ ಕಾರ್ಯದರ್ಶಿ ಡಾ. ರಂಗಸ್ವಾಮಿ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಯೋಗ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಅಂದು ಬೆಳಗ್ಗೆ 7ರಿಂದ 7.45ರವರೆಗೆ 2000 ಸಾವಿರಕ್ಕೂ ಅಧಿಕ ಯೋಗಾಸಕ್ತರು ಸಾಮೂಹಿಕ ಯೋಗಾಭ್ಯಾಸದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವರು. ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಜಾಗೃತಿ ಜಾಥಾ: ಜೂ. 19ರಂದು ನಗರದಲ್ಲಿ ಬೃಹತ್ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಆಯುಷ್ ವೈದ್ಯಾಧಿಕಾರಿ ಡಾ. ಶಿವಕುಮಾರ್ ತಿಳಿಸಿದರು. ಅಂದು ಬೆಳಗ್ಗೆ 7 ಕ್ಕೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿ ಜಾಥಾಕ್ಕೆ ಹಸಿರು ನಿಶಾನೆ ತೋರಿಸುವರು. ಜಿಲ್ಲೆಯ ಯೋಗ ಸಂಸ್ಥೆಗಳು, ಆಯುರ್ವೇದ ಕಾಲೇಜು ವಿದ್ಯಾರ್ಥಿಗಳು, ನಗರದ ಸರ್ಕಾರಿ ಕಚೇರಿ ಅಧಿಕಾರಿ, ಸಿಬ್ಬಂದಿ ಪಾಲ್ಗೊಳ್ಳುವರು ಎಂದು ತಿಳಿಸಿದರು.

ಓನಕೆ ಒಬವ್ವ ವೃತ್ತ, ಮದಕರಿ ನಾಯಕರ ವೃತ್ತ, ರಂಗಯ್ಯನ ಬಾಗಿಲು, ದೊಡ್ಡ ಪೇಟೆ, ಉಚ್ಚಂಗಿಯಲ್ಲಮ್ಮ ದೇವಾಲಯ ರಸ್ತೆ, ಆನೆ ಬಾಗಿಲು, ಗಾಂಧಿ ವೃತ್ತ, ಎಸ್‌ಬಿಐ ವೃತ್ತದ ಮೂಲಕ ಹಳೆ ಮಾಧ್ಯಮಿಕ ಆವರಣದಲ್ಲಿ ಜಾಥಾ ಸಂಪನ್ನಗೊಳ್ಳಲಿದೆ ಎಂದು ಆಯುಷ್ ವೈದ್ಯಾಧಿಕಾರಿ ಡಾ. ಶಿವಕುಮಾರ್ ತಿಳಿಸಿದರು.

ಯೋಗ ತರಬೇತಿ: ವಿದ್ಯಾರ್ಥಿ ಚೇತನ ಕಾರ್ಯಕ್ರಮದಡಿ ಜಿಲ್ಲೆಯ ಆಯ್ದ ಸರ್ಕಾರಿ ಶಾಲೆ ಮಕ್ಕಳಿಗೆ 2 ತಿಂಗಳ ಕಾಲ ಯೋಗ ತರಬೇತಿ ನೀಡಲಾಗಿದೆ. ಯೋಗ ತರಬೇತಿ ಸಂಸ್ಥೆಗಳ ಶಿಕ್ಷಕರು ಉಚಿತವಾಗಿ ಯೋಗ ತರಬೇತಿ ನೀಡಿದ್ದಾರೆ ಎಂದು ಶಿವಕುಮಾರ್ ತಿಳಿಸಿದರು.

ವಿದ್ಯಾರ್ಥಿ ಚೇತನ ಕಾರ್ಯಕ್ರಮದಡಿ ಜಿಲ್ಲೆಯ ಆಯ್ದ ಸರ್ಕಾರಿ ಶಾಲೆ ಮಕ್ಕಳಿಗೆ 2 ತಿಂಗಳ ಕಾಲ ಯೋಗ ತರಬೇತಿ ನೀಡಿದ ಶಿಕ್ಷಕರಿಗೆ ಜಿಪಂ ಉಪ ಕಾರ್ಯದರ್ಶಿ ಡಾ.ರಂಗಸ್ವಾಮಿ ಪ್ರಮಾಣ ಪತ್ರ ವಿತರಿಸಿದರು. ಸಭೆಯಲ್ಲಿ ಸಾಮೂಹಿಕ ಯೋಗಾಭ್ಯಾಸ ಶಿಷ್ಟಾಚಾರದ ಪ್ರತಿ ಬಿಡುಗಡೆ ಮಾಡಲಾಯಿತು.

ಜಿಲ್ಲಾ ಆಯುಷ್ ಅಧಿಕಾರಿ ಡಾ. ಚಂದ್ರಕಾಂತ್ ನಾಗಸಮುದ್ರ, ಮಹಿಳಾ ಮತ್ತು ಮಕ್ಕಳ ಇಲಾಖೆ ಉಪ ನಿರ್ದೇಶಕಿ ಭಾರತಿ ಬಣಕಾರ್, ಜಿಲ್ಲಾ ಕಾರ್ಮಿಕ ಅಧಿಕಾರ ಅನಿಲ್ ಬಿ. ಬಗಟಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶರಣಬಸಪ್ಪ ಬೋಗಿ, ಪಿಯುಡಿಡಿ ಕೆ. ತಿಮ್ಮ ಯ್ಯ, ಆಯುಷ್ ಇಲಾಖೆ ವೈದ್ಯಾಧಿಕಾರಿಗಳಾದ ಡಾ. ವಿಜಯ್‌ಭಾಸ್ಕರ್, ಡಾ. ನಾಗರಾಜನಾಯ್ಕ, ಡಾ. ವಿಜಯಲಕ್ಷ್ಮೀ, ಡಾ. ಪ್ರಶಾಂತ್, ಜಿಲ್ಲೆಯ ವಿವಿಧ ಯೋಗ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಆಯುರ್ವೇದ ಕಾಲೇಜು ಪ್ರಾಚಾರ್ಯರು, ಸ್ಕೌಟ್ಸ್ ಮತ್ತು ಗೈಡ್ಸ್, ಸೇವಾದಳ ಮುಖ್ಯಸ್ಥರು ಇದ್ದರು.

ಯೋಗ ತರಬೇತಿ ಶಿಬಿರ

ಚಿತ್ರದುರ್ಗ: ಧಾವಂತ ಬದುಕಿನಲ್ಲಿ ಮಹಿಳೆಯರು ದೈಹಿಕ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗದ ಮೊರೆ ಹೋಗಬೇಕು ಎಂದು ಆಯುಷ್ ಇಲಾಖೆ ಹಿರಿಯ ವೈದ್ಯಾಧಿಕಾರಿ ಪಿ. ವಿಜಯಲಕ್ಷ್ಮೀ ಹೇಳಿದರು.

ಭಾರತೀಯ ಯೋಗ ಶಿಕ್ಷಣ ಸಂಸ್ಥೆ 4ನೇ ವಾರ್ಷಿಕೋತ್ಸವ ಅಂಗವಾಗಿ ಕೋಟೆ ವಾಯು ವಿಹಾರಿಗಳ ಸಂಘ, ಆಯುಷ್ ಇಲಾಖೆ ಆಶ್ರಯದಲ್ಲಿ ಕರುವರ್ತಿ ಶ್ರೀ ಆಂಜನೇಯ ಸ್ವಾಮಿ ದೇವಾಲಯ ಆವರಣದಲ್ಲಿ ಆಯೋಜಿಸಿದ್ದ ಯೋಗ ಉಚಿತ ತರಬೇತಿ ಶಿಬಿರದಲ್ಲಿ ಮಾತನಾಡಿ, ಒತ್ತಡ ನಿವಾರಣೆಗೆ ಯೋಗ ಸಹಕಾರಿಯಾಗಲಿದೆ ಎಂದರು.

ಕೋಟೆ ವಾಯುವಿಹಾರಿಗಳ ಸಂಘದ ಅಧ್ಯಕ್ಷ ಆರ್. ಸತ್ಯಣ್ಣ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಮೊಹೀದ್ದೀನ್‌ಖಾನ್, ಯೋಗ ಶಿಕ್ಷಕಿಯ ರಾದ ಮಂಜುಳಾ, ವಸಂತಲಕ್ಷ್ಮೀ, ರವಿ ಕೆ. ಅಂಬೇಕರ್, ನಿವೃತ್ತ ಪೊಲೀಸ್ ಅಧಿಕಾರಿ ಎಂ. ಮಲ್ಲಿಕಾರ್ಜುನಾಚಾರ್, ಮಲ್ಲಿಕಾರ್ಜುನಪ್ಪ ಮತ್ತಿತರರು ಇದ್ದರು. ಈ ಸಂದರ್ಭದಲ್ಲಿ ಡಾ. ವಿಜಯಲಕ್ಷ್ಮೀ ಅವರನ್ನು ಗೌರವಿಸಲಾಯಿತು.

-------------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net