21ನೇ ಶತಮಾನ ಕೃಷಿಯ ಯುಗ

IAT
Published on

ಚಿತ್ರದುರ್ಗ: 21ನೇ ಶತಮಾನವೂ ಕೃಷಿಯ ಯುಗವಾಗಿದ್ದು, ಈ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡಬೇಕಿದೆ. ಇದರಿಂದ ಹೊಸ ಚೈತನ್ಯ ಆರಂಭವಾಗಲಿದೆ ಎಂದು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ.ಅಶೋಕ ಎಂ. ದಳವಾಯಿ ತಿಳಿಸಿದರು.

ಎಪಿಎಂಸಿ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಚಿತ್ರದುರ್ಗ ಕೃಷಿ ತಂತ್ರಜ್ಞರ ಸಂಸ್ಥೆ ಪ್ರಾದೇಶಿಕ ಘಟಕ ರಜತ ಮಹೋತ್ಸವ ಭವನವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.

ವಿಜ್ಞಾನ, ತಂತ್ರಜ್ಞಾನ ಸಾಕಷ್ಟು ಮುಂದುವರಿದಿದ್ದರೂ ಇಂದಿನ ಹವಾಮಾನ ವೈಪರೀತ್ಯ ಎಲ್ಲರನ್ನೂ ಕಾಡುತ್ತಿದೆ. ಮಳೆಗಾಲ ಆರಂಭ, ಮುಕ್ತಾಯ ಯಾವಾಗ ಎಂಬುದೇ ಗೊತ್ತಾಗುತ್ತಿಲ್ಲ. ಹೊಸ ಸವಾಲುಗಳಿಗೆ ಅನುಗುಣವಾಗಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುವ ಸನ್ನಿವೇಶ ಸೃಷ್ಟಿಯಾಗಿದೆ ಎಂದರು.

ಕೃಷಿ ಕ್ಷೇತ್ರದಲ್ಲಿ ಸ್ಥಿತಿ ಸ್ಥಾಪಕತ್ವ, ನಿಖರ ಹಾಗೂ ಇನ್ನಷ್ಟು ಸ್ಮಾರ್ಟ್ ಆಗುವ ಅಗತ್ಯತೆ ಹೆಚ್ಚಿದೆ. ರೈತ ಅನ್ನದಾತ ಮಾತ್ರವಲ್ಲ. ನಾಗರಿಕತೆಯ ಹೊಸ ಮನುಷ್ಯನಾಗಿ ರೂಪುಗೊಂಡಿದ್ದಾನೆ ಎಂದರು. ಈ ಯುಗದ ಔದ್ಯೋಗಿಕ ರಂಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೃಷಿ, ಅರಣ್ಯದ ಜೈವಿಕ ಸಂಪನ್ಮೂಲ ಒದಗಿಸಬೇಕಿದೆ. ನೂತನ ತಳಿ, ವಿನೂತನ ಪ್ರಕಾರದ ನಿರ್ವಹಣಾ ವ್ಯವಸ್ಥೆ ಕಂಡುಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

ದೇಶದ ಒಟ್ಟು ಉತ್ಪಾದನೆಯಲ್ಲಿ ಶೇ. 30 ರಷ್ಟು ನಾಶವಾಗುತ್ತಿದೆ. ಹೀಗಾಗಿ ಕಡಿಮೆ ನೀರು, ಮಣ್ಣು ಬಳಸಿ ಕೃಷಿ ಮಾಡುವ ಅನಿವಾರ್ಯತೆ ಬಂದೊದಗಿದೆ. ಭಾರತದಲ್ಲಿನ ಮಣ್ಣಿನ ವಿಶೇಷತೆ ಇನ್ನಾವ ದೇಶದಲ್ಲೂ ಇಲ್ಲ. ನಮ್ಮಲ್ಲಿ 450 ಪ್ರಕಾರದ ಮಣ್ಣುಗಳಿವೆ. ವಾರ್ಷಿಕ ಕನಿಷ್ಠ 2 ರಿಂದ 3 ಬೆಳೆಗಳನ್ನು ಬೆಳೆಯಬಹುದು ಎಂದು ತಿಳಿಸಿದರು.

ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ್ ಮಾತನಾಡಿ, ಕೃಷಿಯಲ್ಲಿ ಉತ್ಪಾದನೆ ಜೊತೆಗೆ ರೈತರ ಆದಾಯ ಹೆಚ್ಚಿಸಬೇಕೆಂಬ ಸವಾಲು ಮುಂದಿದೆ. ಕೃಷಿಯಲ್ಲಿ ಸುಸ್ಥಿರತೆ ಕಾಣಲು ರೈತರಿಗೆ ಮನವರಿಕೆ ಮಾಡಿಕೊಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.

ಸಿಇಒಗಳಿಗೆ ಸನ್ಮಾನ: ಇದೇ ವೇಳೆ ಇನ್‌ಪುಟ್, ಔಟ್‌ಪುಟ್, ಮೌಲ್ಯವರ್ಧನೆಯಲ್ಲಿ ಉತ್ತಮ ಸಾಧನೆಗೈದ ತುರುವನೂರಿನ ಮಂಜುನಾಥಸ್ವಾಮಿ, ಕೊಂಡ್ಲಹಳ್ಳಿ ಬಿಳಿನೀರು ಚಿಲುಮೆ, ಹೊಸದುರ್ಗದ ಶ್ರೀರಾಂಪುರ ದುರ್ಗದಸಿರಿ ರೈತ ಉತ್ಪಾದಕ ಸಂಸ್ಥೆಯ ಸಿಇಒಗಳನ್ನು ಸನ್ಮಾನಿಸಲಾಯಿತು.

ಬೆಂಗಳೂರು ಕೃಷಿ ತಂತ್ರಜ್ಞರ ಸಂಸ್ಥೆ ಅಧ್ಯಕ್ಷ ಎ.ಬಿ.ಪಾಟೀಲ್, ಐಎಟಿ ಪ್ರಾದೇಶಿಕ ಘಟಕದ ಅಧ್ಯಕ್ಷ ಜಿ.ಸಿ.ರಂಗಸ್ವಾಮಿ, ಚಿತ್ರದುರ್ಗ ಕೃಷಿ ಇಲಾಖೆ ಉಪನಿರ್ದೇಶಕರಾದ ಕೆ.ಎಸ್.ಶಿವಕುಮಾರ್, ಬಿ.ಎನ್.ಪ್ರಭಾಕರ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶರಣ ಬಸಪ್ಪ ಬೋಗಿ, ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಕುಮಾರ್, ಐಎಟಿ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್.ಲಕ್ಷ್ಮೀಕಾಂತರೆಡ್ಡಿ, ಸಂಸ್ಥಾಪನ ಸದಸ್ಯ ಕೆ.ಎಚ್.ಸೀತಾರಾಮರೆಡ್ಡಿ, ನಿವೃತ್ತ ವಿಸ್ತರಣಾ ನಿರ್ದೇಶಕ ಡಾ.ವಿ.ವೀರಭದ್ರಯ್ಯ, ಜಿ.ಚಿದಾನಂದಪ್ಪ, ಜೆ.ತಿಪ್ಪೇಸ್ವಾಮಿ, ಜಿ.ಟಿ.ವೀರಭದ್ರರೆಡ್ಡಿ, ಕಟ್ಟಾ ಶ್ರೀನಿವಾಸರೆಡ್ಡಿ, ವೆಂಕಟೇಶ್, ವೀರಣ್ಣ ಕೆ.ಕಮತರ, ಇ.ಜಯರಾಮರೆಡ್ಡಿ, ಎಸ್.ಹನುಮಂತರಾಯರೆಡ್ಡಿ, ಡಾ.ಸಿ.ತಿಪ್ಪೇಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net