

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರೊನಾ ಸೋಂಕು ಕಾಣಿಸಿಕೊಂಡು ನಾಲ್ಕು ತಿಂಗಳ ಬಳಿಕ ಕರೊನಾ ಸಾವಿನ ಸಂಖ್ಯೆ ಶತಕದ ಹೊಸ್ತಿಲು ತಲುಪಿದೆ.
ಮಾ.22ರಂದು ಜಿಲ್ಲೆಯಲ್ಲಿ ಮೊದಲ ಪ್ರಕರಣ ಪತ್ತೆಯಾಗಿತ್ತು. ಹಲವು ಕಾಯಿಲೆಗಳಿಂದ ಬಳಲುತ್ತಿದ್ದ 7 ಮಂದಿ ಬುಧವಾರ ಮೃತಪಟ್ಟಿದ್ದು ಗುರುವಾರದ ವರದಿಯಂತೆ ಅವರೆಲ್ಲರೂ ಕರೊನಾ ಸೋಂಕಿಗೊಳಪಟ್ಟಿದ್ದರು. ಈ ಮೂಲಕ ಮೃತರ ಒಟ್ಟು ಸಂಖ್ಯೆ 94ಕ್ಕೆ ಏರಿಕೆಯಾಗಿದ್ದು ಮೃತಪಟ್ಟವರಲ್ಲಿ ಬಹುತೇಕ ಮಂದಿ ಹಲವು ಸಮಸ್ಯೆಗಳಿಂದ ನರಳುತ್ತಿದ್ದವರು.
ದಾವಣಗೆರೆ ಮೂಲದ 36 ವರ್ಷದ ಯುವಕ, ಭಟ್ಕಳ ಮೂಲದ 69 ವರ್ಷದ ವೃದ್ಧ, ಕೇರಳದ ಪಾಲಕ್ಕಾಡ್ ನಿವಾಸಿ 52 ವರ್ಷದ ವ್ಯಕ್ತಿ, ಮಂಗಳೂರು ಮೂಲದ 83 ವರ್ಷದ ವೃದ್ಧ, 73 ವರ್ಷದ ವೃದ್ಧ ಹಾಗೂ 58 ವರ್ಷದ ಮಹಿಳೆ, ಬಂಟ್ವಾಳ ಮೂಲದ 52 ವರ್ಷದ ವ್ಯಕ್ತಿ ಸಾವನ್ನಪ್ಪಿದವರು. ಮೃತರಾದವರೆಲ್ಲರೂ ಹೃದಯ ಸಂಬಂಧಿ ಕಾಯಿಲೆ, ಕಿಡ್ನಿ ಸಮಸ್ಯೆ, ಅಧಿಕ ರಕ್ತದೊತ್ತಡ, ನ್ಯುಮೋನಿಯಾ ಸೋಂಕು, ಡಯಾಬಿಟಿಸ್ ಇತ್ಯಾದಿ ಸಮಸ್ಯೆಗಳಿಂದ ಬಳಲುತ್ತಿದ್ದವರು.
ಒಂದೇ ದಿನ 218 ಕೇಸ್
ದ.ಕ. ಜಿಲ್ಲೆಯಲ್ಲಿ ಗುರುವಾರ 218 ಪಾಸಿಟಿವ್ ಕೇಸ್ ವರದಿಯಾಗಿವೆ. ಇವುಗಳ ಪೈಕಿ 36 ನೇರ ಸಂಪರ್ಕದಿಂದ, 110 ಮಂದಿ ಐಎಲ್‌ಐ ಪ್ರಕರಣ, 16 ತೀವ್ರ ಉಸಿರಾಟದ ತೊಂದರೆ ಇರುವ ಪ್ರಕರಣವಾಗಿದ್ದು 57ರ ಸೋಂಕಿನ ಮೂಲ ದೃಢಪಡಿಸಲಾಗುತ್ತಿದೆ. ಚಿಕಿತ್ಸೆ ಯಶಸ್ವಿಯಾಗಿ ಪೂರೈಸಿರುವ ಒಟ್ಟು 118 ಮಂದಿ ವಿವಿಧ ಆಸ್ಪತ್ರೆಗಳಿಂದ ಗುಣವಾಗಿ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಕಳೆದ ನಾಲ್ಕು ತಿಂಗಳಲ್ಲಿ ಒಟ್ಟು 31068 ಸ್ಯಾಂಪಲ್ ಟೆಸ್ಟ್ ಮಾಡಲಾಗಿದ್ದು ಪಾಸಿಟಿವ್ ಪ್ರಕರಣ 4214ಕ್ಕೆ ತಲುಪಿದೆ. 2253 ಸಕ್ರಿಯ ಪ್ರಕರಣವಿದ್ದು 1862 ಮಂದಿ ಚಿಕಿತ್ಸೆ ಪೂರೈಸಿ ಮನೆಗೆ ತಲಪಿದ್ದಾರೆ.
ಒಂದೆಡೆ ಪಾಸಿಟಿವ್, ಇನ್ನೊಂದೆಡೆ ನೆಗೆಟಿವ್
ಬೆಳ್ತಂಗಡಿ: ವಿದೇಶಕ್ಕೆ ತೆರಳಲು ಸಿದ್ಧತೆ ನಡೆಸಿದ್ದ ತಾಲೂಕಿನ ಮಹಿಳೆಗೆ ಇಲಾಖಾ ನಿಯಮದಂತೆ ನಡೆಸಿದ ಕೋವಿಡ್ ಪರೀಕ್ಷೆಯಲ್ಲಿ ಒಂದು ಖಾಸಗಿ ಆಸ್ಪತ್ರೆ ಪಾಸಿಟಿವ್ ವರದಿ ನೀಡಿದರೆ, ಇನ್ನೊಂದು ಖಾಸಗಿ ಆಸ್ಪತ್ರೆ ನೆಗೆಟಿವ್ ವರದಿ ನೀಡಿದೆ.
ಉಷಾಕಿರಣ ತೋಟಂತಿಲ ಜುಲೈ 19ರಂದು 8 ವರ್ಷದ ಮಗ ಅದ್ವೈತ್ ಜತೆ ಶಾರ್ಜಾಗೆ ಪ್ರಯಾಣಿಸುವವರಿದ್ದರು. ಮಾರ್ಚ್ ಮೊದಲ ವಾರ ಪತಿ ರಾಮಮೂರ್ತಿ ಹಾಗೂ ಮಕ್ಕಳೊಂದಿಗೆ ಹತ್ಯಡ್ಕ ಗ್ರಾಮದ ಅರಸಿನಮಕ್ಕಿಯ ಪಿಲಿಕ್ಕಬೆ(ಗಂಡನ ಮನೆ)ಗೆ ಬಂದಿದ್ದರು. ವಾರದ ನಂತರ ಪತಿ ಶಾರ್ಜಾಕ್ಕೆ ತೆರಳಿದ್ದರು. ಉಷಾ ಏಪ್ರಿಲ್‌ನಲ್ಲಿ ಮಕ್ಕಳೊಂದಿಗೆ ತವರು ಮನೆ ಪುತ್ತೂರು ತಾಲೂಕಿನ ಇರ್ದೆಗೆ ತೆರಳಿದ್ದು, ಈ ವೇಳೆ ಲಾಕ್‌ಡೌನ್ ಘೋಷಣೆಯಾಗಿ ಶಾರ್ಜಾಕ್ಕೆ ವಾಪಸಾಗಲಿಲ್ಲ.
ಜುಲೈ 19ರಂದು ಮಂಗಳೂರಿನಿಂದ ಮಗ ಅದ್ವೈತ್ ಜತೆ ವಾಪಸ್ ತೆರಳಲು ಟಿಕೆಟ್ ಬುಕ್ ಮಾಡಿದ್ದರು. ಸರ್ಕಾರದ ನಿಯಮದಂತೆ ಕೋವಿಡ್ ಟೆಸ್ಟ್ ಮಾಡಿ ವರದಿ ನೀಡಬೇಕಿತ್ತು. ಇಬ್ಬರಿಗೂ ಅನಾರೋಗ್ಯ ಲಕ್ಷಣವಿರಲಿಲ್ಲ. ಟೆಸ್ಟ್‌ಗಾಗಿ ಜುಲೈ 15ರಂದು ಕಂಕನಾಡಿಯ ಖಾಸಗಿ ಆಸ್ಪತ್ರೆಯಲ್ಲಿ ಟೆಸ್ಟ್ ಮಾಡಿಸಿ, ಮರುದಿನ ಲಭಿಸಿದ ವರದಿಯಲ್ಲಿ ಪಾಸಿಟಿವ್ ಎಂದು ತಿಳಿಸಲಾಗಿತ್ತು. ಮಗನ ವರದಿ ನೆಗೆಟಿವ್ ಬಂದಿತ್ತು. 17ರಂದು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಟೆಸ್ಟ್ ಮಾಡಿಸಿದಾಗ ಇಬ್ಬರ ವರದಿಯೂ ನೆಗೆಟಿವ್ ಬಂತು. ಈಗ ಉಷಾ ಮತ್ತು ಪುತ್ರ ಶಾರ್ಜಾಗೆ ಪ್ರಯಾಣ ಬೆಳೆಸಿದ್ದಾರೆ.
ಬಂಟ್ವಾಳದ ಓರ್ವ ಸಾವು
ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ಗುರುವಾರ 13 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇವರಲ್ಲಿ ಕಲ್ಲಡ್ಕ ನಿವಾಸಿ 52 ವರ್ಷದ ಪುರುಷ ಮೃತಪಟ್ಟಿದ್ದಾರೆ. ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಜುಲೈ 21ರಂದು ದಾಖಲಾಗಿದ್ದ ಅವರು ಹೃದಯ ಸಂಬಂಧಿ ಕಾಯಿಲೆಯಿಂದಲೂ ಬಳಲುತ್ತಿದ್ದರು. ಬುಧವಾರ ಮೃತಪಟ್ಟ ಅವರ ಅಂತ್ಯಸಂಸ್ಕಾರ ಕಲ್ಲಡ್ಕದಲ್ಲಿ ನಡೆಯಿತು.
ಕಾಸರಗೋಡಿನ 47 ಮಂದಿಗೆ ಕರೊನಾ
ಕಾಸರಗೋಡು: ಜಿಲ್ಲೆಯ 47 ಮಂದಿ ಸಹಿತ ಕೇರಳದಲ್ಲಿ 1,078 ಮಂದಿಯಲ್ಲಿ ಗುರುವಾರ ಸೋಂಕು ಕಾಣಿಸಿಕೊಂಡಿದೆ. ಇವರಲ್ಲಿ ವಿದೇಶದಿಂದ 104, ಇತರ ರಾಜ್ಯಗಳಿಂದ ಬಂದ 115 ಮಂದಿ ಇದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೋವಿಡ್ ಬಾಧಿಸಿ ಚಿಕಿತ್ಸೆಯಲ್ಲಿರುವವರ ಸಂಖ್ಯೆ 16,110ಕ್ಕೇರಿದೆ.