ಮದ್ದೂರು: ನಾಡಪ್ರಭು ಕೆಂಪೇಗೌಡ ಅವರು ಸರ್ವಜನಾಂಗದ ಅಭಿವೃದ್ಧಿಗೆ ಶ್ರಮಿಸಿ ಮಾದರಿ ಆಡಳಿತಕ್ಕೆ ಮುನ್ನುಡಿ ಬರೆದವರು ಎಂದು ತಹಸೀಲ್ದಾರ್ ಸೋಮಶೇಖರ್ ಅಭಿಪ್ರಾಯಪಟ್ಟರು. ಪಟ್ಟಣದ ತಾಲೂಕು ಕಚೇರಿಯಲ್ಲಿ ಕೆಂಪೇಗೌಡ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸುತ್ತಿದ್ದು, ತಾಲೂಕಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಜೂ.27 ರಂದು ವಿಜೃಂಭಣೆಯಿಂದ ಆಚರಿಸಲು ಸಂಘ, ಸಂಸ್ಥೆಗಳು ಸಹಕರಿಸಬೇಕು ಎಂದು ಮನವಿ ಮಾಡಿದರು. ಪಟ್ಟಣದ ಶ್ರೀ ಉಗ್ರನರಸಿಂಹಸ್ವಾಮಿ ದೇವಸ್ಥಾನದಿಂದ ಶಾಲಾ ಮಕ್ಕಳು ಹಾಗೂ ಜಾನಪದ ಕಲಾತಂಡಗಳೊಂದಿಗೆ ಕೆಂಪೇಗೌಡ ಅವರ ಭಾವಚಿತ್ರವನ್ನು ತಾಲೂಕು ಕ್ರೀಡಾಂಗಣದವರೆಗೆ ಮೆರವಣಿಗೆ ನಡೆಸುವುದು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲು ಸಭೆ ನಿರ್ಣಯ ಕೈಗೊಂಡಿತು. ಕಾರ್ಯಕ್ರಮಕ್ಕೆ ಶಾಸಕ ಕೆ.ಎಂ.ಉದಯ್ ಅವರ ಸಹಕಾರ ಕೋರುವಂತೆ ಹಾಗಲಹಳ್ಳಿ ಬಸವರಾಜ್ ಸಭೆಯಲ್ಲಿ ಸಲಹೆ ನೀಡಿದರು. ಉದ್ಯಮಿ ಪ್ರಣಾಮ್ ಸತೀಶ್ ಅಖಿಲ ಕರ್ನಾಟಕ ಒಕ್ಕಲಿಗರ ಸಂಘಕ್ಕೆ 25 ಸಾವಿರ ರೂ. ನೀಡುವುದಾಗಿ ಪ್ರಕಟಿಸಿದರು. ಪುರಸಭೆ ಮುಖ್ಯಾಧಿಕಾರಿ ಕರಿಬಸವಯ್ಯ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ರೇಖಾ, ಅಕ್ಷರ ದಾಸೋಹ ಅಧಿಕಾರಿ ಮಂಗಳಮ್ಮ, ಪಶು ವೈದ್ಯಾಧಿಕಾರಿ ಪ್ರವೀಣ್, ತಾಪಂ ಸಹಾಯಕ ನಿರ್ದೇಶಕ ಮಂಜುನಾಥ, ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಅಧ್ಯಕ್ಷ ಶಿವಲಿಂಗಯ್ಯ, ಕಾರ್ಯದರ್ಶಿ ಚಂದೂಪುರ ಬಸವರಾಜು, ಮುಖಂಡರಾದ ನಾರಾಯಣ್, ವೆಂಕಟಚಲುವಯ್ಯ, ಮರಳಿಗ ಶಿವರಾಜ್, ಮಹದೇವ್, ಉಪ್ಪಿನಕೆರೆ ಶಿವರಾಮ್, ನಾಗರಾಜ್ ಚನ್ನಪ್ಪ, ನಾರಾಯಣ, ಮ.ನ.ಪ್ರಸನ್ನ ಕುಮಾರ್, ಮುಟ್ಟನಹಳ್ಳಿ ಮಹೇಶ್, ಕುದುರಗುಂಡಿ ರಾಖೇಶ್, ನ.ಲಿ.ಕೃಷ್ಣ ಇದ್ದರು.