

ಶ್ರೀರಂಗಪಟ್ಟಣ: ಪಟ್ಟಣದ ನ್ಯಾಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಲೋಕ ಅದಾಲತ್‌ನಲ್ಲಿದ್ದ ಒಟ್ಟು 2,862 ಪ್ರಕರಣಗಳಲ್ಲಿ 2,133 ಪ್ರಕರಣ ಶನಿವಾರ ಇತ್ಯರ್ಥಗೊಂಡಿದ್ದು, ಇವುಗಳಲ್ಲಿ ದಂಪತಿಗಳ ನಡುವೆ ಏರ್ಪಟ್ಟಿದ್ದ 3 ವಿರಸ ಪ್ರಕರಣಗಳಲ್ಲಿ 2 ಕೌಟುಂಬಿಕ ಕಲಹ ಪ್ರಕರಣದ ವ್ಯಾಜ್ಯಗಳು ರಾಜಿ ಸಂಧಾನದ ಮೂಲಕ ಬಗೆಹರಿದಿವೆ.
ಪಟ್ಟಣದ ನ್ಯಾಯಾಲಯ ಸಂಕೀರ್ಣದ ಆವರಣದಲ್ಲಿ ಅದಾಲತ್ ನಡೆದಿದ್ದು, ಮೋಟಾರು ವಾಹನ, ಕೌಟುಂಬಿಕ ಕಲಹ ಹಾಗೂ ರಾಜಿ ಸಂಧಾನ ಮಾಡಿ ಬಗೆಹರಿಸಬಹುದಾದ ಕ್ರಿಮಿನಲ್ ಮೊಕದ್ದಮೆಗಳ ಇತ್ಯರ್ಥವನ್ನು ನ್ಯಾಯಾಧೀಶರ ಸಮ್ಮುಖದಲ್ಲಿ ಬಗೆಹರಿಸಿ ಇತ್ಯರ್ಥಪಡಿಸಲಾಯಿತು.
ಪಟ್ಟಣದ 3ನೇ ಅಪಾರ ಮತ್ತು ಸತ್ರ ನ್ಯಾಯಾಧೀಶ ಗೋಪಾಲಕೃಷ್ಣ ರೈ, ಪ್ರಧಾನ ಸಿವಿಲ್ ಹಿರಿಯ ನ್ಯಾಯಾಧೀಶೆ ರೂಪಾ ಎಂ.ಡಿ., ಹಿರಿಯ ಅಪಾರ ಸಿವಿಲ್ ನ್ಯಾಯಾಧೀಶ ಮಹದೇವಪ್ಪ, ಪ್ರಧಾನ ಸಿವಿಲ್ ನ್ಯಾಯಾಧೀಶ ವೈ.ಎಚ್.ದೇವರಾಜು ಹಾಗೂ ಅಪರ ಸಿವಿಲ್ ಕಿರಿಯ ನ್ಯಾಯಾಧೀಶ ಹನುಮಂತಪ್ಪ ಅವರ ಸಮ್ಮುಖದಲ್ಲಿ ಪ್ರಕರಣಗಳು ಬಗೆಹರಿದಿವೆ.
ಒಟ್ಟು 3 ಕೌಟುಂಬಿಕ ಕಲಹದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿಪತ್ನಿಯರ ನಡುವಿನ ವ್ಯಾಜ್ಯಗಳಲ್ಲಿ 2 ಪ್ರಕರಣಗಳು ಇತ್ಯರ್ಥಗೊಂಡಿವೆ. ಹಣ ಹೂಡಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ 45 ಪ್ರಕರಣಗಳಲ್ಲಿ 19 ಪ್ರಕರಣಗಳು ಇತ್ಯರ್ಥಗೊಂಡಿದ್ದು, ಬ್ಯಾಂಕುಗಳ 21 ಪ್ರಕರಣಗಳಲ್ಲಿ 11 ರಾಜಿ ಸಂಧಾನದ ಮೂಲಕ ಬಗೆಹರಿದಿವೆ. 65 ಚೆಕ್‌ಬೌನ್ಸ್ ಪ್ರಕರಣಗಳಲ್ಲಿ 21 ಬಗೆಹರಿದಿವೆ. ರಾಜಿ ಸಂಧಾನದ ಮೂಲಕ ಬಗೆಹರಿಸಬಹುದಾದ 96 ಕ್ರಿಮಿನಲ್ ಪ್ರಕರಣಗಳಲ್ಲಿ 22 ಪ್ರಕರಣಗಳನ್ನು ಬಗೆಹರಿಸಲಾಗಿದೆ. ಆಸ್ತಿ ವ್ಯಾಜ್ಯಕ್ಕೆ ಸಂಬಂಧಿಸಿದ 40 ಪ್ರಕರಣಗಳಲ್ಲಿ 11 ರಾಜಿಯಾಗಿವೆ. ಭೂ ಸ್ವಾಧೀನ ಪ್ರಕರಣಗಳಿಗೆ ಸಂಬಂಧಿಸಿದಂತೆ 8ಕ್ಕೆ 8 ಪ್ರಕರಣಗಳೂ ರಾಜಿಯಾಗಿವೆ. 61 ಜಾರಿ ನಿರ್ದೇಶನಾಲಯ ಪ್ರಕರಣಕ್ಕೆ ಸಂಬಂಧಿಸಿದಂತೆ 31 ಪ್ರಕರಣಗಳು ಸೇರಿದಂತೆ ಹಲವು ಪ್ರಕರಣಗಳು ಇತ್ಯರ್ಥಗೊಂಡಿವೆ.