ತುಮಕೂರು ಜಿಲ್ಲೆಯಲ್ಲಿ 3ನೇ ದಿನವೂ ದ್ವಿಶಕ ಬಾರಿಸಿ ಕರೊನಾ

Corona
Published on

ತುಮಕೂರು: ಸತತ ಮೂರನೇ ದಿನ ಜಿಲ್ಲೆಯಲ್ಲಿ ಕರೊನಾ ದ್ವಿಶತಕ ಬಾರಿಸಿದೆ. ಶನಿವಾರ ಒಂದೇ ದಿನ 211 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ 5508ಕ್ಕೇರಿದೆ.

ಗುಬ್ಬಿ ತಾಲೂಕಿನಲ್ಲಿ ಅತಿ ಹೆಚ್ಚು 42 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ತುಮಕೂರಿನಲ್ಲಿ 32, ಶಿರಾ 30, ಮಧುಗಿರಿ 27 ಹಾಗೂ ಕೊರಟಗೆರೆಯಲ್ಲಿ 25 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಉಳಿದಂತೆ ಚಿಕ್ಕನಾಯಕನಹಳ್ಳಿ 18, ಕುಣಿಗಲ್ 10, ಪಾವಗಡ ಹಾಗೂ ತುರುವೇ ಕೆರೆಯಲ್ಲಿ ತಲಾ 8 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಶನಿವಾರ ಒಂದೇ ದಿನ 169 ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.

ತುಮಕೂರಿನ ಪಿಎಚ್ ಕಾಲನಿಯ 55 ವರ್ಷದ ವ್ಯಕ್ತಿ ಜ್ವರ, ಉಸಿರಾಟ ತೊಂದರೆ, ಕೆಮ್ಮು, ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆ.22 ರಂದು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿ ದ್ದಾರೆ. ತುರುವೇಕೆರೆ ತಾಲೂಕು ಮಾಯ ಸಂದ್ರದ 41 ವರ್ಷದ ವ್ಯಕ್ತಿ ಜ್ವರ, ತೀವ್ರ ಉಸಿರಾಟ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಂಡ್ಯ ಎಐಎಂಎಸ್ ಆಸ್ಪತ್ರೆಗೆ ಆ.26 ರಂದು ತೆರಳಿದ್ದು ಅಲ್ಲಿಂದ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿದ್ದಾರೆ. ಮಾರ್ಗ ಮಧ್ಯೆ ಸಾವನ್ನಪ್ಪಿದ್ದು ಜಿಲ್ಲಾ ಆಸ್ಪತ್ರೆಯಲ್ಲಿ ಗಂಟಲುದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಸೋಂಕು ದೃಢಪಟ್ಟಿದೆ.

ಕೊರಟಗೆರೆ ತಾಲೂಕಿನ ಬೈರೇನಹಳ್ಳಿಯ 75 ವರ್ಷದ ವೃದ್ಧ ಮಧುಮೇಹದಿಂದ ಬಳಲುತ್ತಿದ್ದು ಆ.12 ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಪರೀಕ್ಷೆಗೆ ಒಳಪಡಿಸಿದಾಗ ಪಾಸಿಟಿವ್ ಬಂದಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈವರೆಗೆ ಮೃತಪಟ್ಟವರ ಸಂಖ್ಯೆ 160ಕ್ಕೆ ಏರಿಕೆಯಾಗಿದೆ.

ಶಿರಾ ಪೇದೆಗೆ ಕರೊನಾ: ಶನಿವಾರ 116 ಮಹಿಳೆಯರು ಹಾಗೂ 95 ಪುರುಷರಲ್ಲಿ ಸೋಂಕು ಕಾಣಿಸಿಕೊಂಡಿದೆ. ಶಿರಾ ಪೇದೆಗೆ ಸೋಂಕು ತಗುಲಿದೆ. 60 ವರ್ಷ ಮೇಲ್ಪಟ್ಟ 40 ಜನರಿದ್ದಾರೆ. ಸೋಂಕಿತರ ಪೈಕಿ 167 ಮಂದಿಗೆ ರೋಗ ಲಕ್ಷಣಗಳಿಲ್ಲ, ಇನ್ನುಳಿದ 44 ಜನರಲ್ಲಿ ನೆಗಡಿ, ಕೆಮ್ಮು, ಜ್ವರ ಕಾಣಿಸಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net