

ಮಂಗಳೂರು: ಲಾಕ್ಡೌನ್ ಅವಧಿಯಲ್ಲಿ ಇದುವರೆಗೆ ದ.ಕ. ಜಿಲ್ಲೆಯಿಂದ 16 ರೈಲುಗಳ ಮೂಲಕ 21,888 ಮಂದಿ ಹೊರರಾಜ್ಯಗಳ ವಲಸೆ ಕಾರ್ಮಿಕರು ತಮ್ಮೂರುಗಳಿಗೆ ತೆರಳಿದ್ದಾರೆ.
ಬಿಹಾರ-5, ಜಾರ್ಖಂಡ್-5, ಉತ್ತರ ಪ್ರದೇಶ-5 ಹಾಗೂ ರಾಜಸ್ಥಾನಕ್ಕೆ 1 ರೈಲು ತೆರಳಿದೆ. ಪ್ರತೀ ರೈಲಿನಲ್ಲಿ 1400ರಷ್ಟು ಪ್ರಯಾಣಿಕರಿದ್ದರು. ಮಂಗಳೂರು ಜಂಕ್ಷನ್ ಹಾಗೂ ಪುತ್ತೂರು ರೈಲ್ವೆ ನಿಲ್ದಾಣಗಳಿಂದ ರೈಲು ಹೊರಟಿದ್ದು, ಇಲಾಖೆ ನಿಗದಿಪಡಿಸಿದ ದರ ಪಡೆಯಲಾಗಿತ್ತು ಎಂದು ಜಿಲ್ಲಾಡಳಿತ ತಿಳಿಸಿದೆ.
ಬಸ್ ವ್ಯವಸ್ಥೆ: ಮೇ 9ರಂದು ರೈಲು ಸಂಚಾರ ಆರಂಭವಾಗಿದೆ. ವಲಸೆ ಕಾರ್ಮಿಕರನ್ನು ನಿಗದಿತ ಸ್ಥಳಗಳಿಂದ ರೈಲು ನಿಲ್ದಾಣಕ್ಕೆ ಕರೆದುಕೊಂಡು ಬರಲು ಜಿಲ್ಲಾಡಳಿತ ವತಿಯಿಂದ ಕೆಎಸ್ಸಾರ್ಟಿಸಿ ಬಸ್ ವ್ಯವಸ್ಥೆ ಮಾಡಲಾಗಿತ್ತು. ಪ್ರತಿ ಬಸ್ಸಿಗೆ ಓರ್ವ ಜಿಲ್ಲಾ ಮಟ್ಟದ ಅಧಿಕಾರಿಯನ್ನು ನೋಡೆಲ್ ಆಗಿ ನೇಮಿಸಿ, ಕಂದಾಯ ಇಲಾಖೆಯ ಓರ್ವ ಸಿಬ್ಬಂದಿ ಹಾಗೂ ಇಬ್ಬರು ಪೊಲೀಸರನ್ನು ಸಹಾಯಕರನ್ನಾಗಿ ನಿಯೋಜಿಸಲಾಗಿತ್ತು.
ಪ್ರಯಾಣಿಕರ ದಾಖಲೆ ನಿರ್ವಹಣೆ, ಆರೋಗ್ಯ ತಪಾಸಣೆ ನಡೆಸಲಾಗಿದ್ದು, ರೈಲು ನಿಲ್ದಾಣದಲ್ಲಿ ಉಚಿತ ಊಟದ ಪೊಟ್ಟಣ ಹಾಗೂ ನೀರಿನ ಬಾಟಲಿಗಳನ್ನು ವಿತರಿಸಲಾಗಿದೆ. ಪ್ರಯಾಣ 2-3 ದಿನ ತಗಲುವುದರಿಂದ ಪ್ರಮುಖ ಜಂಕ್ಷನ್ಗಳಲ್ಲಿ ಊಟೋಪಚಾರ ವ್ಯವಸ್ಥೆ ಮಾಡಲಾಗಿದೆ. ಸದ್ಯ ಜಿಲ್ಲೆಯಲ್ಲಿ ಪಶ್ಚಿಮ ಬಂಗಾಲ ಹಾಗೂ ಒಡಿಶಾ ರಾಜ್ಯಗಳ ವಲಸೆ ಕಾರ್ಮಿಕರು ಮಾತ್ರ ತೆರಳಲು ಬಾಕಿ ಇದ್ದು, ಶೀಘ್ರದಲ್ಲಿಯೇ ಅವರಿಗೂ ರೈಲಿನ ವ್ಯವಸ್ಥೆಯಾಗಲಿದೆ.
ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ನೇತೃತ್ವದ ಈ ಕಾರ್ಯದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ತೊಡಗಿಸಿಕೊಂಡಿದ್ದು, ಮುಡಾ ಆಯುಕ್ತ ದಿನೇಶ್ ಕುಮಾರ್ ನೋಡಲ್ ಅಧಿಕಾರಿಯಾಗಿದ್ದರು ಎಂದು ಪ್ರಕಟಣೆ ತಿಳಿಸಿದೆ.