ವಿಬುಧೇಶ ತೀರ್ಥ ಟ್ರಸ್ಟ್‌ನಿಂದ 21 ಲಕ್ಷ ರೂ. ಶಿಕ್ಷಣ ಶುಲ್ಕ, ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಮಾಹಿತಿ

swamy
Published on

ಉಡುಪಿ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಬಡಕುಟುಂಬಗಳ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಶ್ರೀ ಅದಮಾರು ಮಠ ಶಿಕ್ಷಣ ಮಂಡಳಿ ಆಡಳಿತಕ್ಕೆ ಒಳಪಟ್ಟ ಅದಮಾರು ಪೂರ್ಣಪ್ರಜ್ಞ ಶಾಲೆ ಹಾಗೂ ಪಡುಬಿದ್ರಿ ಗಣಪತಿ ಹೈಸ್ಕೂಲ್‌ನ ವಿದ್ಯಾರ್ಥಿಗಳ 1 ತಿಂಗಳ ಶಾಲಾ ಶುಲ್ಕ 21 ಲಕ್ಷ ರೂ.ವನ್ನು ವಿಬುಧೇಶ ತೀರ್ಥ ಟ್ರಸ್ಟ್‌ನಿಂದ ಭರಿಸುವುದಾಗಿ ಮಂಡಳಿ ಅಧ್ಯಕ್ಷ ಹಾಗೂ ಅದಮಾರು ಮಠದ ಹಿರಿಯ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಒದಗಿಸುವುದು ಬಡತನ ನಿರ್ಮೂಲನೆಯ ಮೊದಲ ಹಂತ. ಇದರಿಂದ ಮಕ್ಕಳಿಗೆ ವಿವೇಚನಾ ಶಕ್ತಿ ಬರುತ್ತದೆ. ಇದರಿಂದ ದೇಶ ಲೌಕಿಕ ಮತ್ತು ಅಧ್ಯಾತ್ಮಿಕವಾಗಿ ಶ್ರೀಮಂತವಾಗಲು ಸಾಧ್ಯ ಎಂಬುದು ನಮ್ಮ ಗುರುಗಳಾದ ವಿಬುಧೇಶ ತೀರ್ಥರ ನಿಲುವಾಗಿತ್ತು. ಕರೊನಾದಿಂದ ದಿನಗೂಲಿ ಮಾಡಿ ಮಕ್ಕಳನ್ನು ಓದಿಸುವ ಪಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ಕಿಂಚಿತ್ ಸಹಾಯವಾಗಲು ಈ ನಿರ್ಧಾರ ಕೈಗೊಳ್ಳಲಾಗಿದೆ. 1500 ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ ಎಂದು ತಿಳಿಸಿದರು.

ದೇವರ ಪೂಜೆ ಜತೆಗೆ ಯಾರಿಗೆ ಯಾವುದು ಅಗತ್ಯವೋ ಅದನ್ನು ಗುರುತಿಸಿ ನೀಡುವುದು ಭಗವಂತನಿಗೆ ಸಲ್ಲಿಸುವ ಕಂದಾಯ ಎಂಬುದಾಗಿ ಆಚಾರ್ಯ ಮಧ್ವರು ತಿಳಿಸಿದ್ದರು. ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ತೀರಾ ಗ್ರಾಮೀಣ ಪ್ರದೇಶದಲ್ಲಿರುವ ಈ ಶಾಲೆಗಳನ್ನು ಆಯ್ಕೆ ಮಾಡಲಾಗಿದೆ. ಉಳಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಅಶಕ್ತ ಮಕ್ಕಳಿಗೆ ನೆರವು ನೀಡುವ ಪ್ರಕ್ರಿಯೆ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ.

ಬಡವಿದ್ಯಾರ್ಥಿಗಳ ಮಾಹಿತಿಗಳನ್ನು ಆಯಾ ಶಾಲಾ-ಕಾಲೇಜುಗಳ ಪ್ರಾಂಶುಪಾಲರು ಕ್ರೋಢೀಕರಿಸಿ ನೀಡಲಿದ್ದಾರೆ ಎಂದರು. ಟ್ರಸ್ಟ್ ಸದಸ್ಯರಾದ ಡಾ.ಜಿ.ಎಸ್.ಚಂದ್ರಶೇಖರ್, ಯು.ಕೆ.ರಾಘವೇಂದ್ರ ರಾವ್, ರಾಧಾಕೃಷ್ಣ ಆಚಾರ್ಯ, ಅದಮಾರು ಮಠ ಛತ್ರ ವ್ಯವಸ್ಥಾಪಕ ಗೋವಿಂದರಾಜ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net