

ಮಂಗಳೂರು: ಬಂಟರ ಸಂಘ ಕಾವೂರು ವತಿಯಿಂದ ಕಾವೂರು ಬಂಟರ ಭವನದ ಭೂಮಿ ಪೂಜೆ, ಬಂಟರ ಸಂಘದ ಆಡಳಿತ ಕಚೇರಿ ಹಾಗೂ ಬಯಲು ರಂಗ ಮಂದಿರ ಉದ್ಘಾಟನಾ ಸಮಾರಂಭ ೆ.21ರಂದು ಬೆಳಗ್ಗೆ 11.37ಕ್ಕೆ ಕೂಳೂರು ಕಾವೂರು ರಸ್ತೆ ಎಂವಿ ಶೆಟ್ಟಿ ಕಾಲೇಜು ಮುಂಭಾಗದ ಮಾಲಾಡಿ ಕೋರ್ಟ್ ಮುಖ್ಯ ರಸ್ತೆಯ ಬಂಟರ ನಿವೇಶನದಲ್ಲಿ ನಡೆಯಲಿದೆ.
ಬೆಳಗ್ಗೆ 5ಕ್ಕೆ ಭೂವರಾಹ ಪೂಜೆ, 7ಕ್ಕೆ ಗಣಹೋಮ, 9ಕ್ಕೆ ಭಜನೆ, 11.37ಕ್ಕೆ ಶಿಲಾನ್ಯಾಸ, 11.47ಕ್ಕೆ ಆಡಳಿತ ಕಚೇರಿ, ಬಯಲು ರಂಗಮಂದಿರ ಉದ್ಘಾಟನೆ, 11.50ಕ್ಕೆ ಸಭಾ ಕಾರ್ಯಕ್ರಮ ನೆರವೇರಲಿದೆ. ಸಂಘದ ಹೆಸರಿನಲ್ಲಿರುವ 1.25 ಎಕರೆ ಜಮೀನಿನಲ್ಲಿ 33000 ಚದರ ಅಡಿ ವಿಸ್ತೀರ್ಣದಲ್ಲಿ 1000 ಆಸನವುಳ್ಳ ಸಭಾಭವನ, 100 ವಿದ್ಯಾರ್ಥಿಗಳ ವಾಸ್ತವ್ಯಕ್ಕೆ ವಿದ್ಯಾರ್ಥಿ ನಿಲಯ, ನಿತ್ಯಾನಂದ ಗುರುಗಳ ಪ್ರತಿಮೆ ಸ್ಥಾಪನೆ, ಸಂಘದ ಆಡಳಿತ ಕಚೇರಿ, ಬಯಲು ರಂಗಮಂಟಪ ನಿರ್ಮಿಸಲಾಗುವುದು. ಇದಕ್ಕೆ 10 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಆನಂದ ಶೆಟ್ಟಿ ಅಡ್ಯಾರ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡುವರು. ಸಂಸದರು, ಶಾಸಕ ಡಾ.ವೈ.ಭರತ್ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್‌ಕುಮಾರ್ ರೈ ಮಾಲಾಡಿ, ಇಂಟರ್‌ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಡಾ.ಎ.ಸದಾನಂದ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಉದ್ಯಮಿಗಳಾದ ಕೆ. ಪ್ರಕಾಶ್ ಶೆಟ್ಟಿ, ಕನ್ಯಾನ ಸದಾಶಿವ ಶೆಟ್ಟಿ ಅವರು ಶಿಲಾನ್ಯಾಸ ಹಾಗೂ ಉದ್ಘಾಟನೆ ನೆರವೇರಿಸುವರು. ಶಾಸಕರಾದ ರಾಜೇಶ್ ನಾಯ್ಕ, ಹರೀಶ್ ಪೂಂಜ, ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್, ಅಶೋಕ್‌ಕುಮಾರ್ ರೈ, ಮಂಜುನಾಥ ಭಂಡಾರಿ, ಮೇಯರ್ ಸುಧೀರ್ ಶೆಟ್ಟಿ ಸಹಿತ ಗಣ್ಯರು ಭಾಗವಹಿಸುವರು ಎಂದವರು ತಿಳಿಸಿದರು.
ಕಟ್ಟಡ ಸಮಿತಿ ಅಧ್ಯಕ್ಷ ಡಿ.ಸುಧಾಕರ ಶೆಟ್ಟಿ ಮುಗ್ರೋಡಿ, ಪ್ರಧಾನ ಕಾರ್ಯದರ್ಶಿ ಸುಧಾಕರ ಆಳ್ವ ಕಾವೂರು, ಸಂಚಾಲಕ ಎಂ.ಎಸ್.ಶೆಟ್ಟಿ ಸರಪಾಡಿ, ಸಂಘದ ಮಹಿಳಾ ವಿಭಾಗ ಅಧ್ಯಕ್ಷೆ ಸುಜಯ ಎಸ್.ಶೆಟ್ಟಿ ಉಪಸ್ಥಿತರಿದ್ದರು.