

ಹೊಸನಗರ: ತಾಲೂಕಿನ ತ್ರಿಣಿವೆ ಕೃಷಿ ಪತ್ತಿನ ಸಹಕಾರ ಸಂಘ ಕಳೆದ ಸಾಲಿನಲ್ಲಿ 21.53 ಲಕ್ಷ ರೂ. ಲಾಭ ಗಳಿಸಿದ್ದು ಶೇ.6.5 ಲಾಭಾಂಶವನ್ನು ಷೇರುದಾರರಿಗೆ ಹಂಚಿಕೆ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ಗುರುಶಕ್ತಿ ವಿದ್ಯಾದರ್ ತಿಳಿಸಿದರು.
ತ್ರಿಣಿವೆಯಲ್ಲಿ ಆಯೋಜಿಸಿದ್ದ 2022-23ನೇ ಸಾಲಿನ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘವು 1,990 ಷೇರುದಾರರನ್ನು ಹೊಂದಿದೆ. 19.52 ಕೋಟಿ ರೂ. ಠೇವಣಿ ಸಂಗ್ರಹಿಸಿದ್ದು 2023-24ನೇ ಸಾಲಿನಲ್ಲಿ 20 ಕೋಟಿ ರೂ. ಸಂಗ್ರಹಿಸುವ ಗುರಿ ಇದೆ ಎಂದರು.
17.64 ಕೋಟಿ ರೂ. ಸಾಲ ವಿತರಿಸಲಾಗಿದೆ. ಸದರಿ ಸಾಲಿನಲ್ಲಿ 18 ಕೋಟಿ ರೂ. ಸಾಲ ವಿತರಿಸುವ ಗುರಿ ಸಂಘದ್ದಾಗಿದೆ. ಪ್ರಸಕ್ತ ಸಾಲಿನ ವ್ಯಾಪಾರಿ ವಿಭಾಗದಲ್ಲಿ 38.09 ಲಕ್ಷ ರೂ. ಗುರಿ ಸಾಧಿಸಲಾಗಿದೆ. ಸಂಘ ವ್ಯವಹಾರಿಕವಾಗಿ ಎ ದರ್ಜೆ ಪಡೆದಿದ್ದು ಸದಸ್ಯರ ಸಹಕಾರ ಹೀಗೆಯೇ ಮುಂದುವರಿದಲ್ಲಿ ಎ+ ಸಂಘವಾಗಿ ಹೊರಹೊಮ್ಮಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉಪಾಧ್ಯಕ್ಷ ಎಸ್.ಡಿ.ಲಕ್ಷ್ಮಣಗೌಡ, ನಿರ್ದೇಶಕರಾದ ಜಿ.ಎನ್.ಸುಧೀರ್, ಆರ್.ರಾಜಕುಮಾರ್, ಟಿ.ಎನ್.ಶ್ರೀಪತಿ ವಾಟಗದ್ದೆ, ನೆಲ್ಲುಂಡೆ ವರುಣ, ಎನ್.ಎಂ.ನಟರಾಜ, ಚಂದ್ರಶೇಖರ್ ಶೆಟ್ಟಿ, ಗೀತಾ, ಹಾಲಮ್ಮ ರುದ್ರ, ರಾಜಶ್ರೀ, ಕ್ಷೇತ್ರಾಧಿಕಾರಿ ಶಿವಕುಮಾರ್, ಆಂತರಿಕ ಲೆಕ್ಕಪರಿಶೋಧಕ ಎನ್.ಆರ್.ರಘುನಾಥ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್.ವೆಂಕಟೇಶ್ ಇತರರಿದ್ದರು.