

ಹಾಸನ: ಹಾಸನದ ಚಿತ್ಕಲಾ ಆರ್ಟ್ ಫೌಂಡೇಷನ್ ವತಿಯಿಂದ ನಗರದ ಕಲಾಶ್ರೀ ಆರ್ಟ್ ಗ್ಯಾಲರಿಯಲ್ಲಿ ಏ.20ರಿಂದ 27ರವರೆಗೆ ‘ಮತ್ಸ್ಯ ಹೆಜ್ಜೆ’ ಏಕವ್ಯಕ್ತಿ ಕಲಾ ಪ್ರದರ್ಶನವನ್ನು ಆಯೋಜಿಸಲಾಗಿದೆ. ಏ.20ರಂದು ಬೆಳಗ್ಗೆ 10.30ಕ್ಕೆ ಕಲಾ ಪ್ರದರ್ಶನವನ್ನು ಸಾಹಿತಿ ರೂಪಾ ಹಾಸನ ಅವರು ಉದ್ಘಾಟಿಸಲಿದ್ದಾರೆ. ಹಿರಿಯ ಕಲಾವಿದರಾದ ಬಿ.ಎಸ್. ದೇಸಾಯಿ ಅವರು ಕಲಾ ಪ್ರದರ್ಶನ ಸಂಬಂಧ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಕಲೆ ಮತ್ತು ಕಲಾಕೃತಿ ಕುರಿತು ಕಲಾವಿದ ಗಣಪತಿ ಅಗ್ನಿಹೋತ್ರಿ ಅವರು ಮಾತನಾಡಲಿದ್ದಾರೆ.
ಮೈಸೂರು ಜಿಲ್ಲೆಯ ತಿ. ನರಸೀಪುರ ತಾಲೂಕಿನ ಮಾದಾಪುರ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕಿಯಾಗಿರುವ ಜಿ. ಶೋಭರಾಣಿ ಅವರ ರಚಿತ ಚಿತ್ರಗಳನ್ನು ಮತ್ಸೃ ಹೆಜ್ಜೆ ಹೆಸರಿನಡಿ ಪ್ರದರ್ಶನ ಮಾಡಲಾಗುತ್ತಿದೆ.
ಕರ್ನಾಟಕ ಸರ್ಕಾರ ಆರಂಭಿಸಿದ ‘ಕಿಶೋರ ಪ್ರತಿಭೆ’ ವಾರ್ಷಿಕ ರಾಜ್ಯ ಪ್ರಶಸ್ತಿಯನ್ನು ಪ್ರಥಮ ವರ್ಷದಲ್ಲಿಯೇ ತಮ್ಮದಾಗಿಸಿಕೊಂಡು ತನ್ನ ಅಭಿವ್ಯಕ್ತಿಗೆ ಕಲಾಪ್ರಯೋಗ ನಡೆಸುತ್ತಾ ಪ್ರಸ್ತುತ ರೇಖೆಗಳ ಮೂಲಕ ಕಲಾಕೃತಿಗಳಾಗಿ ಹೊರಹೊಮ್ಮಿವೆ. ಈ ರೇಖಾಕೃತಿಗಳಲ್ಲಿ ಮತ್ಸೃಗಳು ಪ್ರಧಾನ ಪಾತ್ರವಹಿಸಿವೆ. ರೇಖೆಗಳ ಲಯ ಅರಿಯುತ್ತಾ ಕೃತಿಯಿಂದ ಕೃತಿಗೆ ಹಿಡಿತ ಸಾಧಿಸುತ್ತಾ ಮತ್ಸ್ಯ ಲಯವನ್ನು ರೇಖಾ ಲಯದಲ್ಲಿ ಕಟ್ಟಿ ಕೊಡುವ ಪ್ರಯತ್ನ ಮಾಡಿದ್ದಾರೆ. ಮತ್ಸ್ಯ ಹೆಜ್ಜೆಗಳ ಜಾಡು ಹುಡುಕುತ್ತಾ ಕಪ್ಪು- ಬಿಳುಪು ಹಾಗೂ ವರ್ಣಗಳನ್ನು ತನ್ನ ರೇಖೆಗಳಿಗೆ ಪೂರಕವಾಗಿ ದುಡಿಸಿಕೊಂಡಿದ್ದಾರೆ. ಹಾಸನದ ಕಲಾಪ್ರಿಯರಿಗೆ ಶೋಭರಾಣಿ ಇವರ ರೇಖಾ ಕೃತಿಗಳನ್ನು ಪರಿಚಯಿಸುವ ಉದ್ದೇಶದಿಂದ ವಿದ್ಯಾನಗರದಲ್ಲಿರುವ ಕಲಾಶ್ರೀ ಗ್ಯಾಲರಿಯಲ್ಲಿ ಪ್ರದರ್ಶನ ಏರ್ಪಡಿಸಲಾಗಿದೆ. 7 ದಿನಗಳ ಕಾಲ ಬೆಳಗ್ಗೆ 10 ಗಂಟೆಯಿಂದ ಸಂಜೆ 8ರವರೆಗೆ ಪ್ರದರ್ಶನ ವೀಕ್ಷಿಸಬಹುದಾಗಿದೆ ಎಂದು ಕಲಾಶ್ರೀ ಗ್ಯಾಲರಿಯ ಕಲಾವಿದರಾದ ಬಿ.ಎಸ್. ದೇಸಾಯಿ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.