20ರಿಂದ ಎನ್‌ಇಇಟಿ, ಸಿಇಟಿ ಪರೀಕ್ಷೆಗೆ ತರಬೇತಿ

net exam
Published on

ಮಡಿಕೇರಿ: ಜಿಲ್ಲೆಯಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕೃಷಿಕ್ ಸರ್ವೋದಯ ಫೌಂಡೇಷನ್ ಮಡಿಕೇರಿ ಶಾಖೆ ವತಿಯಿಂದ ಆ.20ರಿಂದ ಎನ್‌ಇಇಟಿ ಮತ್ತು ಸಿಇಟಿ ಪರೀಕ್ಷೆಗೆ ತರಬೇತಿ ಪ್ರಾರಂಭವಾಗಲಿದೆ ಎಂದು ಫೌಂಡೇಷನ್‌ನ ಖಜಾಂಚಿ ಅಂಬೆಕಲ್ ನವೀನ್ ತಿಳಿಸಿದರು.


ನಗರದ ಜೂನಿಯರ್ ಕಾಲೇಜು ಆವರಣದಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಜಿಲ್ಲೆಯ ಆಸಕ್ತ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.


ನಿರ್ದೇಶಕ ಕುಂದಲ್ಪಾಡಿ ದಿವಾಕರ್ ಮಾತನಾಡಿ, ನಿವೃತ್ತ ಐಎಎಸ್ ಅಧಿಕಾರಿ ವೈ.ಕೆ.ಪುಟ್ಟಸೋಮೇಗೌಡ ಅವರು ಫೌಂಡೇಷನ್‌ನ ಸ್ಥಾಪಕ ಅಧ್ಯಕ್ಷರಾಗಿದ್ದು, ಇವರೊಂದಿಗೆ ಅನೇಕ ನಿವೃತ್ತ ಐಎಎಸ್, ಐಎಫ್‌ಎಸ್, ಕೆಎಎಸ್ ಅಧಿಕಾರಿಗಳು, ಶಿಕ್ಷಣ ತಜ್ಞರು ಕೈಜೋಡಿಸಿದ್ದಾರೆ. ಮೈಸೂರು, ಹಾಸನ ಮತ್ತು ತುಮಕೂರುಗಳಲ್ಲಿ ಶಾಖೆಯನ್ನು ಹೊಂದುವ ಮೂಲಕ ಕರ್ನಾಟಕದ ಒಂದು ಪ್ರಸಿದ್ಧ ತರಬೇತಿ ಕೇಂದ್ರವಾಗಿ ಹೊರಹೊಮ್ಮಿದೆ. ಅನೇಕ ವಿದ್ಯಾರ್ಥಿಗಳು ಉನ್ನತ ರ‌್ಯಾಂಕ್ ಪಡೆದು ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಆದರೆ, ಕೊಡಗು ಜಿಲ್ಲೆಯ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ, ತಾಂತ್ರಿಕ ತರಬೇತಿ ಕೊರತೆಯಿಂದ ದೂರದ ಊರುಗಳಿಗೆ ತೆರಳುತ್ತಿದ್ದು, ಉತ್ತಮ ರ‌್ಯಾಂಕ್ ದೊರಕುತ್ತಿಲ್ಲ. ಈ ನಿಟ್ಟಿನಲ್ಲಿ 2007ರಲ್ಲಿ ಮಡಿಕೇರಿಯಲ್ಲಿ ಶಾಖೆ ಆರಂಭಿಸಿದ್ದು, ಶಿಕ್ಷಣ ಜೊತೆಗೆ ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದೆ ಎಂದರು.


ಮಾಹಿತಿಗೆ ಮೊ: 94480 05642/ 98804 59767/ 94486 25198 ಸಂಪರ್ಕಿಸಬಹುದು. ಫೌಂಡೇಷನ್ ಉಪಾಧ್ಯಕ್ಷ ಡಾ.ಕೂಡಕಂಡಿ ದಯಾನಂದ, ನಿರ್ದೇಶಕರಾದ ನಂಗಾರು ರಾಮಚಂದ್ರ, ತೆಕ್ಕಡೆ ಗುಲಾಬಿ ಜನಾರ್ದನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net