

ಚನ್ನರಾಯಪಟ್ಟಣ: ರೈತರ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಡಿ.20ರಂದು ಬೆಳಗಾವಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಪ್ರೊ.ನಂಜುಂಡಸ್ವಾಮಿ ಬಣ) ಅಧ್ಯಕ್ಷ ಅರಳಾಪುರ ಮಂಜೇಗೌಡ ತಿಳಿಸಿದರು.
ರೈತರು ಬೆಳದ ಬೆಳೆಗಳಿಗೆ ಇದುವರೆಗೂ ಯಾವುದೇ ಸರ್ಕಾರ ವೈಜ್ಞ್ಞಾನಿಕ ಬೆಲೆ ನಿಗದಿಗೆ ಮುಂದಾಗಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪೊಳ್ಳು ಆಶ್ವಾಸನೆಯೊಂದಿಗೆ ಮೋಸ ಮಾಡುತ್ತಾ ಕಾಲ ದೂಡುತ್ತಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಸರ್ಕಾರವನ್ನು ಎಚ್ಚರಿಸುವ ಸಲುವಾಗಿ ಡಿ.20 ರಿಂದ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನಲ್ಲೇ ಸಾವಿರಾರು ರೈತರಿಂದ ಮುತ್ತಿಗೆ ಹಾಕಲಾಗುವುದು. ರೈತರ ನ್ಯಾಯಯುತ ಬೇಡಿಕೆಗಳಾದ ಸಮಗ್ರ ನೀರಾವರಿ ಹಾಗೂ ಎಪಿಎಂಸಿ ಕೃಷಿ ಕಾಯ್ದೆ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಪ್ರತಿ ಟನ್ ಕಬ್ಬಿಗೆ 5500 ರೂ. ನಿಗದಿ, ಕೊಬ್ಬರಿ ಕ್ವಿಂಟಾಲ್‌ಗೆ 23 ಸಾವಿರ ರೂ. ನಿಗದಿಗೊಳಿಸಬೇಕು. ರಾಗಿ, ಜೋಳ, ಶೇಂಗಾ, ಭತ್ತ, ಹೊಗೆಸೊಪ್ಪು, ಅಡಕೆ, ತರಕಾರಿ ಸೇರಿ ರೈತ ಬೆವರು ಸುರಿಸಿ ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಲೇಬೇಕು ಎಂದು ಮನವಿ ಮಾಡಿದರು.
ಲೀಟರ್ ಹಾಲಿನ ದರವನ್ನು 50 ರೂ.ಗಳಿಗೆ ಹೆಚ್ಚಿಸಬೇಕು, ರೈತರ ಮೇಲಿರುವ ಕೇಸ್‌ಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ರಾಜ್ಯದ ಉದ್ದಗಲಕ್ಕೂ ರೈತರು ಬೆಳಗಾವಿಗೆ ತೆರಳಲಿದ್ದಾರೆ. ಮಹಾರಾಷ್ಟ್ರ ಹಾಗೂ ಕರ್ನಾಟಕ ಗಡಿ ಸಮಸ್ಯೆಯನ್ನು ಕೇಂದ್ರ ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಿ ಬಗೆಹರಿಸಲು ಮುಂದಾಗಬೇಕು ಎಂದು ಎಂದು ತಾಕೀತು ಮಾಡಿದರು.
ಡಿ.19 ರಂದು ಆಯಾ ವ್ಯಾಪ್ತಿಯ ರೈಲುಗಳ ಮೂಲಕ ಬೆಳಗಾವಿಗೆ ಬರಬೇಕು. ಡಿ.20 ರಂದು 10 ಗಂಟೆಗೆ ವಿಧಾನಸೌಧ ಮುತ್ತಿಗೆ ಹೋರಾಟವನ್ನು ಆರಂಭಿಸಲಾಗುವುದು, ರೈಲು ಏರುವ ರೈತರು ಯಾವುದೇ ಟಿಕೆಟ್ ಪಡೆಯುವಂತಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ಡಾ.ಮಂಜುನಾಥ್, ಜಿಲ್ಲಾ ಕಾರ್ಯಾಧ್ಯಕ್ಷ ಮಹೇಶ್, ತಾಲೂಕು ಗೌರವಾಧ್ಯಕ್ಷ ಪ್ರಕಾಶ್, ಸಂಚಾಲಕ ರಾಮಚಂದ್ರು ಇದ್ದರು.