

ಅಥಣಿ: ಮರಾಠ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಡಿ. 20ರಂದು ಬೆಳಗಾವಿ ಚಲೋ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ಕ್ಷತ್ರಿಯ ಮರಾಠ ಸಮುದಾಯದ ರಾಜ್ಯಾಧ್ಯಕ್ಷ ಶ್ಯಾಮಸುಂದರ ಗಾಯವಾಡ ತಿಳಿಸಿದರು.
ಇಲ್ಲಿನ ಶಿವಾಜಿ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಥಣಿ-ಕಾಗವಾಡ ಮರಾಠ ಸಮುದಾಯದವರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮೀಸಲಾತಿಗೆ ಆಗ್ರಹಿಸಿ ಸುಮಾರು 50 ಸಾವಿರ ಜನರು ಬೆಳಗಾವಿ ಸುವರ್ಣ ವಿಧಾನಸೌಧದ ಎದುರು ಹಮ್ಮಿಕೊಂಡಿರುವ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
25 ವರ್ಷಗಳಿಂದ ಹೋರಾಟ ಮಾಡುತ್ತ ಬಂದಿರುವ ಸಮಾಜ ಇನ್ನೂ 3ಬಿ ಯಲ್ಲಿದೆ. 60 ಲಕ್ಷ ಜನರಿರುವ ಮರಾಠ ಸಮುದಾಯ ಇಲ್ಲಿಯವರೆಗೆ ಬಿಜೆಪಿ ಬೆಂಬಲಿಸುತ್ತ ಹಿಂದುತ್ವಕ್ಕೆ ಹೋರಾಟ ಮಾಡಿದ್ದೇವೆ. ಒಂದು ವೇಳೆ ಸರ್ಕಾರ ನಮ್ಮ ಮನವಿಗೆ ಸ್ಪಂದಿಸಿ ಮೀಸಲಾತಿ ನೀಡಿದರೆ ಉತ್ತಮ, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ತಕ್ಕಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಮುದಾಯದ ರಾಜ್ಯ ಉಪಾಧ್ಯಕ್ಷ ಬಾಹುಸಾಹೇಬ ಜಾಧವ ಮಾತನಾಡಿ, ಯಡಿಯೂರಪ್ಪ ಅಧಿಕಾರಕ್ಕೆ ಬಂದು 24 ಗಂಟೆಯಲ್ಲಿ ಮೀಸಲಾತಿ ನೀಡುವ ಭರವಸೆ ನೀಡಿದ್ದರು. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದು 24 ತಿಂಗಳಾದರೂ ಮೀಸಲಾತಿ ಬಗ್ಗೆ ಮಾತನಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಆದಷ್ಟು ಬೇಗ ಮೀಸಲಾತಿ ನೀಡದಿದ್ದರೆ ಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಚಿಕ್ಕೋಡಿ ಜಿಲ್ಲಾಧ್ಯಕ್ಷ ವಿನಾಯಕ ದೇಸಾಯಿ ಹಾಗೂ ಮಾಜಿ ಶಾಸಕ ಮನೋಹರ ಕಡೊಲ್ಕರ ಮಾತನಾಡಿದರು. ರವಿಶಂಕರ ಮಹಾಡಿ, ವಿಠ್ಠಲ ವಾಘಮೋಡೆ, ಮನೋಹರ ಸಾಳುಂಕೆ, ಸುಧಾಕರ ಭಗತ, ಸುಜಿತ ಪರಾಕಟೆ, ರವಿ ದೇಸಾಯಿ, ಪ್ರತಾಪ ಜತ್ರಾಟೆ, ಈಶ್ವರ ಶಿಂಧೆ, ಎನ್.ಜಿ.ಪಾಟೀಲ, ಎನ್.ಆರ್.ಜಾಧವ, ಆರ್.ಪಿ.ಅವತಾಡೆ, ಸಿದ್ದು ಪಾಟೀಲ, ಸುರೇಶ ಪಾಟೀಲ ಇತರರಿದ್ದರು.