

ಹಾಸನ: ನಗರದ ಅಂಬೇಡ್ಕರ್ ಭವನದಲ್ಲಿ ಅಕ್ಟೋಬರ್ 20ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ಹಾಸನ ಜಿಲ್ಲೆಯ ಸಮಗ್ರ ಮತ್ತು ಸಮರ್ಪಕ ಅಭಿವೃದ್ಧಿ ಕುರಿತು ಬೃಹತ್ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಧಮೇಶ್ ತಿಳಿಸಿದರು.
ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಉದ್ಯೋಗ ಮತ್ತು ಆರ್ಥಿಕ ಅಭಿವೃದ್ಧಿ, ಕೃಷಿ, ಪರಿಸರ ಸಂರಕ್ಷಣೆ, ಕೈಗಾರಿಕೆ, ವಾಣಿಜ್ಯ, ಉದ್ಯೋಗ ಸೃಷ್ಟಿಯ ಪ್ರಶ್ನೆಗಳು ಎನ್ನುವ ವಿಷಯಗಳ ಆಧಾರದ ಮೇಲೆ ಇದೆ ಭಾನುವಾರ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಮಾಡಲಿದ್ದಾರೆ. ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿ ನಿರ್ದೇಶಕ ಡಾ. ಎಂ. ಚಂದ್ರ ಪೂಜರಿ ದಿಕ್ಸೂಜಿ ಭಾಷಣ ಮಾಡಲಿದ್ದಾರೆ. ಸಂಸದ ಶ್ರೇಯಸ್ ಎಂ. ಪಟೇಲ್, ಶಾಸಕ ಎಚ್.ಪಿ. ಸ್ವರೂಪ್, ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ, ಜಿಲ್ಲಾಧಿಕಾರಿ ಸಿ. ಸತ್ಯಭಾಮಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಆರ್. ಪೂರ್ಣಿಮಾ, ಎಸ್ಪಿ ಮೊಹಮ್ಮದ್ ಸುಜೀತಾ, ಸಿಐಟಿಯು ರಾಜ್ಯಾಧ್ಯಕ್ಷೆ ಎಸ್. ವರಲಕ್ಷ್ಮೀ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಇತರರು ಭಾಗವಹಿಸಲಿದ್ದಾರೆ ಎಂದರು.
ಹಾಸನ ಜಿಲ್ಲೆಯ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯ ಸ್ವರೂಪ ಕುರಿತು ಸಂಪನ್ಮೂಲ ವ್ಯಕ್ತಿಗಳಾದ ತಿಪ್ಪೇಸ್ವಾಮಿ ಅವರು ಉಪನ್ಯಾಸ ನೀಡುವರು. ಜಿಲ್ಲೆಯ ಕೃಷಿ ಸಮಾಜದಲ್ಲಿನ ಸ್ಥಿತ್ಯಂತರಗಳು, ಗ್ರಾಮೀಣಾಭಿವೃದ್ಧಿ ಮತ್ತು ಉದ್ಯೋಗ ಕುರಿತು ಹಿರಿಯ ಪ್ರಾಧ್ಯಾಪಕ ಡಾ. ಎಚ್.ಡಿ. ಪ್ರಶಾಂತ್ ಉಪನ್ಯಾಸ ನೀಡಲಿದ್ದಾರೆ. ಜಿಲ್ಲೆಯ ಭೂಮಿ, ಕೈಗಾರಿಕೆ, ವಾಣಿಜ್ಯೋದ್ಯಮ ಹಾಗೂ ಉದ್ಯೋಗ ಸೃಷ್ಟಿಯ ಪ್ರಶ್ನೆಗಳು ಎಂಬ ವಿಷಯದ ಬಗ್ಗೆ ಸಹಾಯಕ ಪ್ರಾಧ್ಯಾಪಕ ಡಾ. ಆರ್.ವಿ. ಚಂದ್ರಶೇಖರ್ ವಿಷಯ ಮಂಡಿಸಲಿದ್ದಾರೆ. ಜಿಲ್ಲೆಯ ಪರಿಸರಾತ್ಮಕ ಬಿಕ್ಕಟ್ಟುಗಳು ಮತ್ತು ಅಭಿವೃದ್ಧಿ ಕುರಿತು ಪರಿಸರವಾದಿ ಪ್ರಸಾದ್ ರಕ್ಷಿದ್ ಮಾತನಾಡಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಿಐಟಿಯು ಪ್ರಧಾನ ಕಾರ್ಯದರ್ಶಿ ಎಂ.ಬಿ. ಪುಷ್ಪಾ, ಕೆಪಿಆರ್ಎಸ್ ಜಿಲ್ಲಾಧ್ಯಕ್ಷ ಎಚ್.ಆರ್. ನವೀನ್ ಕುಮಾರ್, ಡಿವೈಎಫ್ಐ. ಕಾರ್ಯದರ್ಶಿ ಎಂ.ಜಿ. ಪೃಥ್ವಿ, ಡಿಎಚ್ಎಸ್ ಸಹ ಸಂಚಾಲಕ ರಾಜು ಸಿಗರನಹಳ್ಳಿ, ಅರವಿಂದ್ ಇತರರು ಭಾಗವಹಿಸಿದ್ದರು.