

ಚಿತ್ರದುರ್ಗ: ತರಾಸು ರಂಗಮಂದಿರದಲ್ಲಿ ಜು.20ರ ಸಂಜೆ 5ಕ್ಕೆ ‘ಉನ್ಮುಖಿ’ ಹೆಸರಿನಡಿ ಕೃಪಾ ಜಿ.ರಮೇಶ್ ಅವರ ಭರತನಾಟ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಲಾವಿದೆಯ ಪಾಲಕ ರಮೇಶ್ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸತತ ಎರಡು ಗಂಟೆ ಕಾರ್ಯಕ್ರಮ ಇದಾಗಿದ್ದು, ಪೂರ್ವಾರ್ಧದಲ್ಲಿ ಶ್ಲೋಕ, ಅಲರಿಪು, ಶಬ್ಧಂ, ಪದವರ್ಣ ಹಾಗೂ ಉತ್ತರಾರ್ಧದಲ್ಲಿ ಪದಂ, ಕೀರ್ತನೆ, ದೇವರನಾಮ, ತಿಲ್ಲಾನ, ಮಂಗಳಂ ಕುರಿತು ನಾಟ್ಯ ಪ್ರದರ್ಶನ ನೀಡಲಿದ್ದಾರೆ ಎಂದರು.
ಕೃಪಾ ಬಿಇ ಸಿವಿಲ್ ಇಂಜಿನಿಯರಿಂಗ್ ಪೂರ್ಣಗೊಳಿಸಿದ್ದು, ತಾಯಿಯ ಆಸೆಯಂತೆ ಭರತನಾಟ್ಯದತ್ತ 8ನೇ ವಯಸ್ಸಿನಲ್ಲಿಯೇ ಆಸಕ್ತಿ ಬೆಳೆಸಿಕೊಂಡಿದ್ದಾಳೆ. ಭರತನಾಟ್ಯದಲ್ಲಿ ಎಂಎ ವ್ಯಾಸಂಗವನ್ನು ಮೈಸೂರಿನ ಡಾ.ಗಂಗೂಬಾಯಿ ಹಾನಗಲ್ ಸಂಗೀತ ವಿವಿಯಲ್ಲಿ ಪಡೆಯುತ್ತಿದ್ದಾಳೆ. ಡಾ.ಮಂಗಳಾ ಶೇಖರ್ ಗುರುವಾಗಿ ಮಾರ್ಗದರ್ಶನ ನೀಡಿದ್ದಾರೆ ಎಂದು ತಿಳಿಸಿದರು.
ಮೈಸೂರಿನ ನೃತ್ಯಗಿರಿ ಸಂಸ್ಥಾಪಕಿ ಡಾ.ಕೃಪಾ ಫಡ್ಕೆ, ದಾವಣಗೆರೆ ಭರತಾಂಜಲಿ ಸಂಸ್ಥಾಪಕಿ ಡಾ.ಮಂಗಳಾ ಶೇಖರ್, ಸಂಸ್ಕಾರ ಭಾರತೀ ಪ್ರಾಂತ ಪ್ರಧಾನ ಕಾರ್ಯದರ್ಶಿ ಡಾ.ರಾಜೀವ ಲೋಚನ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಪಾಲಕರಾದ ಜಲಜಾ, ರೋಹಿಣಿ ಇತರರಿದ್ದರು.