20ಕ್ಕೆ ವಿಜಯಪುರ ಪುರಸಭೆ ಅಧ್ಯಕ್ಷರ ಆಯ್ಕೆ, ಚುನಾವಣೆ ಪ್ರಕ್ರಿಯೆ ನಿಗದಿಪಡಿಸಿದ ತಹಸೀಲ್ದಾರ್, ಸದಸ್ಯರಿಗೆ ನೋಟಿಸ್ ರವಾನೆ

16-vij-6b-deergha kala nanthara praja prabhuthva-mahila power -vijayapura purasabhe
Published on

ವಿಜಯಪುರ: ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದೆ. ಸೋಮವಾರ (ಸೆ.20) ಚುನಾವಣಾ ಪ್ರಕ್ರಿಯೆ ನಡೆಯಲಿದ್ದು, ಚುನಾವಣಾಧಿಕಾರಿ ಆಗಿರುವ ತಹಸೀಲ್ದಾರ್, ಪುರಸಭೆ ಸದಸ್ಯರಿಗೆ ನೋಟಿಸ್ ರವಾನಿಸಿದ್ದಾರೆ. ಇದರಿಂದಾಗಿ 8 ವರ್ಷಗಳ ಬಳಿಕ ಪುರಸಭೆಯಲ್ಲಿ ಪ್ರಜಾಪ್ರಭುತ್ವ ಆಡಳಿತ ಸ್ಥಾಪನೆಗೊಳ್ಳಲಿದೆ.

ಕಳೆದ ಬಾರಿ ಕಾಂಗ್ರೆಸ್‌ನಿಂದ ಅತಿಹೆಚ್ಚು ಸದಸ್ಯರು ಆಯ್ಕೆಯಾಗಿದ್ದರು. ಆಗ ಕಾಂಗ್ರೆಸ್ ಸದಸ್ಯರ ನಡುವಿನ ಒಳಜಗಳ, ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಸೇರಿ ನಾನಾ ಕಾರಣಗಳಿಗಾಗಿ ಸದಸ್ಯರು ಕೋರ್ಟ್ ಮೆಟ್ಟಿಲೇರಿದ್ದರಿಂದ ಪುರಸಭೆಯಲ್ಲಿ 8 ವರ್ಷಗಳಿಂದ ಪ್ರಜಾಪ್ರಭುತ್ವ ಆಡಳಿತ ಇಲ್ಲದೆ ಜನರು ತೀರಾ ಸಂಕಷ್ಟಕ್ಕೆ ಸಿಲುಕಿದ್ದರು. ಈಗ ಪುರಸಭೆಗೆ ಹೊಸದಾಗಿ ಚುನಾವಣೆ ನಡೆದು, ಸದಸ್ಯರು ಆಯ್ಕೆಯಾಗಿದ್ದಾರೆ. ಜೆಡಿಎಸ್‌ನಿಂದ 13 ಮಂದಿ ಆಯ್ಕೆಯಾಗಿದ್ದು, ಬಹುಮತವನ್ನೂ ಪಡೆದುಕೊಂಡಿದ್ದಾರೆ. ಕರೊನಾ ಕಾರಣದಿಂದಾಗಿ ಸರ್ಕಾರ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ವಿಳಂಬಿಸಿತ್ತು. 5 ತಿಂಗಳ ಬಳಿಕ ಅದಕ್ಕೆ ಮುಹೂರ್ತ ನಿಗದಿಪಡಿಸಿರುವುದರಿಂದ ಜನರು ಸಹಜವಾಗಿ ಸಂತುಷ್ಟರಾಗಿದ್ದಾರೆ.

ಸೋಮವಾರವೇ ನಾಮಪತ್ರ ಸಲ್ಲಿಕೆ, ಪರಿಶೀಲನೆ ಮತ್ತು ಹಿಂಪಡೆಯಲು ಅವಕಾಶ ಕೊಟ್ಟ ನಂತರ ಅವಶ್ಯಕತೆ ಬಿದ್ದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಲಿದೆ ಎಂದು ತಹಸೀಲ್ದಾರ್ ಹೇಳಿದ್ದಾರೆ.

ಪುರಸಭೆ 23 ಸದಸ್ಯ ಬಲ ಹೊಂದಿದ್ದು, ಜೆಡಿಎಸ್‌ನ 13, ಕಾಂಗ್ರೆಸ್ 7, ಇಬ್ಬರು ಕಾಂಗ್ರೆಸ್ ಬಂಡಾಯ ಹಾಗೂ ಬಿಜೆಪಿಯ ಒಬ್ಬರು ಆಯ್ಕೆಯಾಗಿದ್ದಾರೆ. ಬಹುಮತ ಹೊಂದಿರುವ ಕಾರಣ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಜೆಡಿಎಸ್ ಪಾಲಾಗುವುದು ಖಚಿತವಾಗಿದೆ.

ಅಧ್ಯಕ್ಷರಾಗಿ ರಾಜೇಶ್ವರಿ ಆಯ್ಕೆ ಸಂಭವ: ಸರ್ಕಾರ ನಿಗದಿಪಡಿಸಿರುವ ಮೀಸಲಾತಿ ಪ್ರಕಾರ ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. 6 ಮಹಿಳೆಯರು ಜೆಡಿಎಸ್‌ನಿಂದ ಮೊದಲ ಬಾರಿಗೆ ಸದಸ್ಯರಾಗಿದ್ದಾರೆ. ವಿಜಯಪುರದಲ್ಲಿ ಮೂಲೆಗುಂಪಾಗಿದ್ದ ಜೆಡಿಎಸ್‌ನ ಪುನರುತ್ಥಾನದಲ್ಲಿ ಟೌನ್ ಜೆಡಿಎಸ್ ಅಧ್ಯಕ್ಷ ಎಸ್. ಭಾಸ್ಕರ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಇದಕ್ಕೆ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರ ಬೆಂಬಲವೂ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಭಾಸ್ಕರ್ ಅವರ ಪತ್ನಿ ರಾಜೇಶ್ವರಿ ಅವರು ಪುರಸಭೆ ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಮೂರು ಬಾರಿ ಪುರಸಭೆ ಆಯ್ಕೆಯಾಗಿರುವ ಟೌನ್ ಜೆಡಿಎಸ್ ಉಪಾಧ್ಯಕ್ಷ ಎಂ. ಕೇಶವಪ್ಪ ಪುರಸಭೆ ಉಪಾಧ್ಯಕ್ಷರಾಗುವ ಸಾಧ್ಯತೆ ಹೆಚ್ಚಾಗಿದೆ.

16-ವಿಜ್.6ಬಿ; ವಿಜಯಪುರ ಪುರಸಭಾ ಕಾರ್ಯಾಲಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net