

ಬೆಳಗಾವಿ: ಜನವರಿ 22ರಂದು ಆಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠಾಪಿಸುತ್ತಿರುವ ಹಿನ್ನೆಲೆಯಲ್ಲಿ ವಿಶ್ವ ಹಿಂದು ಪರಿಷತ್‌ನಿಂದ ನಗರದ ವಿಶ್ವ ಹಿಂದು ಪರಿಷತ್ ಕಾರ್ಯಾಲಯ ‘ಸಮರಸತಾ ಭವನದಲ್ಲಿ’ ಜ.16ರಿಂದ ಜ.20ರವರೆಗೆ ಆಯೋಜಿಸಿದ್ದ ಅಖಂಡ 24 ಗಂಟೆ ಹಗಲು-ರಾತ್ರಿ ಹನುಮಾನ ಚಾಲೀಸಾ ಪಠಣ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.
ಹನುಮಾನ ಚಾಲೀಸಾ ಸೇವಾ ಪರಿವಾರದ ಗೌರವಾಧ್ಯಕ್ಷ ಮುನಿಸ್ವಾಮಿ ಭಂಡಾರಿ ಮಾತನಾಡಿ, 500 ವರ್ಷಗಳ ನಂತರ ಈ ಸಂಭ್ರಮ ಆಚರಿಸಲು ಅವಕಾಶ ಸಿಕ್ಕಿದೆ. ರಾಮ ಭಕ್ತ ಹನುಮಂತನ ಆರಾಧನೆ ಮೂಲಕ ಅಧ್ಯಾತ್ಮ ಸಾಧನೆ ಮಾಡಲು ಅಖಂಡ ಹನುಮಾನ ಚಾಲೀಸಾ ಒಂದು ಅವಕಾಶ. ಪ್ರತಿಯೊಬ್ಬರೂ ಭಾಗವಹಿಸಿ ಸಾಧಕರಾಗೋಣ. ಸ್ವತಃ ನಮ್ಮ ಕುಟುಂಬ ಪ್ರತಿನಿತ್ಯ ಭಾಗವಹಿಸುತ್ತಿದೆ. ಜನರು ತಮಗೆ ಅನುಕೂಲದ ಸಮಯದಲ್ಲಿ ಹೆಸರು ನೋಂದಣಿ ಮಾಡುವಂತೆ ಕೋರಿದರು.
ಕೃಷ್ಣ ಭಟ್ ಪ್ರಾಸ್ತಾವಿಕ ಮಾತನಾಡಿ, ಅಶೋಕ ಸಿಂಘಾಜಿ ಅವರು ವಿಶ್ವ ಹಿಂದು ಪರಿಷತ್ ಕಾರ್ಯಾಲಯ ಸಮರಸತಾ ಭವನ ಉದ್ಘಾಟಿಸಿದ್ದಾರೆ. ಬೆಳಗಾವಿಯ ಎರಡು ಹಿರಿಯ ಪ್ರಚಾರಕರಾದ ಸದಾನಂದಜೀ ಕಾಕಡೆ ಮತ್ತು ಬಾಬುರಾವ ದೇಸಾಯಿ ಕನಸು ಈ ಭವನ. ಹಾಗಾಗಿ ಅವರೆಲ್ಲ ಅಯೋಧ್ಯೆಯ ಹೋರಾಟದಲ್ಲಿ ಅಶೋಕ ಸಿಂಘಾಜಿ ಅವರಿಗೆ ಹೆಗಲಿಗೆ ಹೆಗಲು ಕೊಟ್ಟು ಪರಿಶ್ರಮ ಪಟ್ಟಿದ್ದಾರೆ. ಲಕ್ಷಾವಧಿ ಜನರ ಬಲಿದಾನ ತ್ಯಾಗದಿಂದ ಭವ್ಯ ರಾಮಮಂದಿರ ಆಗುತ್ತಿರುವ ಈ ಶುಭ ಸಂದರ್ಭದಲ್ಲಿ ಎಲ್ಲರೂ ಸಮರಸತಾ ಭವನದಲ್ಲಿ ಜರುಗುವ ಅಖಂಡ ಹನುಮಾನ ಚಾಲೀಸಾ ಪಠಣದಲ್ಲಿ ಪಾಲ್ಗೊಂಡು ಪ್ರಭು ಶ್ರೀರಾಮನ ಚರಣಕ್ಕೆ ಸಮರ್ಪಿಸಬೇಕು ಎಂದರು.
ಹನುಮಾನ ಚಾಲೀಸಾ ಸೇವಾ ಪರಿವಾರದ ಅಧ್ಯಕ್ಷ ಜೇಠಾಬಾಯಿ ಪಟೇಲ, ಮೇಯರ್ ಶೋಭಾ ಸೋಮನಾಚೆ, ರಾಜಶೇಖರ ಪಾಟೀಲ, ರಾಮ ಭಂಡಾರಿ, ರಾಮ ಜಮ್ನಾನಿ, ರಾಜೇಶ್ವರಿ ಸಂಬರಗೀಮಠ, ಸಂತೋಷ ವಾದ್ವಾ, ಬಿಪಿನಬಾಯಿ ಪಟೇಲ, ಡಾ. ಸುಭಾಷ ಪಾಟೀಲ, ಶ್ರೀಕಾಂತ ಕದಮ್, ರೋಹಿತ ರಾವಲ, ಮಹೇಶ ಪೋರವಾಲ, ಸತೀಶ ಬಾಚೀಕರ, ದಿನೇಶ ಪಾಟೀಲ, ಆನಂದ ಕರಲಿಂಗಣ್ಣವರ, ಗಣೇಶ ಚೌಗಲೆ, ನಾಗೇಶ ಕಾಂಬಳೆ, ರಾಘವೇಂದ್ರ ಕಟ್ಟಿ ಇತರರಿದ್ದರು.