20ನೇ ಕಂತು <20,500 ಕೋಟಿ ವರ್ಗಾವಣೆ

Untitled-1
ದೊಡ್ಡಬಳ್ಳಾಪುರದ ಹಾಡೋನಹಳ್ಳಿಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ಪಿಎಂ ಕಿಸಾನ್​ ಸಮ್ಮಾನ್​ ನಿಧಿಯ 20ನೇ ಕಂತಿನ ಹಣ ಬಿಡುಗಡೆ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ವಿ.ಸೋಮಣ್ಣ ಚಾಲನೆ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್​.ಮುನಿಯಪ್ಪ, ಸಂಸದ ಡಾ.ಕೆ.ಸುಧಾಕರ್​, ಶಾಸಕ ಧೀರಜ್​ ಮುನಿರಾಜು, ಜಿಲ್ಲಾಧಿಕಾರಿ ಬಸವರಾಜು, ಕೃಷಿ ವಿವಿ ಉಪಕುಲಪತಿ ಡಾ.ಸುರೇಶ ಇತರರು ಇದ್ದರು.
Published on

ದೊಡ್ಡಬಳ್ಳಾಪುರ/ತೂಬಗೆರೆ : ಪಿಎಂ ಕಿಸಾನ್​ ಸಮ್ಮಾನ್​ ನಿಧಿ ಯೋಜನೆಯಡಿ ದೇಶದ 9.70 ಕೋಟಿಗೂ ಹೆಚ್ಚಿನ ರೈತ ಫಲಾನುಭವಿಗಳಿಗೆ 20ನೇ ಕಂತಿನ ಮೂಲಕ 20,500 ಕೋಟಿ ರೂಪಾಯಿ ವರ್ಗಾವಣೆ ಮಾಡಲಾಗಿದೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಸಚಿವ ವಿ.ಸೋಮಣ್ಣ ತಿಳಿಸಿದರು. ಹಾಡೋನಹಳ್ಳಿಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶನಿವಾರ ಪಿಎಂ ಕಿಸಾನ್​ ಸಮ್ಮಾನ್​ ನಿಧಿಯ 20ನೇ ಕಂತಿನ ಹಣ ಬಿಡುಗಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ವರ್ಷಕ್ಕೆ ಮೂರು ಕಂತುಗಳಲ್ಲಿ ತಲಾ 2 ಸಾವಿರ ರೂ.ದಂತೆ 6 ಸಾವಿರ ರೂಪಾಯಿಯನ್ನು ನೇರವಾಗಿ ರೈತರ ಖಾತೆಗೆ ಹಾಕಲಾಗುತ್ತಿದೆ. ಇದರಲ್ಲಿ ಯಾವುದೇ ಭ್ರಷ್ಟಾಚಾರ ಇಲ್ಲ. ಈ ಹಿಂದೆ ರಾಜೀವ್​ ಗಾಂಧಿ ಕಾಲದಲ್ಲಿ ಕೇಂದ್ರದಿಂದ 10 ರೂ. ಬಿಡುಗಡೆಯಾದರೆ ಫಲಾನುಭವಿಗೆ ತಲುಪುವ ವೇಳೆಗೆ 2 ರೂಪಾಯಿ ಆಗುತ್ತಿತ್ತು. ಆದರೆ, ಪ್ರಸ್ತುತ ಡಿಬಿಟಿ ಸ್ಕೀಂ ಮೂಲಕ ರೈತನ ಖಾತೆಗೆ ನೇರವಾಗಿ ಹಣ ತಲುಪುತ್ತಿವೆ. ರಾಜ್ಯ ಸರ್ಕಾರ 4 ಸಾವಿರ ರೂ. ಕೊಡುತ್ತಿದ್ದ ಹಣ ಕಡಿತಗೊಳಿಸಿದೆ. ಆದರೆ, ಕೇಂದ್ರ ಸರ್ಕಾರ ರೈತರ ಹಲವು ಬೆಳೆಗಳಿಗೆ ಬೆಂಬಲ ಬೆಲೆ ನೀಡಿದೆ, ನರೇಂದ್ರ ಮೋದಿ ರೈತರ ಅಭ್ಯುದ್ಯಯಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್​.ಮುನಿಯಪ್ಪ ಮಾತನಾಡಿ, ಕೇಂದ್ರ ಸರ್ಕಾರ ದೊಡ್ಡದೊಡ್ಡ ಉದ್ಯಮಿಗಳ ಸಾಲ ಮನ್ನಾ ಮಾಡಿದೆ. ಆದರೆ, ದೇಶದ ರೈತರ ಸಾಲಮನ್ನಾ ಮಾಡಬೇಕು. ಸೋಮಣ್ಣ, ಪ್ರಧಾನಿ ಮೋದಿ, ಕೃಷಿ ಸಚಿವರಿಗೆ ಆಪ್ತರು. ನೀವು ಮಾತನಾಡಿ ರೈತರ ನೆರವಿಗೆ ಬನ್ನಿ, ಬಯಲು ಸೀಮೆಯ ಶಾಶ್ವತ ನೀರಾವರಿ ಯೋಜನೆಯಾದ ಪರಮಶಿವಯ್ಯ ವರದಿ ಜಾರಿಗೆ ಕ್ರಮ ವಹಿಸಿ ಎಂದರು.

ನಾವು ಎತ್ತಿನಹೊಳೆ ಯೋಜನೆ ತಂದಿದ್ದೇವೆ. ನೇತ್ರಾವತಿಯಲ್ಲಿ 500 ಟಿಎಂಸಿ ನೀರು ಸಮುದ್ರದ ಪಾಲಾಗುತ್ತಿದೆ. ವಿಶ್ವೇಶ್ವರಯ್ಯ ಅವರ ಮಾದರಿ ನೀರಿಗೆ ಆದ್ಯತೆ ನೀಡಿ. ಅಭಿವೃದ್ಧಿ ಕೆಲಸಗಳಲ್ಲಿ ನಾವು ನಿಮ್ಮ ಜತೆಗೆ ಇರುತ್ತೇವೆ. ಗೊಬ್ಬರದ ವಿಷಯದಲ್ಲಿ ಸಿಎಂ ಸಿದ್ದರಾಮಯ್ಯ, ಕೇಂದ್ರ ಸಚಿವ ಜೆ.ಪಿ.ನಡ್ಡಾ, ಕೃಷಿ ಸಚಿವ ಶಿವರಾಜ್​ ಸಿಂಗ್​ ಚೌಹ್ಹಾಣ್​ ಅವರಿಗೆ ಪತ್ರ ಬರೆದಿದ್ದಾರೆ. ಮಳೆ ಬಂದು ಹೆಚ್ಚಿನ ಬೇಡಿಕೆ ಇದೆ. ಗೊಬ್ಬರ ವ್ಯವಸ್ಥೆ ಮಾಡಿ ಎಂದರು.

ಕೇಂದ್ರದಿಂದ ಅಗತ್ಯ ರಸಗೊಬ್ಬರ ಪೂರೈಕೆ : ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅಗತ್ಯ ರಸಗೊಬ್ಬರ ಪೂರೈಕೆ ಮಾಡಿದೆ. ಮಳೆ ಹೆಚ್ಚಾಗಿರುವುದರಿಂದ ಬೇಡಿಕೆ ಹೆಚ್ಚಾಗಿದೆ. ಅಗತ್ಯವಿರುವಲ್ಲಿ ಸ್ಟಾಕ್​ ಲಭ್ಯವಾಗುವಂತೆ ನೋಡಿಕೊಳ್ಳುವುದು ರಾಜ್ಯ ಸರ್ಕಾರದ ಜವಾಬ್ದಾರಿ. ಕೇಂದ್ರವು ರಾಜ್ಯವಾರು ಯೋಜನೆ ಹೊರಡಿಸುತ್ತದೆ ಮತ್ತು ಎಲ್ಲ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಲಭ್ಯತೆ ಖಚಿತಪಡಿಸಿಕೊಳ್ಳುವುದು ರಾಜ್ಯ ಸರ್ಕಾರದ ಜವಾಬ್ದಾರಿ. ಏ.1 ರಿಂದ ಜು.27ರ ನಡುವೆ ಋತುಮಾನದ ಅವಶ್ಯಕತೆ 6.52 ಮೆಟ್ರಿಕ್​ ಟನ್​, ಈಗಾಗಲೇ 8.82 ಲಕ್ಷ ಮೆಟ್ರಿಕ್​ ಟನ್​ ಲಭ್ಯತೆ ಖಚಿತಪಡಿಸಿದೆ. ಇದಲ್ಲದೆ, 15,825 ಮೆಟ್ರಿಕ್​ ಟನ್​ ರಾಜ್ಯಕ್ಕೆ ಸಾಗಣೆಯಲ್ಲಿದೆ. ಈ ಅವಧಿಯಲ್ಲಿ ಯೂರಿಯಾ ಮಾರಾಟವು 7.47 ಲಕ್ಷ ಮೆಟ್ರಿಕ್​ ಟನ್​ ಆಗಿದ್ದು, ಬೇಡಿಕೆಗಿಂತ 95,000 ಮೆಟ್ರಿಕ್​ ಟನ್​ ಹೆಚ್ಚಾಗಿದೆ ಎಂದು ಸೋಮಣ್ಣ ಹೇಳಿದರು.

ರೈಲ್ವೆ ಯೋಜನೆಗಳಿಗೆ ಆದ್ಯತೆ : ಯುಪಿಎ ಅವಧಿಯಲ್ಲಿ ಕೇಂದ್ರ ಸರ್ಕಾರದ ರೈಲ್ವೆ ಸಚಿವರಾಗಿದ್ದಾಗ ರಾಜ್ಯದಲ್ಲಿನ 12 ರೈಲ್ವೆ ಯೋಜನೆಗಳಿಗೆ ಆದ್ಯತೆ ನೀಡಲಾಗಿದೆ. ಮುನಿಯಪ್ಪ ಅವರ ಕಾಲದ 39 ಸಾವಿರ ಕೋಟಿ ಯೋಜನೆಗಳಿಗೆ ಚಾಲನೆ ನೀಡಿದ್ದು, 2029ರಲ್ಲಿ ಮುಕ್ತಾಯ ಮಾಡುತ್ತೇನೆ. ಬೆಂಗಳೂರಿನ 100 ಕಿಲೋ ವ್ಯಾಪ್ತಿಯಲ್ಲಿ ಲೇವೆಲ್​ ಕ್ರಾಸಿಂಗ್​ಗಳ ತೆರವು ಮಾಡಿ, ಬ್ರಿಡ್ಜ್​ ನಿರ್ಮಾಣಕ್ಕೆ ಕ್ರಮ ಜರುಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ದೊಡ್ಡಬಳ್ಳಾಪುರದ ರೈಲ್ವೆ ನಿಲ್ದಾಣ ಅಭಿವೃದ್ಧಿಗೆ 25 ಕೋಟಿ ರೂ.ನಲ್ಲಿ ಅಮೃತ್​ ಭಾರತ್​ ಯೋಜನೆಯಡಿ ಕೆಲಸ ಮಾಡಲಾಗುತ್ತಿದೆ ಎಂದು ವಿ.ಸೋಮಣ್ಣ ಹೇಳಿದರು.

ಜಲಯೋಜನೆಗೆ ಸಭೆ ಮಾಡೋಣ : ಬಯಲು ಸೀಮೆಯ ಪ್ರದೇಶಗಳಿಗೆ ಅನುಕೂಲವಾಗುವ ಜಲ ಯೋಜನೆಗಳಾದ ಎತ್ತಿನಹೊಳೆ ಮತ್ತು ಭದ್ರಮೇಲ್ದಂಡೆ ಯೋಜನೆ ವಿಚಾರದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ವಿ.ಸೋಮಣ್ಣ ತಿಳಿಸಿದರು.

ರಾಹುಲ್​ ದೇಶದ ಬಗ್ಗೆ ತಿಳಿದುಕೊಳ್ಳಲಿ : ಲೋಕಸಭಾ ಚುನಾವಣೆಯಲ್ಲಿ ಅಕ್ರಮವಾಗಿದೆ ಎಂದು ರಾಹುಲ್​ ಗಾಂಧಿ ಹೇಳಿಕೆ ವಿಚಾರ ಕುರಿತು ಮಾತನಾಡಿದ ಸಚಿವ ವಿ.ಸೋಮಣ್ಣ, ರಾಹುಲ್​ ಗಾಂಧಿ ಅವರು ಮೊದಲು ದೇಶ ಏನು?, ನಮ್ಮ ದೇಶ ನಡೆದು ಬಂದ ದಾರಿ ಏನು? ಎಂದು ತಿಳಿದುಕೊಳ್ಳಬೇಕು. ಕನಿಷ್ಠ ಕಾಮನ್​ ಸೆನ್ಸ್​ ಇಲ್ಲದೆ, ಒಬ್ಬ ರಾಷ್ಟ್ರದ ವಿರೋಧ ಪಕ್ಷದ ನಾಯಕನಾಗಿ ನೆಹರು ಕುಟುಂಬದ ಕುಡಿಯಾಗಿ ಅವರು ಈ ರೀತಿಯಲ್ಲಿ ಮಾತನಾಡಬಾರದು ಎಂದರು.

ಆದಷ್ಟು ಬೇಗ ಕ್ರಮವಹಿಸಿ : ಧರ್ಮಸ್ಥಳದ ಕೇಸ್​ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ವಿ.ಸೋಮಣ್ಣ, ಧರ್ಮಸ್ಥಳದಲ್ಲಿ ಏನು ಸಿಕ್ಕಿದೆ ಎಂಬುದರ ಬಗ್ಗೆ ಗೊತ್ತಿಲ್ಲ. ಆದರೆ ಧರ್ಮಸ್ಥಳ ವಿಶ್ವದಲ್ಲಿಯೇ ಪವಿತ್ರ ಸ್ಥಳವಾಗಿದೆ. ದೇಶ, ವಿದೇಶದಲ್ಲಿ ತನ್ನದೇಯಾದ ಸ್ಥಾನವನ್ನು ಹೊಂದಿದೆ. ಪ್ರತಿ ವರ್ಷ ಸಿಂಗದೂರಿನ ಚೌಡೇಶ್ವರಿ ದೇವಾಲಯದಲ್ಲಿ ಮೊದಲ ಪೂಜೆ ಮಾಡುವುದು ಧರ್ಮಸ್ಥಳದ ಧರ್ಮಾಧಿಕಾರಿಗಳ ಕುಟುಂಬ. ಈ ವಿಚಾರವನ್ನು ಎಸ್​ಐಟಿ ತಂಡ ಬೇಗ ತನಿಖೆಯನ್ನು ನಡೆಸಿ ನ್ಯಾಯ ಕೊಡಿಸಬೇಕು. ಪರಂಪರೆ, ಧಾರ್ಮಿಕ ಭಾವನೆಗಳ ಕದಡುವ ಕೆಲಸ ಮಾಡಬಾರದು. ಎಸ್​ಐಟಿ ಬಗ್ಗೆ ಗೌರವ ಹಾಗೂ ನಂಬಿಕೆಯಿದೆ ಎಂದರು.

ಅಂಕಿ ಅಂಶ : ಈವರೆಗೆ 1.27 ಲಕ್ಷ ಸಾವಿರ ಕೋಟಿ ಬಜೆಟ್​ ಕೃಷಿಗಾಗಿ ಮೀಸಲಾಡಿಸಲಾಗಿದೆ. 20ನೇ ಕಂತಿನಲ್ಲಿ 20.800 ಕೋಟಿ. ರೂ.ನಲ್ಲಿ ದೇಶದ 9.7 ಕೋಟಿ ರೈತರಿಗೆ ಅನುಕೂಲವಾಗಿದೆ. ರಾಜ್ಯದಲ್ಲಿ 43.28 ಲಕ್ಷ ರೈತರಿಗೆ 877 ಕೋಟಿ ರೂಪಾಯಿ ಬಿಡುಗಡೆ ಆಗಿದೆ. ಇಲ್ಲಿಯವರೆಗೆ ರಾಜ್ಯದ ರೈತರಿಗಾಗಿ 18.926 ಕೋಟಿ ರೂಪಾಯಿ ಬಳಸಲಾಗಿದೆ. ಇದರಲ್ಲಿ ಹೆಣ್ಣುಮಕ್ಕಳಿಗೆ 2.26 ಕೋಟಿಗೂ ಅಧಿಕ ಫಲಾನುಭವಿಗಳಿರುವುದು ಮುಖ್ಯಾಂಶವಾಗಿದೆ. ಒಟ್ಟು 20ನೇ ಕಂತು ಒಳಗೊಂಡು 3.89 ಲಕ್ಷ ಕೋಟಿ ರೂ. ರೈತರ ಖಾತೆಗೆ ಜಮೆಯಾಗಿದೆ ಎಂದು ವಿ.ಸೋಮಣ್ಣ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net