ಗುರಿ ತಲುಪಲು ಶಿಸ್ತುಬದ್ಧ ಬದುಕು ಮುಖ್ಯ

Sirigeri tulabhara seva
ಸಿದ್ರಾಂಪುರದಲ್ಲಿ ಕದಳೀವನ ಸಿದ್ದೇಶ್ವರ ತಾತನ 20ನೇ ಪುಣ್ಯಾರಾಧನೆ ಅಂಗವಾಗಿ ಚಿದಾನಂದ ತಾತನವರ ತುಲಾಭಾರ ನೆರವೇರಿತು.
Published on

ಸಿರಿಗೇರಿ: ಕ್ರಮಬದ್ಧ ಜೀವನಶೈಲಿಯಿಂದ ಜೀವನದ ಗುರಿಮುಟ್ಟಲು ಸಾಧ್ಯ ಎಂದು ಕರೇಗುಡ್ಡದ ಶ್ರೀ ಮಹಾಂತಲಿಂಗ ಶಿವಾಚಾರ್ಯರು ಅಭಿಪ್ರಾಯಪಟ್ಟರು.

ಸಿದ್ರಾಂಪುರ ಗ್ರಾಮದಲ್ಲಿ ಕದಳೀವನ ಸಿದ್ದೇಶ್ವರ ತಾತನವರ 20ನೇ ಪುಣ್ಯಸ್ಮರಣೆ ಅಂಗವಾಗಿ ಭಾನುವಾರ ತುಲಾಭಾರ ಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು. ಅವಸರದ ಜೀವನಶೈಲಿ ಸಾಧನೆಗೆ ಅಡಚಣೆಯಾಗಲಿದ್ದು, ಗುರಿ ತಲುಪಲು ಶಿಸ್ತುಬದ್ಧ ಬದುಕು ಮುಖ್ಯ ಎಂದ ಅವರು, ಎಲ್ಲ ಧರ್ಮಿಯರನ್ನು ತನ್ನತ್ತ ಸೆಳೆಯುವ ಶಕ್ತಿ ಹೊಂದಿರುವ ಕದಳೀವನ ಸಿದ್ದೇಶ್ವರ ತಾತನವರ ಮಠ ಭಾವೈಕ್ಯ ಕೇಂದ್ರವಾಗಿ ಬೆಳೆದಿದೆ. ನೊಂದು ಬರುವ ಭಕ್ತರ ಜೀವನಕ್ಕೆ ಬೆಳಕು ನೀಡುತ್ತಿದೆ ಎಂದು ಹೇಳಿದರು.

ಕಂಪ್ಲಿ ಕಲ್ಮಠದ ಅಭಿನವ ಶ್ರೀ ಪ್ರಭುಸ್ವಾಮಿ ಮಾತನಾಡಿ, ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದರೆ ಬೇಡುವ ಗುಣದ ಬದಲು ನೀಡುವ ಗುಣ ಬೆಳೆಯಲು ಸಾಧ್ಯ. ಕದಳೀವನ ಸಿದ್ದೇಶ್ವರ ತಾತನವರ ಮಠ ಸಂಸ್ಕಾರ ನೀಡುವ ಕಾಯಕದಲ್ಲಿ ಮುಂಚೂಣಿಯಲ್ಲಿದೆ ಎಂದರು. ಇದಕ್ಕೂ ಮುನ್ನ ಕದಳೀವನ ಸಿದ್ದೇಶ್ವರ ತಾತನವರ ಉತ್ಸವ ಮೂರ್ತಿಯನ್ನು ಕಳಸ, ಪೂರ್ಣಕುಂಭಗಳೊಂದಿಗೆ ಮೆರವಣಿಗೆ ಮಾಡಲಾಯಿತು. ವೀರಗಾಸೆ, ಡೊಳ್ಳು, ಸಮಾಳ ಇನ್ನಿತರ ಕಲಾತಂಡಗಳು ಮೆರುಗು ಹೆಚ್ಚಿಸಿದ್ದವು.

ಕದಳೀವನ ಸಿದ್ದೇಶ್ವರ ತಾತನವರ ಮಠದ ಚಿದಾನಂದ ತಾತ, ಶ್ರೀಶೈಲ ವೀರಭದ್ರ ಶಿವಾಚಾರ್ಯರು ಮಾತನಾಡಿದರು. 15 ಮಕ್ಕಳಿಗೆ ಅಯ್ಯಚಾರ ಮತ್ತು 9 ಜೋಡಿ ಉಚಿತ ಸಾಮೂಹಿಕ ವಿವಾಹ ಜರುಗಿದವು. ಮಹಾಂತಲಿಂಗ ಶಿವಾಚಾರ್ಯರಿಗೆ ಗೆಣಿಕೆಹಾಳು ಗ್ರಾಮದ ಶಾಂತಮ್ಮ ಅರಿವಿ ಶಿವನಗೌಡ, ತೋರಣಗಲ್‌ನ ಚಿನ್ನಪ್ಪ ಎಸ್.ನಾಗರಾಜ ಪಾಟೀಲ್ ಮತ್ತು ಕಾಯಕಯೋಗಿ ಚಿದಾನಂದತಾತ ಚೂರನೂರು ಗ್ರಾಮದ ಚಂದ್ರಾವತಿ ನಾಗರಂಗಯ್ಯ ಶೆಟ್ಟಿ ಮತ್ತು ನವರತ್ನ ನೀಲಕಂಠಯ್ಯ ಶೆಟ್ಟಿ ಕುಟುಂಬ ದವರು 17ನೇ ತುಲಾಭಾರ ಸೇವೆ ನೆರವೇರಿಸಿದರು. ಸಿರಗುಪ್ಪ ಬಸವಭೂಷಣ ಸ್ವಾಮಿ, ಶ್ರೀ ವೀರಭದ್ರ ಶಿವಾಚಾರ್ಯರು, ವೀರೇಶಯ್ಯಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net