ಹಾಸನ: ರಾಸಾಯನಿಕ ಗೊಬ್ಬರ, ಕೀಟನಾಶಕ ಮತ್ತು ಕಳೆ ನಾಶಕಗಳ ಅತಿಯಾದ ಬಳಕೆಯಿಂದ ಭೂಮಿ ಫಲವತ್ತತೆ ಕಳೆದುಕೊಳ್ಳುತ್ತಿರುವುದರ ಜೊತೆಗೆ ಏರುತ್ತಿರುವ ಜನಸಂಖ್ಯೆಯಿಂದಾಗಿ ಭಾರತವು 2040 ರ ವೇಳೆಗೆ ಆಹಾರ ಕ್ಷಾಮ ಎದುರಿಸುವ ಸ್ಥಿತಿ ಬರಲಿದೆ ಎಂದು ಜಂಟಿ ಕೃಷಿ ನಿರ್ದೇಶಕ ಕೆ.ಎಚ್. ರವಿ ಎಚ್ಚರಿಸಿದರು.
ಹಸಿರು ಭೂಮಿ ಪ್ರತಿಷ್ಠಾನವು ಜಿಲ್ಲಾ ಪಂಚಾಯತ್ ಸಹಕಾರದೊಂದಿಗೆ ನಗರದ ಪಶು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ‘ಮಣ್ಣು ಉಳಿಸಿ ಅಭಿಯಾನ ಏಕೆ ಹೇಗೆ?’ ಎಂಬ ಒಂದು ದಿನದ ಕಾರ್ಯಾಗಾರದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ರಸಗೊಬ್ಬರ ಒಂದು ರೀತಿಯ ವ್ಯಸನದಂತಾಗಿದೆ. 1960ರ ದಶಕದಲ್ಲಿ ಭಾರತದ ಆಹಾರ ಸ್ವಾವಲಂಬನೆಗಾಗಿ ಹಸಿರು ಕ್ರಾಂತಿ ಮೂಲಕ ಆಹಾರ ಉತ್ಪಾದನೆಯಲ್ಲಿ ಸ್ಥಿರತೆ ಸಾಧಿಸಲಾಯಿತು. ನಂತರವಾದರೂ ಕೃಷಿಕರು ತಮ್ಮ ಜಮೀನುಗಳ ಆರೋಗ್ಯದ ಕಡೆ ಗಮನ ಹರಿಸಬೇಕಿತ್ತು ಎಂದರು.
ಕಳೆದ ಕೋವಿಡ್ ಸಮಯದಲ್ಲಿ ಕೃಷಿ ಕ್ಷೇತ್ರವನ್ನು ಹೊರತುಪಡಿಸಿ ಬೇರೆಲ್ಲ ಕ್ಷೇತ್ರಗಳೂ ತತ್ತರಿಸಿ ಹೋದವು. ಇದನ್ನು ಅರ್ಥ ಮಾಡಿಕೊಂಡು ಕೃಷಿ ಕ್ಷೇತ್ರದ ಉಳಿವಿಗೆ ಶ್ರಮಿಸಬೇಕು ಎಂದು ಹೇಳಿದರು.
ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾಂತರಾಜು ಅವರು, ಜನಸಂಖ್ಯೆ ವಿಪರೀತವಾಗಿ ಏರುತ್ತಿರುವ ಈ ಸಂದರ್ಭದಲ್ಲಿ ಕೃಷಿ ಜಮೀನಿನ ಮಣ್ಣಿನ ಆರೋಗ್ಯ ಕಾಪಾಡುವುದು ಅತೀ ಅಗತ್ಯ. ಮಣ್ಣಿನ ಆರೋಗ್ಯ ಕಾಪಾಡುವ ಕುರಿತು ನಿರಂತರ ಜನಾಂದೋಲನ ರೂಪುತಾಳಬೇಕು. ರೈತರು ತಮ್ಮ ಪರಂಪರೆಯಿಂದ ಬಂದ ಕೃಷಿ ಜ್ಞಾನ, ಕೃಷಿ ಸಂಸ್ಕೃತಿಯನ್ನು ಮರೆಯಬಾರದು. ರೈತ ಕುಟುಂಬಗಳು ತಮ್ಮ ಮಕ್ಕಳಿಗೆ ಸಹ ಕೃಷಿಯಲ್ಲಿ ಒಲವು ಮೂಡಿಸಿ, ಆಸಕ್ತಿ ಬೆಳೆಸಬೇಕಿದೆ ಎಂದು ಹೇಳಿದರು.
ಕಾರೆಕೆರೆ ಕೃಷಿ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ಚನ್ನಕೇಶವ ಅವರು, ರೈತರೇ ನಿಜವಾದ ವಿಜ್ಞಾನಿಗಳು. 70 ವರ್ಷಗಳ ಹಿಂದೆ ಮಣ್ಣಿನಲ್ಲಿ ಶೇ.1ಕ್ಕಿಂತ ಹೆಚ್ಚಿನ ಸಾವಯವ ಅಂಶಗಳಿದ್ದವು. ಈಗ ಅದು ಶೇ.0.3ಕ್ಕೆ ಕುಸಿದಿದೆ. ಮಣ್ಣಿನಲ್ಲಿ ತಮಗೆ ಬೇಕಾದ ಆಹಾರ ದೊರೆಯದೆ ಒಂದು ಬಿಲಿಯನ್ ಜೀವಿಗಳು ಸಾಯುತ್ತಿವೆ. ಶೇ.40ರಷ್ಟು ಭೂಮಿ ಪ್ರತಿವರ್ಷ ಮರಳು ಭೂಮಿಯಾಗುತ್ತಿದೆ. ಶೇ.10 ರಷ್ಟು ಕಾಡು ಪ್ರದೇಶ ನಾಶವಾಗಿ ಬೇರೆ ಉದ್ದೇಶಕ್ಕೆ ಬಳಕೆಯಾಗ್ತುತ್ತಿದೆ. ಮಣ್ಣಿನ ಒಳಗಿರುವ ಕೋಟ್ಯಾನುಕೋಟಿ ಜೀವರಾಶಿಗಳು ಭೂಮಿಯ ಮೇಲಿನ ಜೀವರಾಶಿಗಳಿಗೆ ಆಶ್ರಯ ನೀಡಿವೆ ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕು. ಒಂದು ಇಂಚಿನಷ್ಟು ಫಲವತ್ತಾದ ಮಣ್ಣಿನ ಪದರ ಸೃಷ್ಟಿಯಾಗಲು ಸಾವಿರಾರು ವರ್ಷಗಳು ಬೇಕಾಗುತ್ತದೆ. ಅದನ್ನು ಕಳೆನಾಶಕ ಬಳಸಿ ಕ್ಷಣದಲ್ಲಿ ನಾಶಮಾಡುವುದು ಸರಿಯಲ್ಲ ಎಂದು ಕಿವಿಮಾತು ಹೇಳಿದರು.
ಎಸ್‌ಡಿಎಂ ಆಯುರ್ವೇದ ಕಾಲೇಜಿನ ಡಾ. ಚೈತ್ರ ಅವರು ಜಗ್ಗಿ ವಾಸುದೇವ ಅವರ ಮಣ್ಣು ಉಳಿಸಿ ಅಭಿಯಾನ ಕುರಿತು ತಿಳಿಸಿದರು. ಪ್ರಯೋಗಶೀಲ ರೈತ ಡಾ. ವಿ.ಪಿ. ಹೆಗಡೆ, ಸಂತೆ ಶಿವರ ಬಸವರಾಜ್, ಹೆಮ್ಮಿಗೆ ಮೋಹನ್, ಅನುಗನಾಳು ಮಳಲಿಗೌಡ, ಜಲಶಕ್ತಿ ಅಭಿಯಾನ ಕೇಂದ್ರ ನೋಡಲ್ ಅಧಿಕಾರಿ ಡಾ. ಪುರುಷೋತ್ತಮ ವರ್ಮಾ, ವಿಜ್ಞಾನಿ ರಘಚಂದ್ರ ಗರಿಮೆಲ್ಲ, ಡಾ. ಪುನೀತ್, ನಬಾರ್ಡ ಸಹಾಯಕ ವ್ಯವಸ್ಥಾಪಕಿ ಮಾಲಿನಿ ಎಸ್ ಸುವರ್ಣ ಭಾಗವಹಿಸಿದ್ದರು. ಹಸಿರು ಭೂಮಿ ಪ್ರತಿಷ್ಠಾನದ ಆರ್.ಪಿ.ವೆಂಕಟೇಶ ಮೂರ್ತಿ ಅವರು ಕಾರ್ಯಾಗಾರದ ನಿರ್ಣಯಗಳನ್ನು ಮಂಡಿಸಿದರು.