ಕೆಎಂಸಿಆರ್​ಐನಲ್ಲಿ 2,039 ಹುದ್ದೆ ಖಾಲಿ

Kmcri
Published on

ಮರಿದೇವ ಹೂಗಾರ ಹುಬ್ಬಳ್ಳಿ

ಉತ್ತರ ಕರ್ನಾಟಕದ ಸಂಜೀವಿನಿಯಾದ ಇಲ್ಲಿಯ ಕರ್ನಾಟಕ ವೈದ್ಯಕೀಯ ಕಾಲೇಜ್ ಮತ್ತು ಸಂಶೋಧನಾ ಸಂಸ್ಥೆ (ಕೆಎಂಸಿಆರ್​ಐ)ಯಲ್ಲಿ ಬರೋಬ್ಬರಿ 2,039 ಹುದ್ದೆಗಳು ಖಾಲಿ ಇವೆ.

2400 ಬೆಡ್​ಗಳನ್ನು ಹೊಂದಿರುವ ಈ ಆಸ್ಪತ್ರೆಗೆ ವಿವಿಧ ವೃಂದದ ಹುದ್ದೆಗಳು ಸಮವರ್ತಿಯಾಗಿರಬೇಕು. ಆದರೆ, ಮಂಜೂರಾದ ಹುದ್ದೆ ಮತ್ತು ಕರ್ತವ್ಯ ನಿರ್ವಹಿಸುತ್ತಿರುವ ಹುದ್ದೆಗಳಿಗೆ ಹೋಲಿಸಿದರೆ ಶೇ. 50ಕ್ಕಿಂತ ಹೆಚ್ಚು ಹುದ್ದೆಗಳು ಖಾಲಿ ಇವೆ.

ಗ್ರುಪ್ ‘ಎ’ಯಿಂದ ‘ಡಿ’ವರೆಗೆ ಒಟ್ಟು 2,789 ಹುದ್ದೆಗಳು ಮಂಜೂರಾಗಿದ್ದು, 2,039 ಹುದ್ದೆಗಳು ಖಾಲಿ ಇವೆ. ಇದರಲ್ಲಿ ಗ್ರುಪ್ ಎ 225, ಗ್ರುಪ್ ಬಿ 30, ಗ್ರುಪ್ ಸಿ 912, ಗ್ರುಪ್ ಡಿ 872 ಹುದ್ದೆಗಳು ಖಾಲಿ ಇವೆ ಎಂಬ ಅಂಕಿ-ಅಂಶಗಳು ‘ವಿಜಯವಾಣಿ’ಗೆ ಲಭ್ಯವಾಗಿವೆ.

ಇದರ ಮಧ್ಯೆ ಕಂದಾಯ ಇಲಾಖೆ, ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯಡಿ ವಿವಿಧ ವೃಂದದ ನೌಕರರನ್ನು ನಿಯೋಜನೆ ಮಾಡಲಾಗಿದೆ. ಈ ಇಲಾಖೆಗಳಿಂದ ಒಟ್ಟು 92 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಇವರ ಹೊರತಾಗಿಯೂ ವಿವಿಧ ಏಜೆನ್ಸಿಗಳಿಂದ ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಕ ಮಾಡಲಾಗಿದೆ. ಅವುಗಳ ಸಂಖ್ಯೆ ಗ್ರುಪ್ ಎ 24, ಗ್ರುಪ್ ಸಿ 144 ಸೇರಿ ಒಟ್ಟು ಸಂಖ್ಯೆ 168 ಇದೆ. ಇಷ್ಟು ಸಂಖ್ಯೆಯಲ್ಲಿ ಸಿಬ್ಬಂದಿ ಇದ್ದರೂ ಮಂಜೂರಾದ ಹುದ್ದೆಗಳಿಗೂ ಮತ್ತು ಖಾಲಿ ಇರುವ ಹುದ್ದೆಗಳಿಗೂ ಬಹಳ ಅಂತರವಿದೆ. ಎನ್​ಎಂಸಿ ಪ್ರಕಾರ ಬೋಧಕ ಹುದ್ದೆಗಳನ್ನು 2021-22ನೇ ಸಾಲಿನಲ್ಲಿ ಭರ್ತಿ ಮಾಡಿರುವುದು ಬಿಟ್ಟರೆ ಈ ಪ್ರಕ್ರಿಯೆ ಇದುವರೆಗೂ ಮುಂದುವರಿದಿಲ್ಲ.

ಇಷ್ಟೆಲ್ಲ ಹುದ್ದೆಗಳು ಖಾಲಿ ಇರುವುದರಿಂದ ರೋಗಿಗಳ ನಿರ್ವಹಣೆ ಕಷ್ಟವಾಗುತ್ತಿದೆ. ಕೆಲ ಹಿರಿಯ ವೈದ್ಯರು ಸಿಗುವುದು ಕೂಡ ಅಪರೂಪವಾಗಿದೆ. ಕಿರಿಯ ವೈದ್ಯರು ಹಾಗೂ ಶುಶ್ರೂಷಾಧಿಕಾರಿಗಳ ಮೇಲೆ ರೋಗಿಗಳು ಅವಲಂಬಿತರಾಗುವುದು ಸಾಮಾನ್ಯವಾಗಿದೆ. ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ಇದ್ದರೂ ಸೇವೆ ಅಷ್ಟಕ್ಕಷ್ಟೆ ಎಂಬ ಆರೋಪವಿದೆ. ಆಡಳಿತ ವ್ಯವಸ್ಥೆ ಸುಗಮ ನಿರ್ವಹಣೆಯೂ ಕಷ್ಟವಾಗಿದೆ. ಈ ಸಮಸ್ಯೆ ಸರ್ಕಾರ ಹಾಗೂ ಜನಪ್ರತಿನಿಧಿಗಳ ಗಮನಕ್ಕೂ ಇದೆ. ಕಾಯಂ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಯಬೇಕಿದೆ.

ವಿವಿಧ ವೃಂದದ ಹುದ್ದೆಗಳು ಖಾಲಿ ಇರುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ, ನಮ್ಮ ಸಂಸ್ಥೆಯಲ್ಲಿ ರೋಗಿಗಳಿಗೆ ತೊಂದರೆಯಾಗದ ರೀತಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಕ ಮಾಡಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. ನೇಮಕಕ್ಕೆ ಸರ್ಕಾರದ ಅನುಮತಿಯನ್ನೂ ಪಡೆಯಲಾಗಿದೆ. ಡಾ.ಎಸ್.ಎಫ್. ಕಮ್ಮಾರ, ಕೆಎಂಸಿಆರ್​ಐ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net