

ನಾಗಮಂಗಲ: ಪ್ರತಿ ಮನೆ ಮನೆಗೆ ತೆರಳಿ ಎಚ್‌ಐವಿ ಕುರಿತು ಜಾಗೃತಿ ಮೂಡಿಸುವ ಮೂಲಕ 2030ರೊಳಗೆ ಎಚ್‌ಐವಿ ಮುಕ್ತ ಭಾರತ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದು ಜಿಲ್ಲಾ ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಡಾ.ಆಶಾಲತಾ ಹೇಳಿದರು.
ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ತಾಲೂಕು ಆರೋಗ್ಯ ಇಲಾಖೆ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಮನೆ ಮನೆಗೆ ಏಡ್ಸ್ ನಿಯಂತ್ರಣ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ತಾಲೂಕಿನಾದ್ಯಂತ ಪ್ರತಿ ಮನೆಗೆ ಆಶಾ ಕಾರ್ಯಕರ್ತೆಯರು ತೆರಳಿ ಮನೆಯ ಸದಸ್ಯರಿಗೆ ಎಚ್‌ಐವಿ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಎಚ್‌ಐವಿ ಮುಕ್ತ ಭಾರತದ ಗುರಿಗೆ ಸಹಕರಿಸಬೇಕಿದೆ. ಎಚ್‌ಐವಿ ಸೋಂಕನ್ನು ತಡೆಗಟ್ಟಲು ಅನುಸರಿಸಬೇಕಾದ ಕ್ರಮಗಳ ಕುರಿತಾಗಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ. ತಾಲೂಕಿನಲ್ಲಿರುವ 64,280 ಮನೆಗಳಿಗೂ ಆಶಾಕಾರ್ಯಕರ್ತೆಯರು ಭೇಟಿ ನೀಡಿ ಜನರಿಗೆ ಏಡ್ಸ್ ತಡೆಗಟ್ಟುವ ಕುರಿತು ಅರಿವು ಮೂಡಿಸಿ, ಅದರಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತಾಗಿ ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕಿನ ಆಶಾ ಕಾರ್ಯಕರ್ತೆಯರಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಏಡ್ಸ್ ನಿಯಂತ್ರಣ ಕ್ರಮಗಳ ಕುರಿತಾಗಿ ಜಾಗೃತಿ ಮೂಡಿಸಲಾಯಿತು. ಏಡ್ಸ್ ನಿಯಂತ್ರಣದ ಜಾಗೃತಿ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಯಿತು. ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಸನ್ನ, ಏಡ್ಸ್ ಜಿಲ್ಲಾ ಮೇಲ್ವಿಚಾರಕ ವಿನಾಯಕ್, ಆರೋಗ್ಯ ಇಲಾಖೆಯ ಸಿದ್ದಲಿಂಗಪ್ಪ, ಸತ್ಯಪ್ರಕಾಶ್, ಶೃತಿ, ಅವಿನಾಶ್, ಚಿಕ್ಕಸ್ವಾಮಿ ಇದ್ದರು.