2028ಕ್ಕೆ ಸಿಎಂ ಆಗುವ ಇಚ್ಛೆ ನನಗೂ ಇದೆ: ಸತೀಶ್ ಜಾರಕಿಹೊಳಿ

2028ಕ್ಕೆ ಸಿಎಂ ಆಗುವ ಇಚ್ಛೆ ನನಗೂ ಇದೆ: ಸತೀಶ್ ಜಾರಕಿಹೊಳಿ
Published on

ಹಾಸನ: ರಾಜ್ಯದಲ್ಲಿ ಮುಖ್ಯಮಂತ್ರಿಗಳ ಹುದ್ದೆ ಖಾಲಿ ಇಲ್ಲ ಹಾಗೂ ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ. ಮುಂದಿನ 2028ಕ್ಕೆ ನಾನು ಸಿಎಂ ಆಗುವ ಇಚ್ಛೆ ನನಗೂ ಇದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಕಳೆದ ಸಪ್ಟೆಂಬರ್‌ನಲ್ಲಿ ನಿಧನ ಹೊಂದಿದ ವಾಲ್ಮೀಕಿ ಸಮುದಾಯದ ಮುಖಂಡ ಮಹಾಂತಪ್ಪ ಅವರ ಮನೆಗೆ ಭೇಟಿ ನೀಡಿದ ಸಚಿವ ಜಾರಕಿಹೊಳಿ ಅವರ ಕುಟುಂಬದವರಿಗೆ ಸಾಂತ್ವನ ಹೇಳಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಬದಲಾವಣೆ ವಿಚಾರ ಪಕ್ಷದಲ್ಲಿ ನಡೆದಿಲ್ಲ. ಆದರೆ ಹೊರಗಡೆ ಮಾತನಾಡುತ್ತಿರಬಹುದು ಆದರೆ ಅವರನ್ನು ಬದಲಾಗುವ ಪ್ರಶ್ನೆ ಇಲ್ಲ ಎಂದು ಈಗಾಗಲೇ ಹೈಕಮಾಂಡ್ ತಿಳಿಸಿದೆ ಎಂದರು.
ಸಿದ್ದರಾಮಯ್ಯ ಬಳಿಕ ಸತೀಶ್ ಜಾರಕಿಹೊಳಿ ಸಿಎಂ ಆಗಲು ಸಮರ್ಥರು ಎಂಬ ಕಾಂಗ್ರೆಸ್ ಶಾಸಕ ತಮ್ಮಯ್ಯ ಹೇಳಿಕೆ ಸಂಬಂಧ ಪ್ರತಿಕ್ರಿಸಿದ ಸಚಿವರು, ಸಿದ್ದರಾಮಯ್ಯ ಅವಧಿ ಮುಗಿದ ಮೇಲೆ ಅವರ ಸಹಕಾರದಿಂದ ಸತೀಶ್ ಜಾರಕಿಹೊಳಿ ಸಿಎಂ ಆಗಬಹುದು ಎಂದು ಹೇಳಿರಬಹುದು. ಪ್ರಸ್ತುತ ಮುಖ್ಯಮಂತ್ರಿಗಳ ಬದಲಾವಣೆ ನಮ್ಮ ಪಕ್ಷದಲ್ಲಿ ಚರ್ಚೆ ನಡೆದಿಲ್ಲ ಎಂದು ಸಮರ್ಥಿಸಿಕೊಂಡರು.
ಲೋಕಾಯುಕ್ತದಿಂದ ಮುಡಾ ತನಿಖೆ ನಡೆಯುತ್ತಿದ್ದು, ಕೋರ್ಟ್ ಆದೇಶದಂತೆ ಯಾರ್ಯಾರಿಗೆ ನೋಟಿಸ್ ಕೊಡುತ್ತಾರೆ ಎಂಬುದನ್ನ ಕಾದು ನೋಡುತ್ತೇವೆ. ತನಿಖೆ ನಿಷ್ಪಕ್ಷಪಾತವಾಗಿ ನಡೆಯುತ್ತದೆ. ಇದರಲ್ಲಿ ಯಾವುದೇ ಹಸ್ತಕ್ಷೇಪ ಇರುವುದಿಲ್ಲ ಮತ್ತು ಇದರಿಂದ ಮುಖ್ಯಮಂತ್ರಿಗಳಿ ಯಾವುದೇ ಮುಜುಗರ ಆಗುವುದಿಲ್ಲ ಎಂದು ಹೇಳಿದರು.
ನಮ್ಮ ದೇಶದಲ್ಲಿ ಸಾಕಷ್ಟು ಮುಖ್ಯಮಂತ್ರಿಗಳ ಮೇಲೆ ತನಿಖೆ ನಡೆದಿರುವ ಉದಾಹರಣೆಗಳಿವೆ. ಅದರಲ್ಲಿ ಸಿದ್ದರಾಮಯ್ಯ ಅವರ ಮೇಲಿರುವಂತಹ ಪ್ರಕರಣವೂ ಕೂಡ ಒಂದು. ಅದೇ ರೀತಿ ಕೇಂದ್ರದ ಬಿಜೆಪಿ ಸರ್ಕಾರದ ಹಾಲಿ ಮಂತ್ರಿಗಳಾಗಿರುವಂತಹ ಸಾಕಷ್ಟು ಜನರ ಮೇಲೆ ಪ್ರಕರಣಗಳಿವೆ ಅವರು ರಾಜೀನಾಮೆ ಕೊಡುತ್ತಾರಾ? ಕೊಡುವುದಿಲ್ಲ ಅವರು ಮುಂದುವರೆಯುತ್ತಾರೆ. ಅದೇ ರೀತಿ ಮುಖ್ಯಮಂತ್ರಿಗಳು ಏಕೆ ಮುಂದುವರಿಯಬಾರದು ಎಂದು ಪ್ರಶ್ನಿಸಿದರು.
ಜಾತಿಗಣತಿ ವರದಿಗೆ ಕಾಂಗ್ರೆಸ್ ಪಕ್ಷದಲ್ಲಿ ಪರ ವಿರೋಧ ಚರ್ಚೆ ಇದ್ದೇ ಇರುತ್ತದೆ. ಅದು ಪ್ರಶ್ನೆಯಲ್ಲ ಆದರೆ ವರದಿ ಇನ್ನೂ ಚರ್ಚೆಗೆ ಬಂದಿಲ್ಲ, ಬಂದ ಮೇಲೆ ನೋಡೋಣ, ಚರ್ಚೆ ಆದಮೇಲೆ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಆದರೆ, ವರದಿಯಲ್ಲಿ ಯಾವ ರಿಪೋರ್ಟ್ ಇದೆ ಎಂಬುದನ್ನ ಯಾರು ನೋಡಿಲ್ಲ ಎಂದರು.
ವಾಲ್ಮೀಕಿ ಹಗರಣದಲ್ಲಿ ಎಐಟಿ ಚಾರ್ಜ್ ಶೀಟ್ ಸಲ್ಲಿಸಿದೆ. ಅದರಲ್ಲಿ ಸರ್ಕಾರಕ್ಕೆ ಮುಜುಗರ ಆಗುವಂಥದ್ದು ಯಾವುದು ಇಲ್ಲ ಎಂದು ಹೇಳಿದ ಅವರು. ಕೋಳಿವಾಡ ಅವರ ಹೇಳಿಕೆ ವಿಚಾರವಾಗಿ ಅದು ಅವರ ವೈಯಕ್ತಿಕ ವಿಚಾರ, ಆದರೆ ನಮ್ಮ ಪಕ್ಷದಲ್ಲಿ ಸಿದ್ದರಾಮಯ್ಯ ಅವರೇ ಮುಂದುವರಿಯಬೇಕು ಎಂದು ನಾವೆಲ್ಲರೂ ಕೂಡ ಹೇಳುತ್ತಿದ್ದೇವೆ ಎಂದು ಹೇಳಿದರು.
ಒಳ ಮೀಸಲಾತಿ ವಿಚಾರವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಆದಷ್ಟು ಬೇಗ ಒಂದು ತೀರ್ಮಾನಕ್ಕೆ ಬರಬೇಕು. ಚುನಾವಣೆ ಸಂದರ್ಭದಲ್ಲಿ ನಮ್ಮ ಪ್ರಣಾಳಿಕೆಯಲ್ಲಿ ಹೇಳಿದಂತೆ ನಮ್ಮ ಮೇಲೆ ಜವಾಬ್ದಾರಿ ಇದೆ. ಆದಷ್ಟು ಬೇಗ ಅದರ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳುತ್ತದೆ. ಅದೇ ರೀತಿ ಪಿಡಿಓಗಳು ಕೂಡ ಪ್ರತಿಭಟನೆ ನಡೆಸುತ್ತಿದ್ದು ಅದನ್ನು ಕೂಡ ಬಗೆಹರಿಸಲಿದೆ ಎಂದು ಹೇಳಿದರು.

ಶಿರಾಡಿ ರಸ್ತೆ ಶೀಘ್ರದಲ್ಲೇ ದುರಸ್ತಿ:
ಶಿರಡಿಘಾಟ್ ರಸ್ತೆ ಕಾಮಗಾರಿ ಹಲವು ವರ್ಷಗಳಿಂದ ನಡೆಯುತ್ತಿದೆ.ಈ ಬಾರಿ ಮಳೆಗಾಲದಲ್ಲಿ ಸಾಕಷ್ಟು ಹಾನಿ ಉಂಟಾಗಿದ್ದು, ಶೀಘ್ರದಲ್ಲಿ ದುರಸ್ತಿ ಕಾರ್ಯವನ್ನು ಮಾಡಲಾಗುವುದು ಎಂದು ಸಚಿವ ಜಾರಕಿಹೊಳಿ ಹೇಳಿದರು.
ಕಳೆದ ವರ್ಷ ಮಳೆಯಾದ ಸಂದರ್ಭದಲ್ಲಿ ಭೇಟಿ ನೀಡಿದ್ದೇ, ಮತ್ತೆ ಬಂದು ಪರಿಶೀಲನೆ ನಡೆಸುತ್ತೇನೆ. ರಾಜ್ಯದಲ್ಲಿ ಅತಿ ಹೆಚ್ಚು ಮಳೆಯಿಂದ ಹಲವು ರಸ್ತೆಗಳು ಹಾಳಾಗಿವೆ. ನಾಲ್ಕೈದು ವರ್ಷಗಳಿಂದ ಇಷ್ಟು ಮಳೆಯಾಗಿಲ್ಲ, ಈಗಾಗಲೇ ಕೆಲಸ ಆರಂಭಿಸಿದ್ದೇವೆ. ಗುಂಡಿ ಮುಚ್ಚುವುದು, ಅಗತ್ಯವಿದ್ದಲ್ಲಿ ಹೊಸ ರಸ್ತೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net