

ಬೀದರ್: 2025 ರೊಳಗೆ ಕ್ಷಯರೋಗ ಮುಕ್ತ ಭಾರತ ಮಾಡುವ ನಿಟ್ಟಿನಲ್ಲಿ ಸರ್ಕಾರ ನಾನಾ ಕಾರ್ಯಕ್ರಮ ಹಾಕಿಕೊಂಡಿದೆ. ಇದಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಜಿಪಂ ಸಿಇಒ ಗ್ಯಾನೇಂದ್ರಕುಮಾರ ಗಂಗವಾರ ಹೇಳಿದರು.
ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ನಿಮಿತ್ತ ಸೋಮವಾರ ಜಿಪಂನಲ್ಲಿ ಏರ್ಪಡಿಸಿದ ಜಿಲ್ಲಾ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿ, ಜಿಲ್ಲಾದ್ಯಂತ ಡಿ.31ರವರೆಗೆ ಕ್ಷಯರೋಗ ಪತ್ತೆ ಆಂದೊಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮನೆಗಳಿಗೆ ಸಮೀಕ್ಷೆಗೆ ಬರುವ ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ಸ್ವಯಂ ಸೇವಕರಿಗೆ ಸಹಕರಿಸಬೇಕೆಂದು ಕೋರಿದರು.
ಆರಂಭಿಕ ಹಂತದಲ್ಲಿ ಕ್ಷಯ ಪತ್ತೆ ಹಚ್ಚಿದರೆ ಚಿಕಿತ್ಸೆಯಿಂದ ಸಂಪೂರ್ಣ ಗುಣಮುಖರಾಗಬಹುದು. ಸತತ ಎರಡು ವಾರ ಕೆಮ್ಮು, ಸಂಜೆ ವೇಳೆ ಜ್ವರ, ಕಫದಲ್ಲಿ ರಕ್ತ ಬೀಳುವುದು, ರಾತ್ರಿ ಬೆವರುವುದು, ಎದೆ ನೋವು, ತೂಕ ಕಡಿಮೆ, ಹಸಿವಾಗದೆ ಇರುವುದು ಈ ರೋಗ ಲಕ್ಷಣಗಳು. ಈ ಲಕ್ಷಣ ಕಂಡುಬಂದಲ್ಲಿ ಉಚಿತ ಚಿಕಿತ್ಸೆ ನೀಡಲಾಗುವುದು. ಪ್ರತಿ ಕ್ಷಯ ರೋಗಿಗಳಿಗೆ ಚಿಕಿತ್ಸಾ ಅವಧಿಯವರೆಗೆ ಮಾಸಿಕ 500 ರೂ.ಗಳನ್ನು ಪೌಷ್ಠಿಕ ಆಹಾರಕ್ಕಾಗಿ ನೀಡಲಾಗುತ್ತದೆ. ಖಾಸಗಿ ವೈದ್ಯರಿಗೆ ಕ್ಷಯರೋಗದ ಮಾಹಿತಿ ಮತ್ತು ಚಿಕಿತ್ಸೆ ನೀಡಿದಲ್ಲಿ 1000 ರೂ. ನೀಡಲಾಗುತ್ತದೆ ಎಂದರು.
ಜಿಲ್ಲಾ ಕ್ಷಯರೋಗ ಅಧಿಕಾರಿ ಡಾ.ದೀಪಾ ಖಂಡ್ರೆ ಮಾತನಾಡಿ, ಜಿಲ್ಲಾದ್ಯಂತ 3,85,816 ಜನರಿಗೆ ಭೇಟಿ ನೀಡಿ ಕ್ಷಯ ರೋಗವನ್ನು ಪತ್ತೆ ಹಚ್ಚುವ ಗುರಿ ಹೊಂದಲಾಗಿದೆ. ಕ್ಷಯರೋಗ ಪತ್ತೆಗಾಗಿ 718 ತಂಡಗಳು ರಚಿಸಲಾಗಿದೆ. 1436 ಆಶಾ ಕಾರ್ಯಕರ್ತೆಯರು, 535 ಆರೋಗ್ಯ ಸಿಬ್ಬಂದಿ, 143 ಸ್ವಯಂ ಸೇವಕರು ಕೆಲಸ ಮಾಡಲಿದ್ದಾರೆ ಎಂದರು.
ಡಿಎಚ್ಒ ಡಾ.ವಿ.ಜಿ. ರೆಡ್ಡಿ ಸೇರಿದಂತೆ ಎಲ್ಲ ಕಾರ್ಯಕ್ರಮ ಅಧಿಕಾರಿಗಳು, ತಾಲೂಕ ಆರೋಗ್ಯ ಅಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.