

ಚಿಕ್ಕಬಳ್ಳಾಪುರ: ಕ್ಷಯ ರೋಗದ ನಿಯಂತ್ರಣಕ್ಕಾಗಿ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಇದಕ್ಕಾಗಿ ಜಾಥಾ, ಭಿತ್ತಿಪತ್ರ ಪ್ರದರ್ಶನ, ಕರಪತ್ರಗಳ ಹಂಚಿಕೆ ಸೇರಿ ಹಲವು ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ. 2025ರ ವೇಳೆಗೆ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಕ್ಷಯಮುಕ್ತಗೊಳಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ಹೇಳಿದರು.
ಜಿಲ್ಲಾಸ್ಪತ್ರೆ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯ ರೋಗ ನಿರ್ಮೂಲನಾ ಘಟಕ, ಜಿಲ್ಲಾ ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕ, ಸ್ವಯಂಸೇವಾ ಸಂಘ-ಸಂಸ್ಥೆಗಳು ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ ಗುರುವಾರ ಏರ್ಪಡಿಸಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಸೋಂಕಿತರು ಸಕಾಲದಲ್ಲಿ ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆದರೆ ಕಾಯಿಲೆ ಸಂಪೂರ್ಣವಾಗಿ ಗುಣವಾಗುತ್ತದೆ. ದೀರ್ಘಾವಧಿಯಿಂದ ಕೆಮ್ಮು, ಜ್ವರ, ಎದೆನೋವು, ತೂಕ ಕಡಿಮೆಯಾಗುವಿಕೆ, ಕಫದಲ್ಲಿ ರಕ್ತ ಬೀಳುವಿಕೆಯ ಸೇರಿ ಇತರ ರೋಗಗಳಿಂದ ಬಳಲುತ್ತಿರುವ ವ್ಯಕ್ತಿಗಳು ಕಡ್ಡಾಯವಾಗಿ ಕ್ಷಯ ಪರೀಕ್ಷೆಗೆ ಒಳಗಾಗಬೇಕು. ಸೋಂಕು ದೃಢಪಟ್ಟಲ್ಲಿ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ಹಾಗೂ ಔಷಧ ಕೊಡಲಾಗುತ್ತಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಇಂದಿರಾ ಆರ್.ಕಬಾಡೆ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ರುದ್ರಮೂರ್ತಿ, ಡಿವೈಎಸ್‌ಪಿ ವಾಸುದೇವ್ ಮತ್ತಿತರರು ಇದ್ದರು.
ಸಾರ್ವಜನಿಕರಿಗೆ ಕರಪತ್ರ ಹಂಚಿಕೆ: ಜಾಗೃತಿ ಜಾಥಾದಲ್ಲಿ ಆರೋಗ್ಯ ಇಲಾಖೆಯ ಕಾರ್ಯಕರ್ತರು ಹಾಗೂ ಆಶಾ ಕಾರ್ಯಕರ್ತೆಯರು ಕ್ಷಯ ರೋಗ ನಿರ್ಮೂಲನೆಗೆ ತೊಡಗಿಸಿ ಜೀವ ಉಳಿಸಿ ಸೇರಿ ಹಲವು ಸಂದೇಶಗಳು ಇದ್ದ ಭಿತ್ತಿಪತ್ರ ಪ್ರದರ್ಶಿಸಿದರು. ನಗರದ ಜಿಲ್ಲಾಸ್ಪತ್ರೆಯಿಂದ ಅಂಬೇಡ್ಕರ್ ವೃತ್ತದ ರಸ್ತೆಯ ಮೂಲಕ ಸರ್ಕಾರಿ ಪದವಿಪೂರ್ವ ಕಾಲೇಜಿನವರೆಗೆ ಜಾಥಾ ಸಾಗಿತು. ಜಿಲ್ಲಾಸ್ಪತ್ರೆ ಆವರಣದಲ್ಲಿ ಆರೋಗ್ಯ ಇಲಾಖೆಯು ಕ್ಷಯರೋಗ ನಿರ್ಮೂಲನೆ ಜಾಗೃತಿಯ ಸ್ಟಾಲ್ ತೆರೆಯಲಾಗಿತ್ತು.