

ಯಾದಗಿರಿ: ದೇಶದ ಸಂಸ್ಕೃತಿ, ಇತಿಹಾಸ ಹಾಗೂ ಪೂರ್ವಜರು ಕಾಪಾಡಿಕೊಂಡು ಬಂದ ಮೌಲ್ಯಗಳನ್ನು ನಮ್ಮ ಮುಂದಿನ ಯುವ ಪೀಳಿಗೆಗೆ ತಿಳಿಸುವುದು ಇಂದಿನ ದಿನಗಳಲ್ಲಿ ಅತ್ಯವಶ್ಯವಾಗಿದೆ ಎಂದು ರಾಜ್ಯಸಭಾ ಮಾಜಿ ಸದಸ್ಯ ಹಾಗೂ ವಿಕಾಸ ಆಕಾಡೆಮಿ ಸಂಚಾಲಕ ಡಾ.ಬಸವರಾಜ ಪಾಟೀಲ್ ಸೇಡಂ ತಿಳಿಸಿದರು.
ಬುಧವಾರ ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಆಯೋಜಿಸಿದ್ದ ವಿಕಾಸ ಆಕಾಡೆಮಿ ಸರ್ವ ಹಿತೈಷಿಗಳ ಸಭೆಯಲ್ಲಿ ಮಾತನಾಡಿ, 2025 ರಲ್ಲಿ ಸೇಡಂ ಪಟ್ಟಣದಲ್ಲಿ ನಡೆಯಲಿರುವ ಸ್ವರ್ಣ ಜಯಂತಿ ಉತ್ಸವ ಕಾರ್ಯಕ್ರಮ ದೇಶದಲ್ಲಿ ಕುಂಭಮೇಳ ಬಿಟ್ಟರೇ, ಎರಡನೇ ಅತೀದೊಡ್ಡ ಸಮಾರಂಭವಾಗಲಿದೆ. ಇದಕ್ಕಾಗಿ ಕಳೆದ ಮೂರು ವರ್ಷಗಳಿಂದ ಕಾರ್ಯಕ್ರಮ ನಡೆಯುವ ಸ್ಥಳದ ಸುತ್ತಮುತ್ತಲಿನ 15 ಗ್ರಾಮಗಳಲ್ಲಿ ರೂಪುರೇಷೆಗಳ ಸಿದ್ಧತೆ ನಡೆಸಲಾಗುತ್ತಿದೆ ಎಂದರು.
ಕೊತ್ತಲ ಬಸವೇಶ್ವರರ ಭಾರತೀಯ ಶಿಕ್ಷಣ ಸಮಿತಿಯ 50ನೇ ವರ್ಷಾಚರಣೆ ಸಹ ಅದೇ ಸಮಾರಂಭದಲ್ಲಿ ಆಯೋಜಿಸಲಾಗಿದೆ. ಸಂಸ್ಥೆಯಲ್ಲಿ ಕಲಿತ 15 ಸಾವಿರ ವಿದ್ಯಾರ್ಥಿಗಳು ದೇಶದ ವಿವಿಧ ಕ್ಷೇತ್ರಗಳಲ್ಲಿ ದೊಡ್ಡ ದೊಡ್ಡ ಹುದ್ದೆಯಲ್ಲಿದ್ದಾರೆ. ಈ ಸಮಾರಂಭದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಹಾರಕೂಡ ಪೂಜ್ಯರು ಮಾರ್ಗದರ್ಶನ ಮಾಡಲಿದ್ದಾರೆ. ಸ್ವರ್ಣ ಜಯಂತಿಯ ಕಾರ್ಯಕ್ರಮದ ಕಲ್ಯಾಣ ಕರ್ನಾಟಕ ಭಾಗದ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಕೊಪ್ಪಳ ಗವಿ ಮಠದ ಶ್ರೀ ಗವಿ ಸಿದ್ದೇಶ್ವರ ಸ್ವಾಮಿಗಳು ಸಲಹೆ ನೀಡುತ್ತಿದ್ದಾರೆ. ಅದರಂತೆ ರಾಷ್ಟ್ರ ಮಟ್ಟದ ಸ್ವಾಗತ ಸಮಿತಿಗೆ ನೇತೃತ್ವವನ್ನು ಸುತ್ತೂರು ಮಠದ ಜಗದ್ಗುರುಗಳು ವಹಿಸಿದ್ದು, ಯಾದಗಿರಿ ಆರ್ಯಭಟ್ಟ ಇಂಟರ್ನ್ಯಾಷನಲ್ ಅಕಾಡೆಮಿ ಸಂಸ್ಥಾಪಕ ಸುಧಾಕರರಡ್ಡಿ ಪಾಟೀಲ್ ಅನಪುರ ಅಧ್ಯಕ್ಷರಾಗಿದ್ದಾರೆ. ಇಡೀ ಕಾರ್ಯಕ್ರಮದ ಯಶಸ್ವಿಗೆ 10 ತಂಡಗಳನ್ನು ರಚನೆ ಮಾಡಲಾಗಿದೆ ಎಂದು ಹೇಳಿದರು.
ಅಕಾಡೆಮಿ ಜಿಲ್ಲಾ ಸಂಚಾಲಕ ನೀಲಕಂಠರಾಯ ಯಲ್ಹೇರಿ ಪ್ರಾಸ್ತಾವಿಕ ಮಾತನಾಡಿ, ಈ ಕಾರ್ಯಕ್ರಮ ಯಶಸ್ವಿಗೆ ಜಿಲ್ಲೆಯ ಜನತೆ ಸಹಕರಿಸಬೇಕು. ಅಲ್ಲದೆ, ಇದೊಂದು ಸುವರ್ಣ ಅವಕಾಶ ಎಂದು ಭಾವಿಸಿ, ಮನೆ ಮಂದಿಯೆಲ್ಲ ಪಾಲ್ಗೊಳ್ಳಬೇಕು. ಇತರರಿಗೂ ಕಾರ್ಯಕ್ರಮದ ಬಗ್ಗೆ ಮಾಹಿತಿ ಕೊಡಬೇಕು ಎಂದು ಮನವಿ ಮಾಡಿದರು.