

ದೇವದುರ್ಗ: 2025ರ ವೇಳೆಗೆ ಕ್ಷಯರೋಗ ನಿರ್ಮೂಲನೆ ಮಾಡುವ ಗುರಿಯಿದೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ಬನದೇಶ್ವರ ತಿಳಿಸಿದರು.
ಪಟ್ಟಣದ ರಾಷ್ಟ್ರಪತಿ ಓಣಿಯಲ್ಲಿ ಆರೋಗ್ಯ ಇಲಾಖೆ ಗುರುವಾರ ಆಯೋಜಿಸಿದ್ದ ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು. ಉದ್ದೇಶಿತ ಗುರಿ ಈಡೇರಿಸಲು ಆರೋಗ್ಯ ಸಹಾಯಕರು ಮತ್ತು ಆಶಾ ಕಾರ್ಯಕರ್ತೆಯರು ತಪ್ಪದೆ ಮನೆಮನೆ ಭೇಟಿ ನೀಡಿ ಕ್ಷಯರೋಗ ಕುರಿತು ಅರಿವು ಮೂಡಿಸಬೇಕು ಎಂದರು.
ಕ್ಷಯವೊಂದು ಅಂಟು ರೋಗ. ಕಾಯಿಲೆ ತಗುಲಿದವರು ಕೆಮ್ಮುವಾಗ, ಸೀನುವಾಗ ಬಾಯಿಗೆ ಬಟ್ಟೆ ಹಿಡಿಯಬೇಕು. ನಿರ್ಲಕ್ಷ್ಯ ಮಾಡಬಾರದು. ನಿಮ್ಮ ನಿಮ್ಮ ಪ್ರದೇಶಗಳ ಜನರಲ್ಲಿ ಕ್ಷಯದ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕಳಿಸಿ, ಕಫ ಪರೀಕ್ಷೆ ಮಾಡಿಸಿಕೊಳ್ಳುವಂತೆ ನೋಡಿಕೊಳ್ಳಬೇಕು ಎಂದರು.
ಜಿಲ್ಲಾ ಕ್ಷಯರೋಗ ಹಿರಿಯ ಮೇಲ್ವಿಚಾರಕ ಚಸ್ಮುದ್ದೀನ್ ಮಾತನಾಡಿ, 2ವಾರಕ್ಕಿಂತ ಹೆಚ್ಚು ಕೆಮ್ಮು, ರಾತ್ರಿ ಜ್ವರ ಬರುವುದು, ಹಸಿವಾಗದಿರುವುದು, ತೂಕ ಕಡಿಮೆಯಾಗುವುದು, ಕಫದಲ್ಲಿ ರಕ್ತ ಕಾಣಿಸುವುದು ಸೇರಿ ಮತ್ತಿತರ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರ ಸಲಹೆ ಪಡೆಯಬೇಕು. ಇಂಥ ಲಕ್ಷಣಗಳು ಕಂಡುಬಂದರೆ ಆರೋಗ್ಯ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮಾಹಿತಿ ಪಡೆಯಬೇಕು ಎಂದರು.
ತಾಲೂಕು ಕ್ಷಯರೋಗ ಮೇಲ್ವಿಚಾರಕ ರವಿಶಂಕರ ಶುಕ್ಲಾ ಮಾತನಾಡಿದರು. ಕಿರಿಯ ಆರೋಗ್ಯ ಸಹಾಯಕಿ ನೇತ್ರಾ, ಆಶಾ ಕಾರ್ಯಕರ್ತೆಯರಾದ ದೀಪಿಕಾ, ರೆಹೆಮುನ್ನೀಸ್, ಸುಜಾತಾ ಇತರರಿದ್ದರು.