2024|KRISHI MELA: ಡಿ.7 ರಿಂದ ಮೂರು ದಿನ ಕೃಷಿ ಮೇಳ: ಒಂದೇ ಸೂರಿನಡಿ ರೈತರಿಗೆ ಕೃಷಿಯ ಸಂಪೂರ್ಣ ಮಾಹಿತಿ

IMG-20241205-WA0004
Published on

ರಾಯಚೂರು: ಹವಾಮಾನ ವೈಪರೀತ್ಯಕ್ಕೆ ಸುಸ್ಥಿತ ಕೃಷಿ ಎಂಬ ಘೊಷ ವಾಕ್ಯದೊಂದಿಗೆ ಡಿ.7, 8 ಹಾಗೂ 9ರಂದು ನಗರದ ಕೃಷಿ ವಿವಿಯ ಆವರಣದಲ್ಲಿ ಕೃಷಿ ಮೇಳವನ್ನು ಆಯೋಜಿಸಲಾಗಿದೆ ಎಂದು ವಿವಿ ಕುಲಪತಿ ಡಾ.ಎಂ.ಹನುಮಂತಪ್ಪ ಹೇಳಿದರು.

ನಗರದ ಕೃಷಿ ವಿವಿಯ ಅಂತರಾಷ್ಟ್ರೀಯ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಒಂದೇ ಸೂರಿನಡಿ ರೈತರಿಗೆ ವಿವಿಧ ಕೃಷಿ ಹಾಗೂ ಕೃಷಿ ಚಟುವಟಿಕೆಗಳಲ್ಲಿ ಬಳಸಬಹುದಾದ ತಂತ್ರಜ್ಞಾನ ಹಾಗೂ ಆವಿಷ್ಕಾರದ ಕುರಿತು ಸಂಪೂರ್ಣ ಮಾಹಿತಿ ನೀಡುವ ನಿಟ್ಟಿನಲ್ಲಿ ಕೃಷಿ ಮೇಳವನ್ನು ನಡೆಸಲಾಗುತ್ತದೆ ಎಂದು ತಿಳಿಸಿದರು.

ರೈತರು ತಮ್ಮ ಜಮೀನುಗಳಲ್ಲಿ ಕೃಷಿ ತಂತ್ರಜ್ಞಾನಗಳನ್ನು ಅಳವಡಿಸುವ ಕುರಿತು ಪ್ರಾತ್ಯಕ್ಷತೆಯನ್ನೂ ಕೂಡ ಮೇಳದಲ್ಲಿ ನೀಡಲಾಗುತ್ತದೆ. ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳು, ಭಾರತ ಕೃಷಿ ಅನುಸಂಧಾನ ಪರಿಷತ್ತು, ನಬಾರ್ಡ್, ಕೆಕೆಆರ್‌ಡಿಬಿ, ಕರ್ನಾಟಕ ಪ್ರದೇಶ ಕೃಷಿಕ ಸಮಾಜ, ಕೃಷಿ ಪರಿಕರಗಳ ಮಾರಾಟ ಸಂಘಗಳು ಹಾಗೂ ವಿವಿಧ ಸರ್ಕಾರೇತರ ಸಂಸ್ಥೆಗಳ ಸಹಯೋಗದಲ್ಲಿ ಮೇಳವನ್ನು ಆಯೋಜಿಸಲಾಗಿದೆ ಎಂದರು.

ಮತ್ಸೃಮೇಳ, ಕೃಷಿ ಯಂತ್ರೋಪಕರಣಗಳ ಮಳಿಗೆಗಳು, ವಿವಿಧ ಇಲಾಖೆಯಿಂದ ಸರ್ಕಾರದ ಯೋಜನೆಗಳ ಮಾಹಿತಿ ಮಳಿಗೆಗಳು, ಜಾನುವಾರು ಪ್ರದರ್ಶನ, ಸ್ವಸಹಾಯ ಗುಂಪುಗಳ ಮಳಿಗೆಗಳು ಸೇರಿದಂತೆ ಒಟ್ಟು 200 ಮಳಿಗೆಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

ಮೊದಲ ದಿನವಾದ ಡಿ.7ರಂದು ಕಪ್ಪತಗುಡ್ಡದ ನಂದಿವೇರಿ ಸಂಸ್ಥಾನ ಮಠದ ಶಿವಕುಮಾರ ಸ್ವಾಮೀಜಿ ಅವರು ಗೋಪೂಜೆ ನೆರವೇರಿಸುವ ಮೂಲಕ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ನಂತರ ಡಿ.8ರಂದು ಕೃಷಿ ಮೇಳದ ಉದ್ಘಾಟನೆಯನ್ನು ವೈದ್ಯ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ನೆರವೇರಿಸಲಿದ್ದಾರೆ ಎಂದು ಹೇಳಿದರು.

ವಸ್ತು ಪ್ರದರ್ಶನವನ್ನು ಕೃಷಿ ಸಚಿವ ಹಾಗೂ ವಿವಿಯ ಸಹ ಕುಲಾಧಿಪತಿ ಎನ್.ಚಲುವರಾಯಸ್ವಾಮಿ ಉದ್ಘಾಟಿಸಲಿದ್ದು, ಜಾನುವಾರು ಪ್ರದರ್ಶನವನ್ನು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಉದ್ಘಾಟನೆ ಮಾಡಲಿದ್ದಾರೆ. ಪುಸ್ತಕ, ತಾಂತ್ರಿಕ ಕೈಪಿಡಿಗಳನ್ನು ಸಣ್ಣ ಕೈಗಾರಿಕೆ, ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪ ದರ್ಶನಾಪುರ ಬಿಡುಗಡೆಗೊಳಿಸಲಿದ್ದಾರೆ ಎಂದರು.

ಕೃಷಿ ಯಂತ್ರೋಪಕರಣಗಳ ಮಳಿಗೆಗಳ ಉದ್ಘಾಟನೆಯನ್ನು ಪಂಚಾಯತ್ ರಾಜ್ ವಿದ್ಯುನ್ಮಾನ ಮಾಹಿತಿ, ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆ ನೆರವೇರಿಸಲಿದ್ದು, ಕೃಷಿ ತಾಂತ್ರಿಕ ಕ್ಯೂ.ಆರ್ ಕೋಡನ್ನು ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಲೋಕಾರ್ಪಣೆಗೊಳಿಸಲಿದ್ದಾರೆ. ಅಧ್ಯಕ್ಷತೆಯನ್ನು ನಗರ ಶಾಸಕ ಡಾ.ಶಿವರಾಜ ಪಾಟೀಲ್ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಚಿವರಾದ ಶಿವರಾಜ ತಂಗಡಗಿ, ಜಮೀರ್ ಅಹ್ಮದ್ ಖಾನ್, ರಹೀಂ ಖಾನ್ ಸೇರಿದಂತೆ ಜಿಲ್ಲೆಯ ಶಾಸಕರು, ಎಂಎಲ್ಸಿಗಳು, ಸಂಸದರು ಸೇರಿದಂತೆ ಇತರ ಗಣ್ಯರಯ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿವಿಯ ಸಂಶೋಧನಾ ನಿರ್ದೇಶಕ ಡಾ.ಬಿ.ಕೆ.ದೇಸಾಯಿ, ವಿಸ್ತರಣಾ ನಿರ್ದೇಶಕ ಡಾ.ಎನ್.ಶಿವಶಂಕರ, ಸ್ನಾತಕೋತ್ತರ ವಿಭಾಗದ ಡೀನ್ ಡಾ.ಗುರುರಾಜ ಸುಂಕದ, ಸಹ ಸಂಶೋಧನಾ ನಿರ್ದೇಶಕ ಡಾ.ಅಮರೇಗೌಡ, ಸಹ ವಿಸ್ತರಣಾ ನಿರ್ದೇಶಕ ಡಾ.ಎ.ಆರ್ ಕುರುಬರ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net