2023 ಹಿನ್ನೋಟ: ಮೈಸೂರಿನಲ್ಲಿ ರಾಜಕೀಯದಲ್ಲಿ ಏರಿಳಿತ

mysore
Published on

ಮಂಜುನಾಥ ತಿಮ್ಮಯ್ಯ ಮೈಸೂರು

ವಿದಾಯ ಹೇಳುತ್ತಿರುವ 2024ರ ವರುಷದಲ್ಲಿ ಮೈಸೂರು ಜಿಲ್ಲೆಯಲ್ಲಿ ಅನೇಕ ಏರಿಳಿತಗಳು ಘಟಿಸಿವೆ. ರಾಜಕೀಯ, ಶೈಕ್ಷಣಿಕ ಕ್ಷೇತ್ರದಲ್ಲೂ ಇದು ಸಂಭವಿಸಿವೆ.

ಮೈಸೂರು-ಕೊಡಗು ಲೋಕಸಭಾ ಚುನಾವಣೆಯಲ್ಲಿ ಸತತ 3ನೇ ಬಾರಿಗೂ ಕಮಲ ಅರಳಿತು. ಏಪ್ರಿಲ್ 26ರಂದು ನಡೆದ ಚುನಾವಣೆಯಲ್ಲಿ ಮೊದಲ ಪ್ರಯತ್ನದಲ್ಲೇ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಜಯ ಸಾಧಿಸಿ ಸಂಸತ್ ಪ್ರವೇಶಿಸಿದರು.

ಸತತ ಸೋಲಿನ ಕುಣಿಕೆಯಿಂದ ಕಂಗೆಟ್ಟಿದ್ದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಮತ್ತೆ ಸೋತರು. ಆಡಳಿತ ವಿರೋಧಿ ಅಲೆಯಲ್ಲಿ ಸಿಲುಕಿಕೊಂಡಿದ್ದ 2 ಬಾರಿ ಸಂಸದರಾಗಿದ್ದ ಪ್ರತಾಪ್ ಸಿಂಹಗೆ ಟಿಕೆಟ್ ತಪ್ಪಿಸಿದ ಬಿಜೆಪಿಯ ‘ಹೊಸಮುಖ’ದ ಪ್ರಯೋಗಕ್ಕೆ ಕೈಹಿಡಿಯಿತು. ಟಿಕೆಟ್ ತಪ್ಪಿಸಿಕೊಂಡ ಪ್ರತಾಪ್ ಸಿಂಹ ರಾಜಕೀಯವಾಗಿ ತೆರೆಮರೆಗೆ ಸರಿದುಕೊಂಡರು.

ಬಿಜೆಪಿಯ ಸಾಂಘಿಕ ಬಲ ಮತ್ತು ಮೈತ್ರಿ ಕೂಟದ ಜತೆಗಾರ ಜೆಡಿಎಸ್ ಬೆಂಬಲದಿಂದ ಯದುವೀರ್ ಅವರು ಬರೋಬ್ಬರಿ 1,39, 262 ಮತಗಳ ಅಂತರದಲ್ಲಿ ಜಯ ಸಾಧಿಸಿದರು.

ಶಿಕ್ಷಕರ ಕ್ಷೇತ್ರದಲ್ಲಿ ಮರಿತಿಬ್ಬೇಗೌಡಗೆ ಸೋಲು:

ಮೈಸೂರು- ಕೊಡಗು ಮತ್ತು ಮಂಡ್ಯ ಲೋಕಸಭಾ ಕ್ಷೇತ್ರದ ಸೋಲಿನ ಬೆನ್ನಲ್ಲೇ ಕೈ ಪಡೆ ಹಾಗೂ ಸಿದ್ದರಾಮಯ್ಯಗೆ ಮತ್ತೊಂದು ಹೀನಾಯ ಪರಾಜಯ ಎದುರಾಯಿತು.

ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಜಿಲ್ಲೆ ವ್ಯಾಪ್ತಿಯ ವಿಧಾನ ಪರಿಷತ್‌ನ ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಮರಿತಿಬ್ಬೇಗೌಡರ ಗೆಲುವಿನ ಸರಪಳಿ ಕಳಚಿತು. ಅಭ್ಯರ್ಥಿ ಬದಲಾದರೂ ಕ್ಷೇತ್ರವನ್ನು ಉಳಿಸಿಕೊಂಡ ಜೆಡಿಎಸ್ ಹ್ಯಾಟ್ರಿಕ್ ಜಯ ದಾಖಲಿಸಿತು.

ಜೂನ್ 3ರಂದು ಚುನಾವಣೆಯಲ್ಲಿ ರಾಜಕೀಯಕ್ಕೆ ಅನನುಭವಿಯಾಗಿರುವ ಜೆಡಿಎಸ್‌ನ ಕೆ. ವಿವೇಕಾನಂದ 10,823 ಮತ ಪಡೆದುಕೊಂಡು ಪ್ರಥಮ ಸ್ಥಾನ ಪಡೆದರು. 25 ವರ್ಷ ಕಾಲ ಈ ಕ್ಷೇತ್ರವನ್ನು ಪ್ರತಿನಿಧಿಸಿ ಮರಿತಿಬ್ಬೇಗೌಡರು ಕೇವಲ 6,201 ಮತ ಪಡೆಯಲು ಮಾತ್ರ ಶಕ್ತ್ಯವಾಗುವ ಮೂಲಕ ಸೋತರು.

ರಸ್ತೆ ಹೆಸರಿಗಾಗಿ ಜಟಾಪಟಿ:

ನಗರದ ಕೆಆರ್‌ಎಸ್ ರಸ್ತೆಗೆ ‘ಸಿದ್ದರಾಮಯ್ಯ ಆರೋಗ್ಯ ಮಾರ್ಗ’ ಹೆಸರು ಇಡುವ ಪ್ರಸ್ತಾವನೆಗೆ ವಿವಾದ ಸ್ವರೂಪ ಪಡೆದುಕೊಂಡಿತು. ಇದಕ್ಕೆ ಬಿಜೆಪಿಯಿಂದ ವಿರೋಧ ವ್ಯಕ್ತವಾದರೆ, ಕಾಂಗ್ರೆಸ್ ಸಮರ್ಥಿಸಿಕೊಂಡಿತು. ಹೀಗಾಗಿ, ಇದು ಪರ-ವಿರೋಧದ ಜಟಾಪಟಿಗೆ ಕಾರಣವಾಯಿತು.

ದಳಕ್ಕೆ ಜಿಟಿಡಿ ಮುನಿಸಿನ ಸಂಕಷ್ಟ:

ಶಾಸಕ ಜಿ.ಟಿ.ದೇವೇಗೌಡರು ಮತ್ತೆ ಪಕ್ಷದೊಂದಿಗೆ ಮುನಿಸಿಕೊಂಡರು. ಸಿದ್ದರಾಮಯ್ಯ ಅವರನ್ನು ಹೊಗಳಿದ ಜಿಟಿಡಿ, ಪರೋಕ್ಷವಾಗಿ ಸಿಎಂ ಮೇಲಿನ ಮುಡಾ ನಿವೇಶನ ಹಂಚಿಕೆಯನ್ನು ಸಮರ್ಥಿಸಿಕೊಂಡರು. ಇದರಿಂದ ಎಚ್.ಡಿ.ಕುಮಾರಸ್ವಾಮಿ ಕೆಂಗಣ್ಣಿಗೆ ಗುರಿಯಾದರು.

ಕಳೆದ ವಿಧಾನಸಭೆಯಲ್ಲಿ ಜಿಲ್ಲೆಯಲ್ಲಿ 2 ಸ್ಥಾನ ಗೆದ್ದಿರುವ ದಳ, ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ. ವಿಧಾನಪರಿಷತ್‌ನ ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಜಯ ಸಾಧಿಸಿದ್ದೇ ಸಮಾಧಾನ.

ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ಗೆ (ಎಂಸಿಡಿಸಿಸಿ) ಒಂದು ವರ್ಷವಾದರೂ ಚುನಾವಣೆ ನಡೆದಿಲ್ಲ. ಅಧಿಕಾರಿಗಳ ದರ್ಬಾರ್ ಮುಂದುವರಿದಿದೆ. ಕಳೆದ 2023ರ ನವೆಂಬರ್ 17ರಂದು ಆಡಳಿತ ಮಂಡಳಿ ಅವಧಿ ಮುಕ್ತಾಯಗೊಂಡಿದೆ. ಚುನಾಯಿತರಿಲ್ಲದ ಕಾರಣಕ್ಕೆ ಅಧಿಕಾರಿಗಳ ಮೂಲಕ ಸರ್ಕಾರವು ಬ್ಯಾಂಕ್‌ನ ಆಡಳಿತದ ಮೇಲೆ ಹಿಡಿತ ಸಾಧಿಸಿಕೊಂಡಿದ್ದು, ಇದರಿಂದ ಶಾಸಕ ಜಿ.ಟಿ.ದೇವೇಗೌಡರಿಗೆ ಹಿನ್ನಡೆಯಾಗಿದೆ.

ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳಿಗೂ ಚುನಾವಣೆ ನಡೆದಿಲ್ಲ. ಕಳೆದ ನಾಲ್ಕೈದು ವರ್ಷಗಳ ಹಿಂದೆ ರಚನೆಯಾಗಿರುವ ನಗರದ ಹೊರ ವಲಯದ ಹೂಟಗಳ್ಳಿ ನಗರಸಭೆ, ಶ್ರೀರಾಂಪುರ, ರಮ್ಮನಹಳ್ಳಿ ಸೇರಿದಂತೆ ಇತರ ಪುರಸಭೆಗಳ ಎಲೆಕ್ಷನ್‌ಗೂ ಕಾಲ ಕೂಡಿ ಬಂದಿಲ್ಲ. ಅಲ್ಲದೆ, ಮೈಸೂರು ಮಹಾನಗರ ಪಾಲಿಕೆಗೂ ಮೇಯರ್ ಸೇರಿದಂತೆ ಕಾರ್ಪೋರೇಟರ್‌ಗಳಿಲ್ಲ. ಹೀಗಾಗಿ, ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರಿಗಳ ಕಾರುಬಾರು ನಡೆಯುತ್ತಿದೆ. ಜನರ ಸಮಸ್ಯೆ ಕೇಳುವವರಿಲ್ಲದಂತಾಗಿದೆ.

ನೈಟ್‌ಲೈಫ್ ಜಾರಿಗೆ ಬಂದಿಲ್ಲ:

ಕರೊನಾದಿಂದ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದ ಮೈಸೂರು ಪ್ರವಾಸೋದ್ಯಮವು ಪ್ರಸ್ತಕ ಸಾಲಿನಲ್ಲಿ ಚೇತರಿಸಿಕೊಂಡಿದೆ. ದಸರಾ, ದೀಪಾವಳಿ, ಕ್ರಿಸ್‌ಮಸ್, ವರ್ಷಾಚರಣೆ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ನಗರಕ್ಕೆ ಭೇಟಿ ನೀಡಿ ಪ್ರವಾಸೋದ್ಯಮಕ್ಕೆ ಜೀವತುಂಬಿದ್ದಾರೆ. ಆದರೆ, ರಾತ್ರಿ 11ರ ವರೆಗೆ ವ್ಯಾಪಾರ ವಹಿವಾಟು ನಡೆಸುವ ‘ನೈಟ್ ಲೈಫ್’ ಇನ್ನೂ ಜಾರಿಗೆ ಬಂದಿಲ್ಲ. ನಗರದ ಪ್ರವಾಸಿ ಕೇಂದ್ರಗಳಿಗೆ ಸಿಂಗಲ್ ಟಿಕೆಟ್ ವ್ಯವಸ್ಥೆಯೂ ದಸರಾ ಸೇರಿದಂತೆ ಉಳಿದ ಸಂದರ್ಭದಲ್ಲೂ ಅನುಷ್ಠಾನಕ್ಕೆ ಬಂದಿಲ್ಲ.

ಪ್ರಜ್ವಲಿಸಿದ ಮೈಸೂರಿನ ಕೀರ್ತಿ:

ಅಯೋಧ್ಯೆ ರಾಮಮಂದಿರದಲ್ಲಿ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಮೈಸೂರಿನ ಕೀರ್ತಿ ಪ್ರಜ್ವಲಿಸಿತು. ರಾಮಲಲ್ಲಾ ಮೂರ್ತಿ ಕೆತ್ತಲು ಬಳಸಿರುವ ಕಲ್ಲು ಮೈಸೂರು ಸಮೀಪದ ಹಾರೋಹಳ್ಳಿಯದ್ದು. ವಿಗ್ರಹ ಕೆತ್ತಿರುವ ಶಿಲ್ಪಿ ಸಹ ಮೈಸೂರಿನ ಅರುಣ್ ಯೋಗಿರಾಜ್. ಇದು ನಗರಕ್ಕೆ ಹೆಮ್ಮೆಯ ಸಂಗತಿ ಎನಿಸಿತು. ಜತೆಗೆ, ಅಯೋಧ್ಯೆಯ ಬಾಲರಾಮನ ಮೂರ್ತಿ ಕೆತ್ತನೆಗೆ ಕೃಷ್ಣಶಿಲೆ ದೊರೆತ ಮೈಸೂರು ತಾಲೂಕಿನ ಹಾರೋಹಳ್ಳಿ ಗ್ರಾಮದ ರಾಮದಾಸ್ ಅವರ ಜಮೀನಿನಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.

ಮೈವಿವಿ ಖಾಲಿ ಖಾಲಿ...!

ಈ ಸಲವೂ ಉಪನ್ಯಾಸಕರ ನೇಮಕಾತಿ ಆಗಲಿಲ್ಲ. ಇದರಿಂದ ಶೇ.45ರಷ್ಟು ಬೋಧಕರ ಹುದ್ದೆಗಳು ಖಾಲಿಯಾಗಿವೆ. ಇದರಿಂದ ರಾಷ್ಟ್ರಮಟ್ಟದ ರ‌್ಯಾಂಕಿಂಗ್‌ನಲ್ಲಿ ಮೈವಿವಿ ಮತ್ತೆ ಕುಸಿದಿದೆ. ಏಪ್ರಿಲ್ 3ರಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಸೇರಿದಂತೆ ಮೂವರಿಗೆ ಮೈಸೂರು ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪ್ರದಾನ ಮಾಡಿತು.

ವಿಶ್ವವಿಖ್ಯಾತ ಜಂಬೂ ಸವಾರಿ ವೈಭವ

ಈ ಸಲವೂ ದಸರಾ ಮಹೋತ್ಸವದ ಭವ್ಯತೆಗೆ ಮೈಸೂರು ಸಾಕ್ಷಿಯಾಯಿತು. ಅಕ್ಟೋಬರ್ 3ರಂದು ದಸರೆಯನ್ನು ಹಿರಿಯ ಸಾಹಿತಿ, ನಾಡೋಜ ಡಾ.ಹಂಪ ನಾಗರಾಜಯ್ಯ ಉದ್ಘಾಟಿಸಿದರು. ಅ.12ರಂದು ವಿಶ್ವವಿಖ್ಯಾತ ಜಂಬೂ ಸವಾರಿ ವೈಭವದಿಂದ ಜರುಗಿತು. ಚಿನ್ನದ ಅಂಬಾರಿ ಹೊತ್ತು ಸಾಗಿದ ಕ್ಯಾಪ್ಟನ್ ಅಭಿಮನ್ಯು ಆನೆ ಎಲ್ಲರ ಗಮನ ಸೆಳೆದನು.

ಕಾಂಗ್ರೆಸ್ ಶಕ್ತಿ ಪ್ರದರ್ಶನ

ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಮೈಸೂರಿನಲ್ಲಿ ಆಗಸ್ಟ್ 9ರಂದು ಆಯೋಜಿಸಿದ್ದ ಜನಾಂದೋಲನ ಸಮಾವೇಶ ಕಾಂಗ್ರೆಸ್ ಶಕ್ತಿ ಪ್ರದರ್ಶನದೊಂದಿಗೆ ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್ ವಿರುದ್ಧದ ಹೋರಾಟಕ್ಕೆ ತಿರುಗೇಟು ನೀಡಲಾಯಿತು.

ಮುಡಾ ಹಗರಣ, ವಾಲ್ಮೀಕಿ ನಿಗಮ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ರಾಜೀನಾಮೆ ಒತ್ತಾಯಿಸಿ, ಉಭಯ ಪ್ರಕರಣಗಳನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿದ ಮೈತ್ರಿ ಪಕ್ಷಗಳ ವಿರುದ್ಧ ಕೈ ಪಡೆ ತೊಡೆತಟ್ಟಿ ಅಬ್ಬರಿಸಲಾಯಿತು. ಮತ್ತೊಂದೆಡೆ, ಸಿಎಂ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ, ಜೆಡಿಎಸ್ ಮೈತ್ರಿ ಕೂಟದ ಪಾದಯಾತ್ರೆ ನಗರದಲ್ಲೇ ಸಮಾವೇಶದೊಂದಿಗೆ ಮುಕ್ತಾಯಗೊಂಡಿತು.

ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಟಾರ್ಗೆಟ್ ವಿಫಲ:

ಈ ಸಲ ಜಿಲ್ಲೆ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಹೆಚ್ಚಿನ ಸುಧಾರಣೆ ಕಂಡಿತು. ಜಿಲ್ಲೆಯು ರಾಜ್ಯಮಟ್ಟದಲ್ಲಿ 19ನೇ ಸ್ಥಾನದಿಂದ 7ನೇ ಸ್ಥಾನಕ್ಕೆ ಜಿಗಿಯಿತು. ರಾಜ್ಯದ ಅಗ್ರ 5 ಸ್ಥಾನದೊಳಗೆ ಪಡೆಯಲು ಆಗಲಿಲ್ಲ. ಆದರೆ, ಗುರಿ ಹತ್ತಿರ ಬಂದಿದ್ದು ಸಮಾಧಾನ ತಂದಿತು.

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮೈಸೂರು ಜಿಲ್ಲೆ 17ನೇ ಸ್ಥಾನಕ್ಕೆ ಕುಸಿದಿದ್ದರೂ ಉತ್ತೀರ್ಣರಾದವರ ಸಂಖ್ಯೆ ಏರಿಕೆಯಾಗಿ ಫಲಿತಾಂಶದಲ್ಲಿ ಸಾಧನೆ ಕಂಡಿತು. ಕಳೆದ ಸಾಲಿನಲ್ಲಿ ಜಿಲ್ಲೆ 13ನೇ ಸ್ಥಾನದಲ್ಲಿದ್ದರೂ ಶೇ.79.89 ಫಲಿತಾಂಶ ಬಂದಿತ್ತು. ಆದರೆ, ಪ್ರಸ್ತಕ ಸಾಲಿನಲ್ಲಿ ಟಾಪ್‌ಟೆನ್ ಸ್ಥಾನ ಪಡೆಯಬೇಕು ಎಂಬ ಗುರಿಹೊಂದಿದ್ದ ಜಿಲ್ಲೆಯಲ್ಲಿ ಶೇ.83.13ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾದರು

ಮಹನೀಯರ ನಿಧನ

ವಿವಿಧ ಮಹನೀಯರು ವಿಧಿವಶರಾದರು. ಜೂನ್ 11ರಂದು ವಿಶ್ವಮಾನ್ಯ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ, ಹಿರಿಯ ರಾಜಕಾರಣಿ ವಿ.ಶ್ರೀನಿವಾಸ್ ಪ್ರಸಾದ್ ಇಹಲೋಕ ತ್ಯಜಿಸಿದವರಲ್ಲಿ ಪ್ರಮುಖರು

* ಆದಿವಾಸಿಗಳ ಪರ ಹೋರಾಟಗಾರ ಎಚ್.ಡಿ. ಕೋಟೆಯ ಜೇನುಕುರುಬ ಬುಡಕಟ್ಟು ಸಮುದಾಯದ ಸೆ ಮಣ್ಣ ಅವರಿಗೆ ಕೇಂದ್ರ ಸರ್ಕಾರದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಭಾಜನ.* ಅಶೋಕಪುರಂ ರೈಲು ನಿಲ್ದಾಣದಲ್ಲಿ ಮೂಲಸೌಕರ್ಯ ಸೌಲಭ್ಯ ನವೀಕರಿಸಿ, ಮಾ.4ರಂದು ಸಾರ್ವಜನಿಕರ ಬಳಕೆಗೆ ಮುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net