

ದೇವದುರ್ಗ: ಸಮಾಜ ಮುನ್ನಡೆಸುವಲ್ಲಿ ಶಿಕ್ಷಕರ ಪಾತ್ರ ದೊಡ್ಡದಾಗಿದೆ. ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸುವುದರೊಂದಿಗೆ ಸಂಸ್ಕಾರ ನೀಡಿ ಉತ್ತಮ ಪ್ರಜೆಗಳಾಗಿ ರೂಪಿಸುವಲ್ಲಿ ಬೋಧಕರ ಪಾತ್ರ ಅನನ್ಯವಾಗಿದೆ ಎಂದು ಶಾಸಕಿ ಕರೆಮ್ಮ ಜಿ.ನಾಯಕ ಹೇಳಿದರು.
ಹೂವಿನಹೆಡಗಿ ಗಡ್ಡೆಗೂಳಿ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಜಿಪಂ, ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಇಲಾಖೆಯಿಂದ ಹಮ್ಮಿಕೊಂಡಿದ್ದ ಗುರು ನಮನ ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಶನಿವಾರ ಮಾತನಾಡಿದರು. ಪ್ರತಿಯೊಬ್ಬರ ಸಾಧನೆ ಹಿಂದೆ ಶಿಕ್ಷಕರ ಪಾತ್ರ ಇದ್ದೇ ಇರುತ್ತದೆ. ನಮ್ಮ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಶಿಕ್ಷಕರು ತುಂಬ ಪರಿಶ್ರಮ ಪಟ್ಟಿರುತ್ತಾರೆ ಎಂದರು.
ದೇವದುರ್ಗ ತಾಲೂಕು ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿರಬಹುದು. ಆದರೆ, ಶೈಕ್ಷಣಿಕವಾಗಿ ಮುಂದುವರಿಯುತ್ತಿರುವ ತಾಲೂಕು ಆಗಿದೆ. ಎರಡ್ಮೂರು ವರ್ಷಗಳ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಫಲಿತಾಂಶದಲ್ಲಿ ತಾಲೂಕು ಜಿಲ್ಲೆಯಲ್ಲೇ ಉತ್ತಮ ಸ್ಥಿತಿಯಲ್ಲಿದೆ. ತಾಲೂಕಿನಲ್ಲಿ ಶಿಕ್ಷಕರ ಕೊರತೆ ತೀವ್ರವಾಗಿದೆ. ಹೀಗಾಗಿ ವರ್ಗಾವಣೆಗೊಂಡಿರುವ ಶಿಕ್ಷಕರು ಮಾರ್ಚ್‌ವರೆಗೆ ಶಾಲೆಯಿಂದ ಬಿಡುಗಡೆ ಆಗಬಾರದು. ಪಾಲಕರು ಶಿಕ್ಷಕರನ್ನು ನಂಬಿ ಶಾಲೆಗೆ ಮಕ್ಕಳನ್ನು ದಾಖಲು ಮಾಡಿದ್ದಾರೆ. ವಿದ್ಯಾರ್ಥಿಗಳನ್ನು ಮಧ್ಯದಲ್ಲಿ ಯಾವುದೇ ಕಾರಣಕ್ಕೂ ಕೈಬಿಡಬಾರದು ಎಂದು ಶಾಸಕಿ ಮನವಿ ಮಾಡಿದರು.
ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಲ್ಲನಗೌಡ ಗುಂಡಗುರ್ತಿ ಮಾತನಾಡಿ, ತಾಲೂಕಿನ ಶಿಕ್ಷಕರ ಮೇಲೆ ಬಹಳಷ್ಟು ಜವಾಬ್ದಾರಿಯಿದ್ದು, ಹಿಂದುಳಿದ ತಾಲೂಕು ಎನ್ನುವ ಹಣೆಪಟ್ಟಿ ಅಳಿಸಲು ಶ್ರಮಿಸಬೇಕು. ವಿದ್ಯಾರ್ಥಿಗಳನ್ನು ಮಕ್ಕಳಂತೆ ಭಾವಿಸಿ ಬೋಧನೆ ಮಾಡುವ ಜತೆಗೆ ಉತ್ತಮ ಸಂಸ್ಕಾರ ಕಲಿಸಬೇಕು. ಮಕ್ಕಳ ಭವಿಷ್ಯ ಶಾಲೆಗಳಲ್ಲಿ ಅಡಗಿದ್ದು, ಇದನ್ನು ಶಿಕ್ಷಕರು ಅರಿತುಕೊಳ್ಳಬೇಕು ಎಂದರು.
ಸಾಹಿತಿ ಮಂಡಲಗಿರಿ ಪ್ರಸನ್ನ ಉಪನ್ಯಾಸ ನೀಡಿದರು. ಪ್ರಾಥಮಿಕ, ಪ್ರೌಢ ಶಾಲೆಯ ಶಿಕ್ಷಕರು, ಅತಿಥಿ ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಹಾಗೂ ನಿವೃತ್ತರನ್ನು ಗೌರವಿಸಲಾಯಿತು. ಟಿಎಪಿಸಿಎಂಎಸ್ ಅಧ್ಯಕ್ಷ ಶರಣಗೌಡ ಕಮತಿಗಿ, ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ, ತಾಪಂ ಇಒ ರಾಮರೆಡ್ಡಿ ಪಾಟೀಲ್, ನೌಕರರ ಸಂಘದ ತಾಲೂಕು ಅಧ್ಯಕ್ಷ ಹನುಮಂತ್ರಾಯ ಶಾಖೆ, ನೇಮಣ್ಣ, ವಿರೂಪನಗೌಡ, ಬಾಲಪ್ಪ ಬಾವಿಮನಿ, ವಿಶ್ವನಾಥ ಮಾ.ಪಾ., ಆದನಗೌಡ, ಸುರೇಶ ಕಟ್ಟಿಮನಿ, ಬಂದೋಲಿಸಾಬ್, ಎಂ.ವಿ.ಕವಡಿಮಠ, ಶಿವರಾಜ ಪೂಜಾರಿ, ಎಚ್.ಶಿವರಾಜ ಇತರರಿದ್ದರು.