2023-24ನೇ ಸಾಲಿನ ಬಜೆಟ್ ಮಂಡನೆ

2023-24ನೇ ಸಾಲಿನ ಬಜೆಟ್ ಮಂಡನೆ
Published on


ಚನ್ನರಾಯಪಟ್ಟಣ: ಪುರಸಭೆ ಅಧ್ಯಕ್ಷೆ ರೇಖಾ ಅನಿಲ್ ಅವರು 2023-24ನೇ ಸಾಲಿಗೆ ಅಯ್ಯ-ವ್ಯಯ ಅಂದಾಜು ಪಟ್ಟಿಯೊಂದಿಗೆ 95.5 ಲಕ್ಷ ರೂ. ಉಳಿತಾಯ ಬಜೆಟ್‌ನ್ನು ಸಭೆಯಲ್ಲಿ ಮಂಡಿಸಿದರು.


ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಬಜೆಟ್ ಸಭೆಯಲ್ಲಿ, 2023-24ನೇ ಸಾಲಿಗೆ ನಿರೀಕ್ಷಿತ ಆದಾಯದ ಮೂಲಗಳಾದ ಸರ್ಕಾರದ ವಿವಿಧ ಅನುದಾನಗಳು ಹಾಗೂ ಪುರಸಭೆ ಮೂಲಗಳಿಂದ ಬರುವ ಆದಾಯದ ಮಾಹಿತಿ ನೀಡಿದರು.
ಅಸಾಮಾನ್ಯ ಜಮೆಗಳು ಮತ್ತು ಪ್ರಾರಂಭ ಶುಲ್ಕ ಸೇರಿದಂತೆ ನಿರೀಕ್ಷಿತ ರಾಜಸ್ವ ಖಾತೆ, ಬಂಡವಾಳ ಖಾತೆ ಹಾಗೂ ಅಸಾಮಾನ್ಯ ಖಾತೆಗಳ ಸಹಾಯದಿಂದ 53.64 ಕೋಟಿ ರೂ. ಜಮೆ ಆಗಲಿದೆ ಎಂದು ಹೇಳಿದರು.


ರಾಜಸ್ವ ಖಾತೆ ವೆಚ್ಚ, ಬಂಡವಾಳ ಖಾತೆ ವೆಚ್ಚ, ಅಸಾಮಾನ್ಯ ಖಾತೆ ವೆಚ್ಚಗಳಿಗಾಗಿ 52.69 ಕೋಟಿ ರೂ. ವ್ಯಯಿಸಿ ಒಟ್ಟಾರೆ 95.9 ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಲಾಗಿದೆ. ಇದೇ ವೇಳೆ ಕಳೆದ ಸಾಲಿನ 2022-23ನೇ ಸಾಲಿನ ಬಜೆಟ್‌ನ್ನು ಪರಿಶೀಲಿಸಿ ಅನುಮೋದನೆ ಪಡೆಯುವ ವೇಳೆ ನಾಮಿನಿ ಸದಸ್ಯ ನಂಜುಂಡ ಮೈಮ್ ಕಳೆದ ಬಾರಿಯಲ್ಲಿ ಘೋಷಣೆಯಾದ ಕಾಮಗಾರಿಗಳಲ್ಲಿ ಎಷ್ಟು ಪೂರ್ಣಗೊಂಡಿವೆ ಎಂದು ಪ್ರಶ್ನಸಿದರು.


ಶೇ.80 ರಷ್ಟು ಘೋಷಿಸಿದ ಕಾರ್ಯಕ್ರಮಗಳು ಆಗಿರುವುದಾಗಿ ತಿಳಿಸಿದರೂ, ನಂಜುಂಡ ಮೈಮ್‌ರವರ ಒತ್ತಾಯದ ಮೇರೆಗೆ ಕಳೆದ ಸಾಲಿನ ಬಜೆಟ್‌ನ ಅಯ್ಯ-ವ್ಯಯವನ್ನು ಸಭೆಯಲ್ಲಿ ಮಂಡಿಸಿ ಅರ್ಥೈಸಲಾಯಿತ್ತು.


ಇಂದೇ ಸಾಮಾನ್ಯ ಸಭೆ ಕರೆಯಲಾಗಿದ್ದು, ಮುಂದುವರಿದಂತೆ ಸಾಮಾನ್ಯ ಸಭೆ ನಡೆಸಲು ಸದಸ್ಯರು ಒಪ್ಪಿಗೆ ನೀಡಬೇಕೆಂದು ಅಧ್ಯಕ್ಷರು ಕೋರಿದರು. ಆಗ ಆಡಳಿತ ಪಕ್ಷದ ಸದಸ್ಯ ಮೋಹನ್ ಸಭೆ ನಡೆಸಲು ಆಕ್ಷೇಪ ವ್ಯಕ್ತಪಡಿಸಿದರು.


ಸದಸ್ಯರಿಂದ ಅಜೆಂಡಾಕ್ಕಾಗಿ ವಿಷಯಗಳನ್ನೆ ಪಡೆಯದೇ ಏಕಾಏಕಿ ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗಳು ಕೆಲ ಅಭಿವೃದ್ಧಿ ಕಾಮಗಾರಿಗಳಿಗೆ ಅನುಮೋದನೆ ಪಡೆಯಲಿಕ್ಕಷ್ಟೆ ಸಭೆ ಕರೆದಿರುವುದು ಸದಸ್ಯರ ಹಕ್ಕನ್ನು ಹತ್ತಿಕ್ಕುವ ಕೆಲಸವಾಗುತ್ತಿದೆ. ಸಭೆಯನ್ನು ರದ್ದುಪಡಿಸಿ ಇನ್ನೊಂದು ದಿನ ಸಭೆ ನಡೆಸುವಂತೆ ಆಗ್ರಹಿಸಿದರು.


ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಸಿ.ಎನ್.ಶಶಿಧರ್ ಅಧ್ಯಕ್ಷರ ವಾರ್ಡ್‌ಗೆ ಸಂಬಂಧಿಸಿದ ವಿಷಯಗಳನ್ನಷ್ಟೆ ಅಜೆಂಡಾದಲ್ಲಿ ತಂದಿದ್ದು ನಾವುಗಳು ಮಾಡಿದ ಪಾಪವಾದರೇನು?. ನಾವು ನಮ್ಮ ಮನೆಗೆ ಲೈಟ್ ಹಾಗೂ ರಸ್ತೆ ಕೇಳುತ್ತಿಲ್ಲ. ಸಾರ್ವಜನಿಕರಿಗಾಗಿ ಕೇಳುತ್ತಿರುವುದು, ನಮ್ಮಿಂದ ವಿಷಯಗಳನ್ನು ಏಕೆ ಪಡೆದಿಲ್ಲ ಎಂದು ಅಧಿಕಾರಿಗಳನ್ನು ಕೇಳಿದರೇ, ಅಧ್ಯಕ್ಷರು ಯಾರಿಂದಲ್ಲೂ ವಿಷಯ ಪಡೆಯುವುದು ಬೇಡ, ಹಳೆ ವಿಷಯಗಳೇ ಪುನಾರವರ್ತನೆಯಾಗುತ್ತವೆ ಎನ್ನುತ್ತಾರೆ, ನಾವುಗಳು ಸಭೆಗೆ ಬಿಸ್ಕೆಟ್ ತಿನ್ನಲು ಬರಬೇಕೆ, ಅಧ್ಯಕ್ಷರು ಹೊಸಬರು, ಅವರಿಗೆ ತಿಳಿದಿಲ್ಲ ಎನ್ನುವುದಾದರೇ ಮುಖ್ಯಾಧಿಕಾರಿಗಳು ಏನು ಮಾಡುತ್ತಿದ್ದಾರೆ. ನೀವೆ ಸದಸ್ಯರಾಗಲು ಹೊರಟಿದ್ದೀರಾ ಎಂದು ಖಾರವಾಗಿ ಪ್ರಶ್ನಿಸಿದರು.


ಅಂತಿಮವಾಗಿ ಕೆಲ ಸದಸ್ಯರು ಅಸಮಾನಿತರನ್ನು ಮನವೊಲಿಸಿ ಸಭೆ ನಡೆಯಲು ಅನುವು ಮಾಡಿಕೊಟ್ಟರು. ಸಭೆ ಮುಂದುವರಿದು ಬಜೆಟ್ ಮಂಡಣೆ ಮಾಡಲಾಯಿತು. ಉಪಾಧ್ಯಕ್ಷೆ ಲಕ್ಷ್ಮಿ, ಮುಖ್ಯಾಧಿಕಾರಿ ಹೇಮಂತ್‌ಕುಮಾರ್ ಹಾಗೂ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net